ಧರ್ಮಪುರ: ‘ಇಲ್ಲಿಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಸೂಕ್ತವಾಗಿದ್ದು ತುರ್ತಾಗಿ ಹೋಬಳಿಯ ಜನತೆಗೆ ಸೇವೆ ಸಿಗಲಿದೆ’ ಎಂದು ಕೆಎಸ್ಆರ್‌ಟಿಸಿ ಮುಖ್ಯ ಎಂಜಿನಿಯರ್ ಕೆ.ಎಚ್.ಹವಾಲ್ದಾರ ತಿಳಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣದ ಜಾಗವನ್ನು ಪರಿಶೀಲಿಸಿ ಅವರು ಮಾತನಾಡಿದರು.
‘ಪ್ರಜಾವಾಣಿ’ಯಲ್ಲಿ ಶನಿವಾರ ಪ್ರಕಟವಾಗಿರುವ ‘ಜನರ ಪ್ರಯಾಣಕ್ಕೆ ಆಟೊಗಳೇ ಗತಿ’ ಸುದ್ದಿಯನ್ನು ನೋಡಿದ ಮುಖ್ಯ ಎಂಜಿನಿಯರ್ ಹವಾಲ್ದಾರ, ಹಿರಿಯೂರಿನಲ್ಲಿ ಬಸ್ ಘಟಕ ಆರಂಭವಾಗಿದ್ದು, ಎಲ್ಲೆಲ್ಲಿ ಬಸ್ ಸಂಚಾರ ಸೌಲಭ್ಯ ಇಲ್ಲವೋ ಅಂತಹ ಕಡೆ ಸಂಚಾರ ಆರಂಭವಾಗಲಿದೆ. ಅದೇ ರೀತಿ ಧರ್ಮಪುರದಲ್ಲಿ ಬಸ್ ನಿಲ್ದಾಣ ಆರಂಭವಾಗುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ’ ಎಂದರು.
‘ಹೋಬಳಿ ಗಡಿ ಪ್ರದೇಶವಾಗಿದ್ದು, ಚಳ್ಳಕೆರೆ 45 ಕಿ.ಮೀ, ಶಿರಾ 50 ಕಿ.ಮೀ. ಪಾವಗಡ 60 ಕಿ.ಮೀ, ಹಿರಿಯೂರು 35 ಕಿ.ಮೀ ಇನ್ನೂ ಆಂಧ್ರಪ್ರದೇಶದ ಅಮರಾಪುರದ ಗಡಿ ಕೇವಲ 8 ಕಿ.ಮೀ ದೂರವಿದ್ದು, ಎಲ್ಲಾ ಕಡೆಯಿಂದ ಬರುವ ಬಸ್ ಗಳಿಗೆ ಕೇಂದ್ರ ಸ್ಥಾನವಾಗಿದೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರಿಗೆ ಮನವಿ ಮಾಡಲಾಗಿತ್ತು, ಡಿ.ಸುಧಾಕರ್ ಸಾರಿಗೆ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ಸುಮಾರು ₹3.80 ಕೋಟಿ ಅನುದಾನದಡಿ ನೂತನ ಬಸ್ ನಿಲ್ದಾಣಕ್ಕೆ ಅನುಮೋದನೆ ದೊರೆತಿದೆ’ ಎಂದು ಧರ್ಮಪುರದ ಕಾಂಗ್ರೆಸ್ ಮುಖಂಡ ಕುರುಬರಹಳ್ಳಿ ಹನುಮಂತರಾಯ ತಿಳಿಸಿದರು.
‘ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಶೀಘ್ರ ಭೂಮಿಪೂಜೆ ನಡೆಯಲಿದೆ’ ಎಂದು ಧರ್ಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್‌ಜಾನ್ ಅಮಾನುಲ್ಲಾ ತಿಳಿಸಿದರು.
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಕೆಎಸ್ಆರ್‌ಟಿಸಿ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಆಂಟನಿ, ಮೆಕಾನಿಕಲ್ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಕೆಡಿಪಿ ಸದಸ್ಯ ತಿಮ್ಮಣ್ಣ, ಕಾಂಗ್ರೆಸ್ ಮುಖಂಡ ಎಸ್.ಆರ್.ತಿಪ್ಪೇಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಧರ್ಮಪುರದ ಪಿಡಿಒ ಲಕ್ಷ್ಮೀಕಾಂತ್, ಸದಸ್ಯರಾದ ಲಕ್ಷ್ಮೀದೇವಿ, ಅಸ್ಲಾಂಖಾನ್, ರಾಘವೇಂದ್ರ, ಕೆ.ಕೃಷ್ಣಮೂರ್ತಿ, ಗೌಡಪ್ಪ, ಮಧುಸೂದನ್, ನೌಷಾದ್, ಸುಭಾನ್, ಶ್ರೀರಾಮ್, ನಲ್ಲ, ರಂಗಪ್ಪ, ಟಿ.ರಂಗಸ್ವಾಮಿ, ಶ್ರೀನಿವಾಸ್, ಸಿದ್ದೇಶ್, ರತ್ನಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.