ನಾಯಕನಹಟ್ಟಿ: ಪಟ್ಟಣ ಪಂಚಾಯಿತಿಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಭಿಯಾನದಲ್ಲಿ ಕಾರ್ಯನಿರ್ವಹಿಸಲು ಇಬ್ಬರು ಮಹಿಳೆಯರಿಂದ ಹಣ ಪಡೆದು ನೇಮಕ ಮಾಡಿಕೊಳ್ಳಲಾಗಿದೆ ಎಂದು 14ನೇ ವಾರ್ಡ್ ಸದಸ್ಯ ಎನ್.ಮಹಾಂತಣ್ಣ ಆರೋಪಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು.
ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಭಿಯಾನದ ಮೂಲಕ ನಗರ ಬಡತನ ನಿರ್ಮೂಲನೆ ಮಾಡಲು ಸಂಘ–ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಇಬ್ಬರು ಮಹಿಳಾ ಕಾರ್ಯಕರ್ತೆಯರ ಅಗತ್ಯವಿತ್ತು. ಪ್ರಸ್ತುತ ಆಯ್ಕೆಯಾಗಿರುವ ಮಹಿಳಾ ಕಾರ್ಯಕರ್ತೆಯರಿಂದ ತಲಾ ₹3 ಲಕ್ಷ ಹಣ ಪಡೆದು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಎಂದು ದೂರಿದರು.
ಅವರನ್ನು ಆಯ್ಕೆ ಮಾಡಿಕೊಳ್ಳಲು ಅನುಸರಿಸಿದ ನಿಯಮಗಳೇನು? ಈ ಬಗ್ಗೆ ಯಾಕೆ ಸದಸ್ಯರ ಗಮನಕ್ಕೆ ತಂದಿಲ್ಲ. ಯಾವ ಸಭೆಯಲ್ಲೂ ಚರ್ಚಿಸದೇ ಸದ್ದಿಲ್ಲದೆ ತರಾತುರಿಯಲ್ಲಿ ನೇಮಕ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಅವರ ನೇಮಕವನ್ನು ತಕ್ಷಣದಿಂದ ತಡೆಹಿಡಿದು ಮುಂದಿನ ಸಭೆಯಲ್ಲಿ ನೇಮಕಾತಿ ವಿಷಯ ಪ್ರಸ್ತಾಪಿಸಿ ಸರ್ವ ಸದಸ್ಯರ ಒಪ್ಪಿಗೆ ಪಡೆಯಬೇಕು. ಹಾಗೇ ಅಧಿಕಾರಿಗಳು ಯಾವುದೇ ಹಣಪಾವತಿ ಬಿಲ್‌ಗಳನ್ನು ನೀಡುವಾಗ ಸದಸ್ಯರ ಗಮನಕ್ಕೆ ತರಬೇಕು ಎಂದರು. ಇದಕ್ಕೆ ಹಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು.
12ನೇ ವಾರ್ಡ್ ಸದಸ್ಯ ತಿಪ್ಪೇಶ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಪಟ್ಟಣ ಪಂಚಾಯಿತಿಗೆ ಸೇರಿದ ವಾಣಿಜ್ಯ ಮಳಿಗೆಗಳು ಶಿಥಿಲಾವಸ್ಥೆ ತಲುಪಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದರು.
ಹಲವು ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಸೇರಿದ ಕೊಳವೆಬಾವಿಗಳಲ್ಲಿ ಬಳಕೆಯಾಗಿದ್ದ ಮೋಟರ್‌ಗಳು, ಪಂಪ್‌ಗಳು, ಪೈಪ್‌ಗಳು ಕಣ್ಮರೆಯಾಗಿವೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಅಧ್ಯಕ್ಷೆ ಟಿ.ಮಂಜುಳಾ, 2016ರಿಂದ ಇಲ್ಲಿಯವರೆಗೂ ತನಿಖೆ ನಡೆಸಲಾಗುವುದು ಎಂದರು.
7ನೇ ವಾರ್ಡ್ ಸದಸ್ಯ ಸೈಯದ್ ಅನ್ವರ್, ಪಟ್ಟಣ ಪಂಚಾಯಿತಿಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಸೇರಿಸಿ ಆಸ್ತಿಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಚನ್ನಬಸಯ್ಯನಹಟ್ಟಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ 3 ವರ್ಷಗಳಿಂದ ವಿಷಯ ಪ್ರಸ್ತಾಪಿಸಿದರೂ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ ಎಂದು 3ನೇ ವಾರ್ಡ್ ಸದಸ್ಯೆ ಮಹೇಶ್ವರಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಸ್ಥಾಪನೆಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು 10ನೇ ವಾರ್ಡ್ ಸದಸ್ಯೆ ಸರ್ವಮಂಗಳ ವಿಷಯ ಮಂಡಿಸಿದರು.
ಇದೇ ವೇಳೆ ಉಪಾಧ್ಯಕ್ಷೆ ಪಿ.ಬೋಸಮ್ಮ, ಸದಸ್ಯರಾದ ಎಂ.ಟಿ.ಮಂಜುನಾಥ, ಕೆ.ಪಿ.ತಿಪ್ಪೇಸ್ವಾಮಿ, ಗುರುಶಾಂತಮ್ಮ, ಸುನಿತಾ, ಈರಮ್ಮ, ಪಾಪಮ್ಮ, ಬಿ.ವಿನುತಾ, ಪಿ.ಓಬಯ್ಯ ಇದ್ದರು.
ಅನುದಾನದ ಕೊರತೆ ಬಹುತೇಕ ಸದಸ್ಯರು
ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸಿ.ಸಿ. ರಸ್ತೆ ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಅಜೆಂಡಾದಲ್ಲಿ ಪ್ರಸ್ತಾಪಿಸಿದರು. ಆದರೆ ಅನುದಾನದ ಕೊರತೆ ಕಾರಣಕ್ಕೆ ಯಾವ ಕಾಮಗಾರಿಗಳಿಗೂ ಅನುಮೋದನೆ ದೊರೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.