ADVERTISEMENT

ಕಲ್ಲುಕ್ವಾರಿ ಮೇಲೆ ನಿಗಾಕ್ಕೆ ತಾಕೀತು

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 13:17 IST
Last Updated 23 ಫೆಬ್ರುವರಿ 2021, 13:17 IST
ಕವಿತಾ ಎಸ್‌.ಮನ್ನಿಕೇರಿ
ಕವಿತಾ ಎಸ್‌.ಮನ್ನಿಕೇರಿ   

ಚಿತ್ರದುರ್ಗ: ಶಿವಮೊಗ್ಗದ ಹುಣಸೋಡು ಮಾದರಿಯಲ್ಲಿ ಚಿಕ್ಕಬಳ್ಳಾಪುರದಲ್ಲೂ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟಗೊಂಡಿದೆ. ಹೀಗಾಗಿ, ಜಿಲ್ಲಾ ವ್ಯಾಪ್ತಿಯಲ್ಲಿನ ಕಲ್ಲು ಕ್ವಾರಿಗಳ ಮೇಲೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಹಶೀಲ್ದಾರ್‌ಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲಾ ವ್ಯಾಪ್ತಿಯಲ್ಲಿನ ಕಲ್ಲು ಕ್ವಾರಿಗಳನ್ನು ಪರಿಶೀಲನೆ ಮಾಡಬೇಕು. ಕಣ್ಣುತಪ್ಪಿಸಿ ಸ್ಫೋಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ವಿಫಲವಾದ ಕೊಳವೆಬಾವಿಗಳು ತೆರೆದ ಸ್ಥಿತಿಯಲ್ಲಿ ಇರದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳದು. ವಿಫಲವಾದ ಕೊಳವೆಬಾವಿಗಳನ್ನು ಮುಚ್ಚಿಸುವಂತೆ ಜನರಿಗೆ ಸೂಚನೆ ನೀಡಬೇಕು. ಅನಾಹುತಕ್ಕೆ ಆಸ್ಪದವಾಗುವಂತಹ ಕೊಳವೆ ಬಾವಿಗಳು ಕಂಡುಬಂದರೆ ಭೂಮಿಯ ಮಾಲೀಕರು ಹಾಗೂ ಬಾವಿ ಕೊರೆದ ರಿಗ್ ಮಾಲಿಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬೇಸಿಗೆ ಬಿಸಿಲಿನ ತೀವ್ರತೆ ಅಧಿಕವಾಗುತ್ತಿದೆ. ನರೇಗಾ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಕಾಮಗಾರಿಗಳ ಸ್ಥಳದಲ್ಲಿ ಕಾರ್ಮಿಕರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬಿಸಿಲಿನ ತೀವ್ರತೆಯಿಂದ ತೊಂದರೆ ಅನುಭವಿಸುವವರ ತುರ್ತು ಆರೈಕೆಗಾಗಿ ವೈದ್ಯಕೀಯ ಸೌಲಭ್ಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಕಾಲದಲ್ಲಿ ದೊರೆಯಬೇಕು’ ಎಂದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡಿ, ‘ಉತ್ತಮ ಮಳೆ ಬಿದ್ದಿರುವುದರಿಂದ ಜಾನುವಾರು ಮೇವಿನ ಸಮಸ್ಯೆ ಉದ್ಭವಿಸುವುದಿಲ್ಲ. ಜೂನ್ ತಿಂಗಳವರೆಗೂ ಜಾನುವಾರು ಮೇವು ಲಭ್ಯವಾಗಲಿದೆ. ಮೇವು ಕೊರತೆ ಉಂಟಾಗದಂತೆ ಎಚ್ಚರ ವಹಿಸಲಾಗುವುದು’ ಎಂದು ಹೇಳಿದರು.

‘ನೀರಿನ ಕೊರತೆ ನೀಗಿಸಿ’

ಬೇಸಿಗೆ ಪ್ರಾರಂಭವಾಗಲಿದ್ದು, ನೀರಿನ ಸಮಸ್ಯೆ ಎದುರಿಸುವ ಗ್ರಾಮ, ವಾರ್ಡ್‌ಗಳನ್ನು ಸಮೀಕ್ಷೆ ಮಾಡಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸೂಚಿಸಿದರು.

‘ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಕಂಡುಬಂದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಜನ ಮತ್ತು ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗಬಾರದು. ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯ ಅನುಮತಿ ಪಡೆದು ಕಾರ್ಯಪ್ರವೃತ್ತರಾಗಬೇಕು. ನೀರು ಸರಬರಾಜು ಮಾಡಿದ ಶುಲ್ಕ ಪಾವತಿಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಮರುಕಳುಹಿಸಬಾರದು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿ.ಪ್ರಸನ್ನ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸತೀಶ್‍ರೆಡ್ಡಿ ಇದ್ದರು.

***

ವಿಪತ್ತು ನಿರ್ವಹಣೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕು. ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ವಿಪತ್ತು ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸಬೇಕು.

–ಕವಿತಾ ಎಸ್‌.ಮನ್ನಿಕೇರಿ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.