ADVERTISEMENT

ಮೊಳಕಾಲ್ಮುರು: ಉದ್ಯೋಗ ಖಾತ್ರಿ ಹಣ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:06 IST
Last Updated 13 ಆಗಸ್ಟ್ 2021, 4:06 IST
ಮೊಳಕಾಲ್ಮುರಿನಲ್ಲಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಾಲ್ಲೂಕು ಪಂಚಾಯಿತಿ ಇಒಗೆ ಮನವಿ ಸಲ್ಲಿಸಿದರು
ಮೊಳಕಾಲ್ಮುರಿನಲ್ಲಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಾಲ್ಲೂಕು ಪಂಚಾಯಿತಿ ಇಒಗೆ ಮನವಿ ಸಲ್ಲಿಸಿದರು   

ಮೊಳಕಾಲ್ಮುರು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಅಳವಡಿಸುವ ನಾಮಫಲಕದ ಹಣವನ್ನು ಕೊಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಳೆದ ವರ್ಷ ತಾಲ್ಲೂಕಿನಲ್ಲಿ ಖಾತ್ರಿ ಯೋಜನೆಯಲ್ಲಿ ನೂರಾರು ರೈತರು ಕೃಷಿ ಹೊಂಡ, ಬದುಗಳ ನಿರ್ಮಾಣ ಕಾಮಗಾರಿ ಮಾಡಿಕೊಂಡಿದ್ದಾರೆ. ಇದರ ಹಣವನ್ನು ಪಡೆಯಲು ನಾಮಫಲಕ ಅಳವಡಿಸುವುದು ಕಡ್ಡಾಯ. ಪರಿಣಾಮ ಆಗ ತಾಲ್ಲೂಕು ಪಂಚಾಯಿತಿ ಇಒ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಅವರು ಗುತ್ತಿಗೆದಾರರ ಮೂಲಕ ಫಲಕಗಳನ್ನು ಸರಬರಾಜು ಮಾಡಿಸಿದರು. ಇದರ ಹಣ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಇದುವರೆಗೂ ಜಮೆ ಮಾಡಿಲ್ಲ ರೈತರು ಎಂದು ದೂರಿದರು.

‘ಗುತ್ತಿಗೆದಾರ ತಾಲ್ಲೂಕು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರ ಸಂಬಂಧಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅಂದಾಜು ₹ 37 ಲಕ್ಷದಷ್ಟು ಅವ್ಯವಹಾರವಾಗಿರುವ ಶಂಕೆಯಿದೆ. ಬೇರೆ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದೆ. ಪ್ರಕಾಶ್ಚಳ್ಳಕೆರೆಯಲ್ಲಿ ತಾಲ್ಲೂಕು ಪಂಚಾಯಿತಿ ಇಒ ಆಗಿ ಕೆಲಸ ಮಾಡುತ್ತಿದ್ದು,ಅವರನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿಸುವ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಇಒ ಕೆ.ಒ. ಜಾನಕಿರಾಮ್‌ ಮನವಿ ಸ್ವೀಕರಿಸಿದರು. ಮುಖಂಡರಾದ‌ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬೆಳಗಲ್ ಈಶ್ವರಯ್ಯಸ್ವಾಮಿ, ಜಾಫರ್ ಷರೀಫ್, ಮರ್ಲಹಳ್ಳಿ ರವಿಕುಮಾರ್, ಕನಕ ಶಿವಮೂರ್ತಿ, ಸೂರಮ್ಮನಹಳ್ಳಿ ರಾಜಣ್ಣ, ಪಾಪಯ್ಯ, ಮಂಜುನಾಥ್,ಚಂದ್ರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.