ADVERTISEMENT

‘ಕೋವಿಡ್‌–19’ ಪ್ರಯೋಗಾಲಯಕ್ಕೆ ಪ್ರಸ್ತಾವ

ಗಂಟಲು ದ್ರವ ಮತ್ತು ರಕ್ತದ ಮಾದರಿ ಪರೀಕ್ಷಾ ವರದಿ ವಿಳಂಬ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:33 IST
Last Updated 7 ಏಪ್ರಿಲ್ 2020, 13:33 IST
ಡಾ.ಫಾಲಾಕ್ಷ.
ಡಾ.ಫಾಲಾಕ್ಷ.   

ಚಿತ್ರದುರ್ಗ: ಕೊರೊನಾ ಸೋಂಕು ಪರೀಕ್ಷೆಗೆ ಸಂಬಂಧಿಸಿದ ಪ್ರಯೋಗಾಲಯವನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ತೆರೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಶಂಕಿತರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತಿತ್ತು. ಬಳಿಕ ಬಳ್ಳಾರಿಯಲ್ಲಿ ಆರಂಭವಾದ ನೂತನ ಪ್ರಯೋಗಾಲಯಕ್ಕೆ ನೀಡಲಾಗಿತ್ತು. ಇವುಗಳ ಮೇಲೆ ಒತ್ತಡ ಹೆಚ್ಚಾಗಿರುವ ಕಾರಣಕ್ಕೆ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ದಿನ ಕಳೆದಂತೆ ಎಲ್ಲ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಆದ್ಯತೆಯ ಮೇರೆಗೆ ಪರೀಕ್ಷೆಗೆ ಮಾದರಿ ಪರಿಗಣಿಸಲಾಗುತ್ತಿದೆ. ವಿದೇಶದಿಂದ ಮರಳಿದವರು, ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದವರು ಮತ್ತು ನಿಜಾಮುದ್ದೀನ್‌ಗೆ ಭೇಟಿ ನೀಡಿದವರ ಮಾದರಿಗಳನ್ನು ತ್ವರಿತ ಪರೀಕ್ಷೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಚಿತ್ರದುರ್ಗದಲ್ಲೇ ಪ್ರಯೋಗಾಲಯ ತೆರೆದರೆ ಈ ಸಮಸ್ಯೆ ಎದುರಾಗದು’ ಎಂದರು.

ADVERTISEMENT

‘ಪ್ರಯೋಗಾಲಯದ ವರದಿಗೆ 48ರಿಂದ 72 ಗಂಟೆ ಕಾಯಬೇಕಿದೆ. ತ್ವರಿತ ಪರೀಕ್ಷೆಗೆ ಕ್ಷಿಪ್ರ ಪರೀಕ್ಷಾ ಕಿಟ್‌ ಸಂಶೋಧಿಸಲಾಗಿದೆ. ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷಿಸಿ 15 ನಿಮಿಷಗಳಲ್ಲಿ ವರದಿ ನೀಡುತ್ತದೆ. ಈ ಕಿಟ್‌ ಲಭ್ಯವಾದರೆ ಇನ್ನಷ್ಟು ತ್ವರಿತವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಕೋವಿಡ್‌–19 ರೋಗಕ್ಕೆ 100 ಬೆಡ್‌ ಆಸ್ಪತ್ರೆಯ ಸಿದ್ಧವಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 50 ಹಾಸಿಗೆ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 50 ಹಾಸಿಗೆಯನ್ನು ಇದಕ್ಕೆ ಮೀಸಲಿಡಲಾಗಿದೆ. ಅಲ್ಲದೇ, 10 ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಲು ಮುಂದೆ ಬಂದಿವೆ. ಸುಮಾರು ಮೂರು ಸಾವಿರ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿರುವ 438 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಜ್ವರ, ಶೀಥ, ಕೆಮ್ಮು ಮತ್ತು ನೆಗಡಿ ಸಮಸ್ಯೆ ಹೊರತುಪಡಿಸಿ ಉಳಿದವುಗಳಿಗೆ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ. ಟೆಲಿಮೆಡಿಸಿನ್‌ ಸೇವೆ ಕೂಡ ಆರಂಭವಾಗಿದೆ. ಹೈರಿಸ್ಕ್‌ ಎದುರಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೈಡ್ರಾಕ್ಸಿ ಟೊರೊಫ್ಲಿನ್‌ ಮಾತ್ರೆಯನ್ನು ನೀಡಲಾಗುತ್ತಿದೆ. ಇದು ಕೊರೊನಾ ಸೋಂಕು ತಡೆಯುವ ಶಕ್ತಿ ಹೊಂದಿದೆ’ ಎಂದು ವಿವರಿಸಿದರು.

ಭೀಮಸಮುದ್ರ: ಹರಡದ ಸೋಂಕು
ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡ ಸೋಂಕು ಮತ್ತೊಬ್ಬರಿಗೆ ಹರಡಿಲ್ಲ ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.

‘ಸೋಂಕು ಕಾಣಿಸಿಕೊಂಡ ಮಹಿಳೆ 16 ಜನರ ನೇರ ಸಂಪರ್ಕದಲ್ಲಿದ್ದರು. ಪರೋಕ್ಷ ಸಂಪರ್ಕ ಹೊಂದಿದ್ದ 28 ಜನರನ್ನು ಕೂಡ ಪತ್ತೆ ಮಾಡಲಾಗಿದೆ. ಇವರೆಲ್ಲರ ಗಂಟಲು ದ್ರವ ಮತ್ತು ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಸೋಂಕು ಕಾಣಿಸಿಕೊಂಡಿಲ್ಲ. ಆದರೂ, ಎಲ್ಲರನ್ನು ಗೃಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಮಾಹಿತಿ ನೀಡಿದರು.

‘ಸೋಂಕು ಕಾಣಿಸಿಕೊಂಡ ಗ್ರಾಮದ ಐದು ಕಿ.ಮೀ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ಇದೆ. ಆರೋಗ್ಯ ಇಲಾಖೆಯ 12 ತಂಡಗಳು ಪ್ರತಿ ಮನೆಗೆ ಭೇಟಿ ನೀಡಿ ರೋಗ ಲಕ್ಷಣದ ಬಗ್ಗೆ ಮಾಹಿತಿ ಕಲೆಹಾಕುತ್ತಿವೆ. ಪೊಲೀಸರು ಈ ಪ್ರದೇಶದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ’ ಎಂದು ಹೇಳಿದರು.

ನಿಜಾಮುದ್ದೀನ್‌: 66 ಜನರ ಕ್ವಾರಂಟೈನ್‌
ದೆಹಲಿಯ ನಿಜಾಮುದ್ದೀನ್‌ನಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾದ 66 ಜನರ ಮೇಲೆ ನಿಗಾ ಇಡಲಾಗಿದ್ದು, ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಡಾ.ಫಾಲಾಕ್ಷ ತಿಳಿಸಿದರು.

‘ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ 361 ಜನರು ಪಾಲ್ಗೊಂಡಿದ್ದರು. ಇದರಲ್ಲಿ 66 ಜನರು ಚಿತ್ರದುರ್ಗದವರು ಎಂಬ ಮಾಹಿತಿ ಲಭ್ಯವಾಗಿದೆ. ಇವರನ್ನು ಪತ್ತೆ ಮಾಡಿ ಪ್ರಯಾಣದ ಮಾಹಿತಿ (ಟ್ರಾವೆಲ್‌ ಹಿಸ್ಟರಿ) ಕೆದಕಲಾಗಿದೆ. ಇವರು ದೆಹಲಿಗೆ ಹೋಗಿದ್ದರು ಎಂಬುದಕ್ಕೆ ಪುರಾವೆ ಸಿಕ್ಕಿಲ್ಲ. ಆದರೂ, ಈ ಎಲ್ಲರ ಮೇಲೆ ನಿಗಾ ಇಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಚಳ್ಳಕೆರೆಯ 23 ಜನರು ಗುಜರಾತ್‌ಗೆ ಭೇಟಿ ನೀಡಿದ್ದರು. ಏ.1ರಂದು 11 ಹಾಗೂ ಏ.6ರಂದು 12 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಹೊಸದುರ್ಗದ 18 ಜನರು ಕೂಡ ಸೂರತ್‌ನಿಂದ ಮರಳಿದ್ದಾರೆ. ಇವರನ್ನು ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ. ಹಿರಿಯೂರಿನ 11 ಜನರು ಜೆಎಂಐಟಿ ಕಾಲೇಜು ಹಾಸ್ಟೆಲ್‌ ಹಾಗೂ ಚಿತ್ರದುರ್ಗದ 12 ಜನರು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದಾರೆ’ ಎಂದು ವಿವರಿಸಿದರು.

200ರ ಬದಲು 20 ವೆಂಟಿಲೇಟರ್‌!
ಚಿತ್ರದುರ್ಗ ಜಿಲ್ಲೆಯಲ್ಲಿ ‘ಕೋವಿಡ್‌–19’ ಉಲ್ಬಣಿಸಿದರೆ ಕನಿಷ್ಠ 200 ವೆಂಟಿಲೇಟರ್‌ ಬೇಕಾಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂದಾಜಿಸಿದೆ. ಆದರೆ, ಈಗ ಲಭ್ಯ ಇರುವುದು 20 ಮಾತ್ರ!

‘ಸೋಂಕು ಕಾಣಿಸಿಕೊಂಡ ಶೇ 80ರಷ್ಟು ಜನರಿಗೆ ಕಾಯಿಲೆ ವಾಸಿಯಾಗುತ್ತದೆ. ಶೇ 20ರಷ್ಟು ಜನರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಶೇ 2ರಷ್ಟು ಜನರಿಗೆ ಮಾತ್ರ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸುವ ಅಗತ್ಯವಿರುತ್ತದೆ. ಜಿಲ್ಲೆಯ ಜನಸಂಖ್ಯೆಯನ್ನು ಆಧರಿಸಿ ಇಲಾಖೆ ವಿಶ್ಲೇಷಣೆ ಮಾಡಿದ ಪ್ರಕಾರ ಕನಿಷ್ಠ 200 ವೆಂಟಿಲೇರ್‌ಗಳಾದರೂ ಬೇಕಾಗುತ್ತದೆ. ಬಸವೇಶ್ವರ ಆಸ್ಪತ್ರೆಯಲ್ಲಿ 18 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 2 ವೆಂಟಿಲೇಟರ್‌ ಮಾತ್ರ ಲಭ್ಯ ಇವೆ’ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.