ADVERTISEMENT

ಮೊಳಕಾಲ್ಮುರು: ನೀರಾವರಿ ಹೋರಾಟಕ್ಕೆ ನೂತನ ಸಮಿತಿ ರಚನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:10 IST
Last Updated 6 ಜನವರಿ 2026, 7:10 IST
ಮೊಳಕಾಲ್ಮುರಿನಲ್ಲಿ ಸೋಮವಾರ ಭದ್ರಾಮೇಲ್ದಂಡೆ ಹೋರಾಟ ರೂಪರೇಷ ಕುರಿತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸಭೆ ನಡೆಸಿದರು.
ಮೊಳಕಾಲ್ಮುರಿನಲ್ಲಿ ಸೋಮವಾರ ಭದ್ರಾಮೇಲ್ದಂಡೆ ಹೋರಾಟ ರೂಪರೇಷ ಕುರಿತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸಭೆ ನಡೆಸಿದರು.   

ಮೊಳಕಾಲ್ಮುರು: ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಯುವುದಕ್ಕೆ ತೀವ್ರ ವಿಳಂಬವಾಗುತ್ತಿರುವ ಕಾರಣ ಹೋರಾಟ ಸಮಿತಿ ರಚನೆ ಮಾಡಲು ಸೋಮವಾರ ಇಲ್ಲಿನ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಸಭಾಂಗಣದಲ್ಲಿ ನಡೆದ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಮೂರು ದಶಕಗಳಿಂದ ಯೋಜನೆಯಲ್ಲಿ ನೀರು ನೀಡುವಂತೆ ಹೋರಾಟ ಮಾಡಲಾಗುತ್ತಿದೆ. ಆದರೆ, ನಮ್ಮ ಕೂಗನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಬೂಬುಗಳನ್ನು ಹೇಳುತ್ತ ತಮ್ಮ ರೈತರನ್ನು ವಂಚಿಸುತ್ತಿದೆ. ಜಿಲ್ಲೆಯ ಬೇರೆ ಭಾಗಕ್ಕೆ ನೀರು ತರುವ ಕಾರ್ಯಗಳು ಚುರುಕಿನಿಂದ ನಡೆಯುತ್ತಿದ್ದು, ಮೊಳಕಾಲ್ಮುರು ಭಾಗದ ಕಾರ್ಯ ಮಾತ್ರ ಕುಂಟುತ್ತಾ ಸಾಗುತ್ತಿದೆ. ಆದ್ದರಿಂದ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಜ. 10ರಂದು ಹೊಸ ಸಮಿತಿ ರಚಿಸಿ ಅದರಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಲು ಸಭೆ ತೀರ್ಮಾನಿಸಿತು.

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿ ಎದುರು ಅವಿತರ ಧರಣಿ ನಡೆಸಲು, ಜಿಲ್ಲೆ, ರಾಜ್ಯಮಟ್ಟಕ್ಕೆ ಪಾದಯಾತ್ರೆ, ಪ್ರತಿಭಟನೆ ನಡೆಸಲು, ಪ್ರತಿ ಹಳ್ಳಿಗಳಲ್ಲಿ ಸಭೆಗಳನ್ನು ನಡೆಸಿ ಯೋಜನೆ ವಿಳಂಬದ ಬಗ್ಗೆ ಜಾಗೃತಿ ಮೂಡಿಸಲು, ಬದ್ಧತೆಯಿಂದ ಹೋರಾಟ ಸಭೆಗಳನ್ನು ನಡೆಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲು ಸಭೆ ಅಂಗೀಕರಿಸಿತು.

ADVERTISEMENT

ರೈತ ಸಂಘದ ಮುಖಂಡರಾದ ಈಚಗಟ್ಟ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸೂರಮ್ಮನಹಳ್ಳಿ ರಾಜಣ್ಣ, ಮರ್ಲಹಳ್ಳಿ ರವಿಕುಮಾರ್‌, ಕೆ.ಟಿ.ತಿಪ್ಪೇಸ್ವಾಮಿ, ಕೆ.ಜಗಳೂರಯ್ಯ, ಡಿ.ಸಿ.ನಾಗರಾಜ್‌, ಡಿ.ಪೆನ್ನಯ್ಯ, ಕೊಂಡಾಪುರ ಪರಮೇಶ್ವರಪ್ಪ,  ಮಂಜುನಾಥ್‌, ಪ್ರಭಾಕರ್‌, ಡಿ.ಬಿ.ಕೃಷ್ಣಮೂರ್ತಿ, ಮೇಸ್ತ್ರಿ ಪಾಪಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.