
ಚಿತ್ರದುರ್ಗ: ‘ಇಲ್ಲಿಯವರೆಗೂ ಯೋಜನೆಗಳು ಬೆಂಗಳೂರು, ದೆಹಲಿ ಮಟ್ಟದಲ್ಲಿ ಸಿದ್ಧವಾಗುತ್ತಿದ್ದವು. ಆದರೆ ಇನ್ನು ಮುಂದೆ ಜನರ ಭಾವನೆಗಳಿಗೆ ಅನುಗುಣವಾಗಿ ತಳಮಟ್ಟದಿಂದಲೇ ಯೋಜನೆಗಳು ರೂಪಿತವಾಗಬೇಕು ಎಂಬ ಆಶಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರಕ ಅವಕಾಶ ನೀಡಿದ್ದಾರೆ’ ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರು ಕೇವಲ ಬಜೆಟ್ ಚರ್ಚೆಯಲ್ಲಿ ಮಾತ್ರ ಭಾಗವಹಿಸುತ್ತಿದ್ದರು. ಆದರೆ, ಯೋಜನಾ ತಯಾರಿಕೆ ಪ್ರಕ್ರಿಯೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಈ ವ್ಯವಸ್ಥೆಗೆ ಬದಲಾವಣೆ ತರುವ ಮೂಲಕ ಜನರ ಅಗತ್ಯಗಳಿಗೆ ತಕ್ಕಂತೆ ಆಡಳಿತ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಜನಪ್ರತಿನಿಧಿಗಳು ಕೇವಲ ಅಧಿಕಾರ ಅನುಭವಿಸದೇ ಜನರ ಆಶೋತ್ತರಗಳಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿಯಾಗಬೇಕು’ ಎಂದರು.
‘ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನಬದ್ಧವಾಗಿ ಬಲಪಡಿಸುವುದು ಇಂದಿನ ಅಗತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳೇ ಅತ್ಯಂತ ಪ್ರಬಲವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಬದಲಿಸುವ ಅಧಿಕಾರ ಮುಖ್ಯಮಂತ್ರಿಗಾಗಲೀ ಅಥವಾ ಪ್ರಧಾನ ಮಂತ್ರಿಗಾಗಲೀ ಇರುವುದಿಲ್ಲ’ ಎಂದರು.
‘ಜ. 26ರಂದು ಗಣರಾಜ್ಯೋತ್ಸವದ ಒಳಗೆ ಪ್ರತಿಯೊಂದು ಮನೆಗೆ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಜವಾಬ್ದಾರಿ ಹಾಗೂ ಅಧಿಕಾರಗಳ ಬಗ್ಗೆ ಮಾಹಿತಿ ನೀಡುವ ಕರಪತ್ರ ತಲುಪಿಸಬೇಕು. ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದರೆ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ’ ಎಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆ ಅಂತಿಮ ಹಂತ ತಲುಪಿದ್ದು, ಮುಂದಿನ 3– 4 ತಿಂಗಳಲ್ಲಿ ಜಿಲ್ಲೆಯ ಭೂಮಿಗೆ ನೀರು ಹರಿಯುವ ನಿರೀಕ್ಷೆಯಿದೆ. ಇದು ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಜಿಲ್ಲೆಯ ಆರ್ಥಿಕತೆಗೆ ಬಲ ತುಂಬಲು ಇಲ್ಲಿನ ಸಮೃದ್ಧ ಖನಿಜ ಸಂಪತ್ತನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಮ್ಯಾಂಗನೀಸ್, ಕಬ್ಬಿಣದ ಅದಿರು ಹಾಗೂ ಸುಣ್ಣದ ಕಲ್ಲಿನ ಗಣಿಗಾರಿಕೆಯಿಂದ ಬರುವ ರಾಯಧನವನ್ನು ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು’ ಎಂದರು.
ಕೃಷಿ ಜಂಟಿ ನಿರ್ದೇಶಕ ಮಾತನಾಡಿ, ‘ರೈತರ ಬೇಡಿಕೆಗಳಿಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಗ್ರಾಮ ಸಭೆಗಳ ಮೂಲಕ ಸಂಗ್ರಹಿಸಿದ ಎಲ್ಲಾ ಬೇಡಿಕೆಗಳನ್ನು ಮೊದಲು ತಾಲ್ಲೂಕು ಮಟ್ಟದಲ್ಲಿ, ನಂತರ ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಲಾಗುತ್ತದೆ. ರೈತರಿಗೆ ಹೊಸ ತಳಿಗಳ ಪರಿಚಯ ಮತ್ತು ಆಧುನಿಕ ಬೆಳೆ ಪದ್ಧತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ’ ಎಂದರು.
ಜಿ.ಪಂ ಉಪಕಾರ್ಯದರ್ಶಿ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಇದ್ದರು.
ಜಿ.ಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ ‘ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ 2026– 27ನೇ ಸಾಲಿಗೆ ₹ 6085 ಕೋಟಿಗಳ ಬೃಹತ್ ಅನುದಾನದ ಬೇಡಿಕೆ ಸಿದ್ಧಪಡಿಸಿದೆ. ಈ ಅಂತಿಮ ವರದಿಯನ್ನು ಫೆ.12ರಂದು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಯೋಜನೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಎಸ್‍ಸಿಪಿ ₹ 2567 ಕೋಟಿ ಟಿಎಸ್‍ಪಿ ₹ 1102 ಕೋಟಿ ಯೋಜನೆಗಳ ಪಾಲು ಶೇ 50ಕ್ಕಿಂತ ಹೆಚ್ಚಿದೆ’ ಎಂದರು. ‘ಇದರಲ್ಲಿ ಶಿಕ್ಷಣಕ್ಕೂ ಸಿಂಹಪಾಲು ಅನುದಾನ ಮೀಸಲಿಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ ₹ 550 ಕೋಟಿ ಬೇಡಿಕೆ ಇಡಲಾಗಿದೆ. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಿದ್ಧಪಡಿಸಲಾದ ಈ ವರದಿಯು ಜಿಲ್ಲೆಯ ಆರ್ಥಿಕ ಮತ್ತು ಭೌತಿಕ ಪ್ರಗತಿಗೆ ವೇಗ ನೀಡುವ ನಿರೀಕ್ಷೆಯಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.