ADVERTISEMENT

₹ 10 ಸಾವಿರ ಕೋಟಿ ಮೀಸಲಿಡಿ

ಕುರಿ-ಮೇಕೆ ಸಾಕಾಣಿಕೆದಾರರ ಸಹಕಾರ ಸಂಘಗಳ ಒಕ್ಕೂಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 11:59 IST
Last Updated 21 ಸೆಪ್ಟೆಂಬರ್ 2020, 11:59 IST
ಅನುಗ್ರಹ ಯೋಜನೆ ಪುನರ್ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕುರಿ-ಮೇಕೆ ಸಾಕಾಣಿಕೆದಾರರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು
ಅನುಗ್ರಹ ಯೋಜನೆ ಪುನರ್ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕುರಿ-ಮೇಕೆ ಸಾಕಾಣಿಕೆದಾರರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಕೇಂದ್ರ ಸರ್ಕಾರ ಹೈನುಗಾರಿಕೆ ಫಲಾನುಭವಿಗಳಿಗೆ ನೀಡಿರುವ ಅನುದಾನದಲ್ಲಿ ಕುರಿ-ಮೇಕೆ ಸಾಕಾಣಿಕೆದಾರರಿಗೆ ಕನಿಷ್ಠ ₹ 10 ಸಾವಿರ ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ರಂಗಯ್ಯನಬಾಗಿಲ ಸಮೀಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದದ ಪ್ರತಿಭಟನಕಾರರು ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕುರಿ-ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ನೀಡಲಾಗುವ ಪರಿಹಾರ ಧನದ ಅನುಗ್ರಹ ಯೋಜನೆಯನ್ನು ಪುನರ್ ಜಾರಿಗೆ ತರಬೇಕು. ರಾಜ್ಯದಾದ್ಯಂತ ಬಾಕಿಯಿರುವ ₹ 30 ಕೋಟಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ನಿರ್ದೇಶಕ ಸಿ. ಮಹಲಿಂಗಪ್ಪ, ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಲಾಗುವ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಕುರಿ-ಮೇಕೆ ಸಾಕಾಣಿಕೆದಾರರ ಸಂಘದಲ್ಲಿ ನೋಂದಣಿ ಆದವರಿಗೂ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಾದ್ಯಂತ ಇರುವ ಹುಲ್ಲುಬನ್ನಿ ಖರಾಬ್‌ ಅನ್ನು ಕುರಿ-ಮೇಕೆಗಳು ಮೇಯಲು ಕಾಯ್ದಿರಿಸಬೇಕು. ಜಿಲ್ಲೆಯ ನೆಲಗೇತನಹಟ್ಟಿ ಹಾಗೂ ರಾಮದುರ್ಗ ಗ್ರಾಮದಲ್ಲಿ ಒಂದು ಸಾವಿರ ಎಕರೆ ಕುದಾಪುರ ಕುರಿ ಸಂವರ್ಧನ ಕೇಂದ್ರಕ್ಕೆ ಸೇರಿದ ಜಮೀನು ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಿ, ಸಾಕಾಣಿಕೆದಾರರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

‘ಎನ್‌ಸಿಡಿಸಿ ಯೋಜನೆಯಡಿ ಕುರಿ-ಮೇಕೆ ಸಾಕಾಣಿಕೆದಾರರಿಗೆ ಸಾಲ ಸೌಲಭ್ಯ ನೀಡಲು ₹ 5 ಸಾವಿರ ಕೋಟಿ ಅನುದಾನ ಮೀಸಲಿಟ್ಟು, ಯೋಜನೆ ಅನುಷ್ಟಾನಗೊಳಿಸಬೇಕು’ ಎಂದು ಕೋರಿದರು.

ಮಹಾಂತೇಶ್, ತಿರುಮಲ, ಮದ್ದನಕುಂಟೆ ಚಂದ್ರಪ್ಪ, ಬಿ.ಜಿ. ಕೆರೆ ಗೋಪಿ, ಕುರಿ ಬಸಣ್ಣ, ವೇದಾಂತ್, ನಾಗರಾಜ್, ಭೀಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.