ಚಿತ್ರದುರ್ಗ: ‘2024-25ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (ಡಿಸಿಸಿ) ₹ 1338.40 ಕೋಟಿ ವ್ಯವಹಾರ ನಡೆಸಿದ್ದು, ₹ 8.3 ಕೋಟಿ ನಿವ್ವಳ ಲಾಭಗಳಿಸಿ ಪ್ರಗತಿಯತ್ತ ಸಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್ ತಿಳಿಸಿದರು.
ಇಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ ಈಚೆಗೆ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಸರ್ಕಾರ ಅಥವಾ ಇನ್ನಾವುದೇ ಮೂಲದಿಂದಾಗಲೀ ಹಣಕಾಸಿನ ಅನುದಾನ ಲಭ್ಯವಾಗಿಲ್ಲ. ಠೇವಣಿ ಸಂಗ್ರಹಣೆ, ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನಿಂದ ಸಾಲ ಪಡೆದು ರೈತರಿಗೆ ಸಾಲ ವಿತರಿಸುತ್ತಿದೆ’ ಎಂದರು.
‘25 ವರ್ಷಗಳ ಹಿಂದೆ ಸರ್ಕಾರದಿಂದ ₹1 ಕೋಟಿ ಷೇರು ಹಣ ಬಂದಿತ್ತು. ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಕೆಲಸವನ್ನು ಬ್ಯಾಂಕ್ ಮಾಡುತ್ತಿದೆ’ ಎಂದು ತಿಳಿಸಿದರು.
‘2025ರ ಮಾರ್ಚ್ 31ರ ಅಂತ್ಯಕ್ಕೆ ₹ 630.68 ಕೋಟಿ ಠೇವಣಿ ಸಂಗ್ರಹಿಸಿದೆ. 2025-26ನೇ ಸಾಲಿಗೆ ₹ 739.68 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.
‘ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದ್ದು, ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ಪ್ರಸ್ತುತ ಸಾಲಿನಲ್ಲಿ ಸದಸ್ಯರಿಗೆ ಶೇ 2 ರಷ್ಟು ಡಿವಿಡೆಂಡ್ ನೀಡಿರುವುದು ಸಂತಸ ತಂದಿದೆ’ ಎಂದು ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ, ಶಾಸಕ ಟಿ.ರಘುಮೂರ್ತಿ ತಿಳಿಸಿದರು.
‘ಶೀಘ್ರದಲ್ಲೇ ಭದ್ರಾ ಮೇಲ್ದಂಡೆ ಯೋಜನೆಯು ಪೂರ್ಣಗೊಳ್ಳಲಿದ್ದು, ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ರೈತರು ತಾವು ಪಡೆದ ಸಾಲವನ್ನು ಸೂಕ್ತ ಸಮಯಕ್ಕೆ ಮರುಪಾವತಿಸಿ ಹೆಚ್ಚಿನ ಸಾಲ ಸೌಲಭ್ಯ ಪಡೆಯಬೇಕು’ ಎಂದರು.
ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್, ನಿರ್ದೇಶಕರಾದ ಎಸ್.ಆರ್.ಗಿರೀಶ್, ಎಚ್.ಟಿ.ನಾಗರೆಡ್ಡಿ, ಎಂ.ನಿಶಾನಿ ಜಯಣ್ಣ, ವಿನೋದಸ್ವಾಮಿ, ಕೆ.ಜಗಣ್ಣ, ಎಚ್.ಎಂ.ದ್ಯಾಮಣ್ಣ, ರಘುರಾಮರೆಡ್ಡಿ, ಪಿ.ತಿಪ್ಪೇಸ್ವಾಮಿ, ಟಿ.ಮಹಾಂತೇಶ್, ಕೆ.ಅನಂತ್, ಒ.ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಇದ್ದರು.
ಬ್ಯಾಂಕಿನ ಎಲ್ಲಾ ಸದಸ್ಯ ಸಹಕಾರ ಸಂಘಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಸುಸ್ತಿ ಸಾಲ ಮರುಪಾವತಿ ಮಾಡಿದರೆ ನಿಮ್ಮ ಬ್ಯಾಂಕ್ ಉಳಿಯುತ್ತದೆ. ಬ್ಯಾಂಕಿನಿಂದ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆಡಿ.ಸುಧಾಕರ್ ಅಧ್ಯಕ್ಷ ಡಿಸಿಸಿ ಬ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.