
ಧರ್ಮಪುರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಕಳೆದೆರೆಡು ದಿನಗಳಿಂದ ಪರದಾಡುವಂತಾಗಿದೆ.
ಚಿತ್ರದುರ್ಗ ಜಿಲ್ಲೆಯ ದೊಡ್ಡ ಮತ್ತು ಗಡಿ ಹೋಬಳಿಯಾಗಿರುವ ಧರ್ಮಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ 350ರಿಂದ 400 ಹೊರರೋಗಿಗಳು ಬರುತ್ತಿದ್ದಾರೆ. ಆಂಧ್ರಪ್ರದೇಶದ ಗಡಿ ಗ್ರಾಮಗಳಿಂದಲೂ ಹೆಚ್ಚು ರೋಗಿಗಳು ಇಲ್ಲಿಗೆ ಬರುವುದರಿಂದ ಆಸ್ಪತ್ರೆ ಯಾವಾಗಲೂ ರೋಗಿಗಳಿಂದ ತುಂಬಿರುತ್ತದೆ.
‘ಶುಕ್ರವಾರ ಮತ್ತು ಶನಿವಾರ ಸಂಪೂರ್ಣವಾಗಿ ವಿದ್ಯುತ್ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ತುರ್ತಾಗಿ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಧರ್ಮಪುರ ಹೋಬಳಿಯ ನಾಗರಿಕರು ಒತ್ತಾಯಿಸಿದ್ದಾರೆ.
‘ಶಾರ್ಟ್ ಸರ್ಕಿಟ್‌ನಿಂದ ವಿದ್ಯುತ್ ವ್ಯತ್ಯಯವಾಗಿದ್ದರೂ ಬೇರೆಡೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆಯಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ಅದರಿಂದಲೂ ವಿದ್ಯುತ್ ಸಮಸ್ಯೆ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೆ.ಅನಿತಾ ತಿಳಿಸಿದ್ದಾರೆ.
ಎರಡು ದಿನದಲ್ಲಿ ಸಮಸ್ಯೆ ನಿವಾರಣೆ
ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಅ. 16ರಂದು ಉಂಟಾದ ಶಾರ್ಟ್ ಸರ್ಕಿಟ್‌ನಿಂದ ವಿದ್ಯುತ್ ಪರಿಕರಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾತ್ಕಾಲಿಕ ವ್ಯವಸ್ಥೆಯನ್ನು ಅಲ್ಲಿಯ ವೈದ್ಯಾಧಿಕಾರಿಗಳು ಮಾಡಿಕೊಂಡಿದ್ದರು. ಇಷ್ಟಾದರೂ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಈ ಸಂದರ್ಭದಲ್ಲಿ ಅದಕ್ಕೆ ಬೇಕಾದ ಅನುದಾನ ಮತ್ತಿತರ ತಾಂತ್ರಿಕ ಒಪ್ಪಿಗೆ ಪಡೆದಿದ್ದು ₹ 15 ಲಕ್ಷ ಮಂಜೂರಾಗಿದೆ. ತುರ್ತಾಗಿ ಇನ್ನೆರೆಡು ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.