ಧರ್ಮಪುರ: ಶಿಡ್ಲಯ್ಯನಕೋಟೆಯಿಂದ ಕಂದಿಕೆರೆ ಮಾರ್ಗವಾಗಿ ಬೀದರ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ನಿತ್ಯ ಶಪಿಸುತ್ತ ಸಾಗುವಂತಾಗಿದೆ.
ಧರ್ಮಪುರದಿಂದ ಹಿರಿಯೂರು ಮಾರ್ಗವಾಗಿ ಚಳ್ಳಕೆರೆಗೆ ಹೋಗಲು ಅಂದಾಜು 80 ಕಿ.ಮೀ. ದೂರವಾಗುತ್ತದೆ. ಅದೇ ಧರ್ಮಪುರದಿಂದ ಹರಿಯಬ್ಬೆ ಮಾರ್ಗವಾಗಿ ಗೂಳ್ಯ, ರಂಗೇನಹಳ್ಳಿ, ಕಂದಿಕೆರೆಯಿಂದ ಬೀದರ್ ರಸ್ತೆಗೆ ಸಂಪರ್ಕಿಸುವ ರಸ್ತೆ ಮೂಲಕ ಹೋದರೆ ಕೇವಲ 50 ಕಿ.ಮೀ. ಮಾತ್ರವೇ ಆಗುತ್ತದೆ. ಇದರಿಂದ ಸುಮಾರು 30 ಕಿ.ಮೀ.ಉಳಿತಾಯವಾಗುತ್ತದೆ.
ಧರ್ಮಪುರದಿಂದ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಹೋಗುವ ಬಹುತೇಕ ವಾಹನಗಳು ಈ ಮಾರ್ಗದ ಮೂಲಕ ಸಂಚರಿಸುತ್ತವೆ. ಆದರೆ, ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಚಾಲಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಶಪಿಸುತ್ತಿದ್ದಾರೆ.
2022ರಲ್ಲಿ ಧರ್ಮಪುರ ಹೋಬಳಿಯ 9 ಕೆರೆಗಳಿಗೆ ನೀರುಣಿಸುವ ಕಾಮಗಾರಿಗೆ ಚಾಲನೆ ನೀಡಲು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಾವತಿ ನದಿಯ ಹೊಸಹಳ್ಳಿ ಬ್ಯಾರೇಜ್ ಮತ್ತು ಕಾರ್ಯಕ್ರಮದ ಸ್ಥಳವಾದ ಹರಿಯಬ್ಬೆಗೆ ಬರುವ ವೇಳೆಗೆ ತುರ್ತಾಗಿ ಲೋಕೋಪಯೋಗಿ ಇಲಾಖೆಯವರು ಹೊಸದಾಗಿ ಹರಿಯಬ್ಬೆ, ಗೂಳ್ಯ, ಹೊಸಹಳ್ಳಿ ರಸ್ತೆಗೆ ಡಾಂಬರೀಕರಣ ಮಾಡಿಸಿದ್ದರು. ಆದರೆ, ಮೂರೇ ತಿಂಗಳಲ್ಲಿ ಆ ರಸ್ತೆ ಕಿತ್ತು ಹೋಯಿತು. ನಂತರ ಮತ್ತೆ ದುರಸ್ತಿ ಕಾರ್ಯ ಮಾಡಿಸಿದ್ದಾರೆ. ಆದರೂ, ಕಳಪೆ ಕಾಮಗಾರಿಯಿಂದ ರಸ್ತೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ರಾತ್ರಿ ವೇಳೆ ಆಳವಾದ ಗುಂಡಿಗಳ ಆಳ ಅರಿಯದೆ ಬಿದ್ದಿರುವ ಅನೇಕ ಉದಾಹರಣೆಗಳಿವೆ.
ಎರಡು ವರ್ಷಗಳ ಹಿಂದೆ ವೇದಾವತಿ ನದಿಯಿಂದ ಮರಳು ಸಾಗಣೆಯ ಪರವಾನಗಿ ಸಿಕ್ಕ ಮೇಲೆ ಸೂಗೂರು, ಸಾಲುಣಿಸೆ, ಹೊಸಹಳ್ಳಿ, ಗೂಳ್ಯ, ಶಿಡ್ಲಯ್ಯನಕೋಟೆ, ರಂಗೇನಹಳ್ಳಿ, ಕಂದಿಕೆರೆ ಸಂಪರ್ಕ ರಸ್ತೆಗಳಲ್ಲಿ ಲಾರಿಗಳು ಓಡಾಟ ನಡೆಸಿದ್ದರಿಂದ ಡಾಂಬರ್ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಅದರಲ್ಲೂ ಗೂಳ್ಯ, ಶಿಡ್ಲಯ್ಯನಕೋಟೆ, ರಂಗೇನಹಳ್ಳಿ ಮತ್ತು ಕಂದಿಕೆರೆ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಬಸ್, ಟ್ರ್ಯಾಕ್ಟರ್, ಲಾರಿ ಮತ್ತಿತರ ವಾಹನಗಳಿರಲಿ ಬೈಕ್ ಹೋಗುವುದೂ ದುಸ್ತರವೆನಿಸಿದೆ. ಮಳೆ ಬಂತೆಂದರೆ ಈ ಸಂಪರ್ಕ ರಸ್ತೆಯ ಮೂಲಕ ಜಮೀನುಗಳಿಗೆ ಹೋಗುವ ರೈತರ ಪಾಡು ಹೇಳತೀರದಾಗಿದೆ ಎಂದು ಶಿಡ್ಲಯ್ಯನಕೋಟೆಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ದುರಸ್ತಿಗೆ ಆಗ್ರಹ: ‘ಶಿಡ್ಲಯ್ಯನ ಕೋಟೆಯಿಂದ ರಂಗೇನಹಳ್ಳಿಗೆ ಬರುವ ರಸ್ತೆ ಒಂದು ಕಡೆ ತಿರುವಿನಲ್ಲಿ ಸಂಪೂರ್ಣ ಕೊರೆದಿದೆ. ಕಂದಕ ನಿರ್ಮಾಣವಾದಂತೆ ಬಾಸವಾಗುತ್ತದೆ. ದ್ವಿಚಕ್ರ ವಾಹನ ಚಾಲಕರು ತಿರುವಿನಲ್ಲಿ ರಸ್ತೆ ಹಾಳಾಗಿರುವುದನ್ನು ಅರಿಯದೇ ರಾತ್ರಿ ವೇಳೆ ಬಿದ್ದು, ಅವಘಡಗಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹಾಳಾಗಿರುವ ರಸ್ತೆ ದುರಸ್ತಿಪಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು’ ಎಂದು ರಂಗೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ಮರಳಿನ ಲಾರಿ ಓಡಾಡಿ ಶಿಡ್ಲಯ್ಯನಕೋಟೆ ಮತ್ತು ಕಂದಿಕೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ತುರ್ತಾಗಿ ರಸ್ತೆ ದುರಸ್ತಿ ಮಾಡಿಸಬೇಕು.ಮಧು ಶಿಡ್ಲಯ್ಯನಕೋಟೆ
ರಂಗೇನಹಳ್ಳಿಯಿಂದ ಕಂದಿಕೆರೆ– ಶಿಡ್ಲಯ್ಯನಕೋಟೆ ಹೋಗುವ ರಸ್ತೆ ಹದಗೆಟ್ಟು ಸುಮಾರು ವರ್ಷಗಳೇ ಕಳೆದಿವೆ. ರೈತರು ತಮ್ಮ ಜಮೀನುಗಳಿಗೆ ಹೋಗಲಿಕ್ಕೆ ಪ್ರಾಯಾಸ ಪಡಬೇಕು.ರಮೇಶ್ ರಂಗೇನಹಳ್ಳಿ
ರಸ್ತೆ ದುರಸ್ತಿ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿದ್ದು ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕು ಹಣ ಬಿಡುಗಡೆ ಆದ ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು.ಬಿ.ಆರ್.ನಾಗರಾಜ್ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.