ADVERTISEMENT

ಹಣಕಾಸು ಸಾಕ್ಷರತೆಗೆ 13 ಹಳ್ಳಿ ದತ್ತು

ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 11:25 IST
Last Updated 7 ಫೆಬ್ರುವರಿ 2020, 11:25 IST
ವಿನೋತ್ ಪ್ರಿಯಾ
ವಿನೋತ್ ಪ್ರಿಯಾ   

ಚಿತ್ರದುರ್ಗ: ‘ಹಣಕಾಸು ಸಾಕ್ಷರತೆ’ ಮೂಡಿಸಲು ಮುಂದಾಗಿರುವ ಜಿಲ್ಲಾಡಳಿತ, ಜನಸ್ಪಂದನ ನಡೆಸಿದ ಗ್ರಾಮಗಳು ಸೇರಿ 13 ಹಳ್ಳಿಗಳನ್ನು ದತ್ತು ಪಡೆದಿದೆ. ಬ್ಯಾಂಕ್‌ ಸೌಲಭ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ಗ್ರಾಮವನ್ನು ಮಾದರಿಯಾಗಿ ರೂಪಿಸಲು ಕಾರ್ಯಪ್ರವೃತ್ತವಾಗಿದೆ.

‘ಗ್ರಾಮೀಣ ಪ್ರದೇಶದ ಜನರಲ್ಲಿ ಹಣಕಾಸು ಸಾಕ್ಷರತೆಯ ಕೊರತೆ ಇರುವುದು ಜನಸ್ಪಂದನದ ವೇಳೆ ಗಮನಕ್ಕೆ ಬಂದಿತ್ತು. ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಹಣಕಾಸು ಸಾಕ್ಷರತೆ ಅಭಿಯಾನಕ್ಕೆ ನಿರ್ಧರಿಸಲಾಗಿದೆ. ದತ್ತು ಪಡೆದ ಗ್ರಾಮಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಬ್ಯಾಂಕು ಹಾಗೂ ಹಣಕಾಸಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿಗೆ ಈ ಹೊಣೆ ನೀಡಲಾಗಿದೆ. ಗ್ರಾಮ ಸಮೀಪದ ರಾಷ್ಟ್ರೀಕೃತ ಬ್ಯಾಂಕುಗಳು ಕೂಡ ಸಾಕ್ಷರತೆ ಮೂಡಿಸಲಿವೆ. ಪ್ರತಿಯೊಬ್ಬರು ಬ್ಯಾಂಕ್‌ ಖಾತೆ ಹೊಂದುವಂತೆ ಉತ್ತೇಜಿಸಲಾಗುತ್ತಿದೆ. ಹಣ ಉಳಿತಾಯ, ಮಿಗುತಾಯ, ಸ್ಥಿರ ಠೇವಣಿ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಬ್ಯಾಂಕ್‌ ಸಿಬ್ಬಂದಿಯೇ ಗ್ರಾಮಕ್ಕೆ ತೆರಳಿ ಅರಿವು ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಚಿತ್ರದುರ್ಗ ತಾಲ್ಲೂಕಿನ ಕೆನ್ನಡಲು ಗ್ರಾಮದಲ್ಲಿ ಜನಸ್ಪಂದನ ನಡೆಸಿದ ಬಳಿಕ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದೆ. ಟೈಲರಿಂಗ್‌ ತರಬೇತಿ ಪಡೆದ ನಾಲ್ವರು ಮಹಿಳೆಯರು ಗಾರ್ಮೆಂಟ್ಸ್‌ನಲ್ಲಿ ಉದ್ಯೋಗ ಪಡೆದಿದ್ದಾರೆ. 25 ಜನರಿಗೆ ಹೊಲಿಗೆ ಯಂತ್ರ ನೀಡಲಾಗಿದೆ. ಪಿಂಚಣಿ ಸೌಲಭ್ಯದಲ್ಲಿ ಉಂಟಾಗುತ್ತಿರುವ ಸಮಸ್ಯೆ ಪತ್ತೆಹಚ್ಚಲಾಗಿದೆ. ಉಪಕರಣ ಸಹಿತ ಸಿಬ್ಬಂದಿಯೇ ಗ್ರಾಮಕ್ಕೆ ಭೇಟಿ ನೀಡಿ ಆಧಾರ್‌ ತಿದ್ದುಪಡಿ ಮಾಡಿದ್ದಾರೆ’ ಎಂದರು.

ಸುಸ್ತಿದಾರರಿಗೂ ಸಾಲ

‘ಪ್ರಕೃತಿ ವಿಕೋಪಕ್ಕೆ ಬೆಳೆನಷ್ಟ ಅನುಭವಿಸಿದ ರೈತರು ಸಾಲ ಮರುಪಾವತಿಗೆ ಕಾಲಾವಕಾಶ ನೀಡುವುದರೊಂದಿಗೆ ಹೊಸ ಸಾಲ ಮಂಜೂರು ಮಾಡಬೇಕು. ಮತ್ತೊಮ್ಮೆ ಬೆಳೆ ಬೆಳೆದು ಸಂಕಷ್ಟದಿಂದ ಪಾರಾಗಲು ರೈತರಿಗೆ ಅನುಕೂಲವಾಗುತ್ತದೆ’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

‘ಬರ ಹಾಗೂ ನೆರೆ ಸಂಕಷ್ಟ ಎದುರಾದಾಗ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲಾಗುತ್ತದೆ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲವಾಗಿ ಬದಲಾವಣೆ ಮಾಡಲಾಗುತ್ತದೆ. ಹೀಗೆ, ಪರಿವರ್ತಿಸಿದ ಬಳಿಕ ಸಂತ್ರಸ್ತರಿಗೆ ಹೊಸ ಸಾಲ ನೀಡಬೇಕು. ಬೆಳೆ ಕೈಸೇರಿದ ಬಳಿಕ ದಲ್ಲಾಳಿಗಳಿಂದ ಸಾಲ ಪಡೆಯುವ ಬದಲು ಬೆಳೆಯನ್ನೇ ಅಡವಿಟ್ಟು ಬ್ಯಾಂಕ್‌ ಸಾಲ ಪಡೆಯಬಹುದು’ ಎಂದು ವಿವರಿಸಿದರು.

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಗೆ (ಪಿ.ಎಂ.ಕಿಸಾನ್‌) ಜಿಲ್ಲೆಯ 1,84,730 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 1,57,167 ರೈತರು ಸಹಾಯಧನ ಹಾಗೂ ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ 27,563 ರೈತರು ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದಾರೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅನ್ವಯ ₹ 3 ಲಕ್ಷದ ವರೆಗೆ ಸಾಲ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

13.6 ಲಕ್ಷ ಮತದಾರರು

‘ಚುನಾವಣಾ ಆಯೋಗದ ಸೂಚನೆಯ ಮೇರೆಗೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ 13,60,688 ಮತದಾರರು ಇದ್ದಾರೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಆರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯಲ್ಲಿ 13,43,207 ಮತದಾರರು ಇದ್ದರು. ಫೆ.7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿನ 1,648 ಮತಗಟ್ಟೆಗಳ ವ್ಯಾಪ್ತಿಯಲ್ಲಿ 6,83,572 ಪುರುಷ ಹಾಗೂ 6,77,029 ಮಹಿಳಾ ಮತದಾರರು ಇದ್ದಾರೆ. 87 ಇತರೆ ವರ್ಗದ ಮತದಾರರಿದ್ದಾರೆ’ ಎಂದರು.

ನಬಾರ್ಡ್‌ವ್ಯವಸ್ಥಾಪಕಿಕವಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.