ADVERTISEMENT

ಮಗಳ ಮೇಲೆ ತಂದೆ ಅತ್ಯಾಚಾರ; ತಾಯಿಯಾದ 17 ವರ್ಷದ ಬಾಲಕಿ, ಮೃತ ಶಿಶು ಹೂತು ಹಾಕಿದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:37 IST
Last Updated 22 ಏಪ್ರಿಲ್ 2019, 13:37 IST
   

ಧರ್ಮಪುರ: ತಂದೆಯಿಂದಲೇ ನಿರಂತರ ಅತ್ಯಾಚಾರಕ್ಕೆ ಈಡಾಗಿದ್ದ 17 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಹುಟ್ಟುವ ಮೊದಲೇ ಕೊನೆಯುಸಿರೆಳೆದಿದ್ದ ನವಜಾತ ಶಿಶುವನ್ನು ಹೂತು ಹಾಕಿ, ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಯ ಪತ್ನಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯ ಪುತ್ರಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ.

ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಆರೋಪಿ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಗರ್ಭಿಣಿ ಎಂಬುದು ಖಚಿತವಾಗುತ್ತಿದ್ದಂತೆ ಶಿಕ್ಷಣವನ್ನು ಮೊಟಕುಗೊಳಿಸಿದ್ದಾನೆ. ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ಶಿಕ್ಷಕರಿಗೆ ನೆಪ ಹೇಳಿ ಮಗಳನ್ನು ಮನೆಯಲ್ಲೇ ಇರುವಂತೆ ನೋಡಿಕೊಂಡಿದ್ದಾನೆ.

ADVERTISEMENT

ಏ.16ರಂದು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ ಸಂದರ್ಭದಲ್ಲೇ ಬಾಲಕಿ ಶಿಶುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿ, ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರೇತರ ಸೇವಾ ಸಂಸ್ಥೆಯ (ಎನ್‌ಜಿಒ) ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಮೃತ ನವಜಾತ ಶಿಶುವನ್ನು ಮನೆಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ಹೂತು ಹಾಕಿದ್ದಾನೆ. ತನಿಖೆ ಪ್ರಾರಂಭಿಸಿದ ಅಬ್ಬಿನಹೊಳೆ ಠಾಣೆಯ ಪೊಲೀಸರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿಶುವನ್ನು ಹೂತು ಹಾಕಿದ್ದ ಸ್ಥಳದಲ್ಲಿ ಗೋಣಿ ಚೀಲ ಮಾತ್ರ ಪತ್ತೆಯಾಗಿದೆ. ಶಿಶುವಿನ ಮೃತದೇಹವನ್ನು ಪ್ರಾಣಿಗಳು ತಿಂದು ಹಾಕಿದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.