ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿಯನ್ನು ನಗರದ ಹೃದಯ ಭಾಗದಲ್ಲೇ ನಿರ್ಮಿಸಿ ಕುಂಚಿಗನಾಳ್ ಕಣಿವೆಯಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ನೂತನ ಕಟ್ಟಡಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯನ್ನು ಸ್ಥಳಾಂತರ ಮಾಡುವ ಚರ್ಚೆ ನಾಲ್ಕೈದು ದಿನಗಳಿಂದ ಮುನ್ನೆಲೆಗೆ ಬಂದಿದೆ.
ಹಳೇ ರಾಷ್ಟ್ರೀಯ ಹೆದ್ದಾರಿ ಸಮೀಪದ ಗುಡ್ಡದ ಮೇಲೆ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ₹ 42 ಕೋಟಿ ವೆಚ್ಚ ಮಾಡಲಾಗಿದೆ. 16 ಇಲಾಖೆಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುವ ಸಿದ್ಧತೆಯೂ ನಡೆಯುತ್ತಿದೆ. ಆದರೆ, ನಗರದಿಂದ 2 ಕಿ.ಮೀ ದೂರದಲ್ಲಿರುವ, ಸಾರಿಗೆ ಸೇರಿದಂತೆ ಯಾವ ಮೂಲ ಸೌಲಭ್ಯಗಳೂ ಇಲ್ಲದ ಜಾಗಕ್ಕೆ ಜಿಲ್ಲಾಧಿಕಾರಿ ಸಂಕೀರ್ಣ ಸ್ಥಳಾಂತರ ಮಾಡುವುದು ಬೇಡ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿರುವ ಕಾರಣ ಬದಲಿ ಯೋಜನೆ ರೂಪಿಸುವ ಚಿಂತನೆ ಹೊರಬಂದಿದೆ.
ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದರು. ‘ನಗರದಿಂದ ದೂರವಿರುವ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡರೆ ಗ್ರಾಮೀಣ ಭಾಗದಿಂದ ಬರುವ ಜನರಿಗೆ ತೊಂದರೆಯಾಗುತ್ತದೆ. ಈಗಿನ ಜಿಲ್ಲಾಧಿಕಾರಿ ಕಚೇರಿ, ಡಿಸಿ ನಿವಾಸವನ್ನೊಳಗೊಂಡ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಕುಂಚಿಗನಾಳ್ ಬಳಿಯ ಕಟ್ಟಡವನ್ನು ವೈದ್ಯಕೀಯ ಕಾಲೇಜು ಹಾಗೂ ಹಾಸ್ಟೆಲ್‌ಗೆ ನೀಡಬಹುದು’ ಎಂದು ಶಾಸಕ ಕೆ.ಸಿ.ವೀರೇಂದ್ರ ಪ್ರಸ್ತಾಪ ಮಾಡಿದ್ದರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಇತರ ಶಾಸಕರು ಕೂಡ ಸಹಮತ ವ್ಯಕ್ತಪಡಿಸಿದ್ದರು. ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿರುವ ಕಾರಣ ಜಿಲ್ಲಾಧಿಕಾರಿ ಕಚೇರಿ, ವಿವಿಧ ಇಲಾಖೆಗಳು ನಗರ ವ್ಯಾಪ್ತಿಯಲ್ಲೇ ಉಳಿಯುವ ಆಶಾಭಾವ ಮೂಡಿದೆ. ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲದ ಜಾಗದಲ್ಲಿ ಡಿ.ಸಿ ಕಚೇರಿ ಬೇಕಾ ಎಂದು ವಿವಿಧ ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದರು. ಇದರ ವಿರುದ್ಧ ಹೋರಾಟವನ್ನೂ ನಡೆಸಿದ್ದರು.
ಈಗಿರುವ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ನಿವಾಸ, ಶಾಲಾ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ವಿವಿಧ ಇಲಾಖೆಗಳ ವಸತಿ ಗೃಹಗಳ ಸೇರಿದಂತೆ 20 ಎಕರೆಗೂ ಹೆಚ್ಚು ಜಾಗ ಸಿಗುತ್ತದೆ. ಇದು ನಗರದ ಹೃದಯ ಭಾಗದಲ್ಲೇ ಇರುವ ಕಾರಣ ಬೇರೆ ತಾಲ್ಲೂಕುಗಳಿಂದ ಬರುವ ಜನರು ಕಚೇರಿಗೆ ಬರಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ, ನಿರ್ಮಾಣಗೊಂಡಿರುವ ಕಟ್ಟಡದ ಬಗ್ಗೆ ಸಚಿವರು, ಶಾಸಕರಿಗೆ ಅಸಮಾಧಾನವಿದೆ. ಈಚೆಗೆ ಕಂದಾಯ ಸಚಿವ ಕೃಷ್ಣೇಭೈರೇಗೌಡ ಕೂಡ ಜಾಗ ನೋಡಿ ‘ಜನರು ಇಲ್ಲಿಗೆ ಹೇಗೆ ಬರುತ್ತಾರೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.
‘ಕುಂಚಿಗನಾಳ್ ಕಣಿವೆಗೆ ಆಟೊದಲ್ಲಿ ಹೋಗಿ ಬರಲು ₹ 250 ಬೇಕು. ಹೊಸ ಕಟ್ಟಡ ರಸ್ತೆಬದಿಯಲ್ಲೂ ಇಲ್ಲ, ಸ್ವಲ್ಪದೂರ ಬೆಟ್ಟ ಹತ್ತಿ ಹೋಗಬೇಕು. ಬಡ ರೈತರು ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ. ಯಾವ ಸೌಲಭ್ಯವೂ ಇಲ್ಲದ ಜಾಗಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ ಮಾಡುವುದಕ್ಕೆ ನಮ್ಮ ವಿರೋಧವಿದೆ. ನಗರ ವ್ಯಾಪ್ತಿಯಲ್ಲೇ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಗೊಳ್ಳಲಿ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಒತ್ತಾಯಿಸಿದರು.
ಕಿಷ್ಕಿಂದೆಯಾದ ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ಕಾಮಗಾರಿಯೂ ಅಂತಿಮ ಹಂತಕ್ಕೆ ಬಂದಿದೆ. ಜಿಲ್ಲಾಸ್ಪತ್ರೆ ಜಾಗವೇ ಚಿಕ್ಕದಾಗಿದ್ದು ಅಲ್ಲಿ ಕಾಲೇಜು ಹಾಸ್ಟೆಲ್ ಕಟ್ಟಡ ಬಂದರೆ ಜಿಲ್ಲಾಸ್ಪತ್ರೆ ಆವರಣ ಕಿಷ್ಕಿಂದೆಯಾಗುತ್ತದೆ. ಜಿಲ್ಲೆ ಹೊರಜಿಲ್ಲೆಗಳಿಂದ ಬರುವ ರೊಗಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ವೈದ್ಯಕೀಯ ಕಾಲೇಜು ಹೊರವಲಯಕ್ಕೆ ಸ್ಥಳಾಂತರಗೊಳ್ಳುವುದೇ ಒಳ್ಳೆಯದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ‘ದಾವಣಗೆರೆ ವಿವಿ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಆವರಣದಲ್ಲಿ ಮೆಡಿಕಲ್ ಕಾಲೇಜು ನಡೆಯುತ್ತಿದ್ದು ಬೇರೆ ಬೇರೆ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಕುಂಚಿಗನಾಳ್ ಬಳಿಯ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳ್ಳುವ ಬಗ್ಗೆ ನಮಗೆ ಯಾವುದೇ ಸೂಚನೆಯೂ ಇಲ್ಲ. ಸರ್ಕಾರದಿಂದ ಸೂಚನೆ ಬಂದರೆ ನಾವು ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇವೆ’ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಯುವರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.