ADVERTISEMENT

ನಾಯಕನಹಟ್ಟಿ: ಸೌಕರ್ಯವಿಲ್ಲದೆ ಪಾಳುಬಿದ್ದ ಮಸಣಗಳು

ನಾಯಕನಹಟ್ಟಿ ಮತ್ತು ತಳಕು ಹೋಬಳಿಯಲ್ಲಿ ಸ್ಮಶಾನಗಳ ಅವ್ಯವಸ್ಥೆ

ವಿ.ಧನಂಜಯ
Published 26 ನವೆಂಬರ್ 2022, 4:02 IST
Last Updated 26 ನವೆಂಬರ್ 2022, 4:02 IST
ಮೂಲಸೌಕರ್ಯಗಳಿಂದ ವಂಚಿತ ತಳಕು ಗ್ರಾಮದ ಸ್ಮಶಾನದ ಚಿತ್ರಣ.
ಮೂಲಸೌಕರ್ಯಗಳಿಂದ ವಂಚಿತ ತಳಕು ಗ್ರಾಮದ ಸ್ಮಶಾನದ ಚಿತ್ರಣ.   

ನಾಯಕನಹಟ್ಟಿ: ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಬರುವವರನ್ನು ಹೈರಾಣುಗೊಳಿಸುವ ಹೀನಾಯ ಸ್ಥಿತಿ ನಾಯಕನಹಟ್ಟಿ ಮತ್ತು ತಳಕು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ ಸ್ಮಶಾನಗಳಲ್ಲಿ ಕಂಡುಬರುತ್ತದೆ.

ಸ್ಮಶಾನದ ಹಾದಿಯಿಂದ ಹಿಡಿದು ಶವವನ್ನು ಹೂಳುವ ಸ್ಥಳದವರೆಗೂ ಎಲ್ಲೆಂದರಲ್ಲಿ ತಗ್ಗುಗುಂಡಿಗಳು, ಆಳೆತ್ತರದ ಜಾಲಿಗಿಡಗಳು, ಲಂಟಾನು ಪೊದೆಗಳು, ಬೆಳೆದು ನಿಂತಿರುವ ಗಿಡಗಂಟಿಗಳು, ವ್ಯಕ್ತಿ ಕೊನೆಗಾಲದಲ್ಲಿ ಬಳಸಿದ ಚಾಪೆ-ದಿಂಬು ಹಾಸಿಗೆಗಳು (ಕುಟುಂಬ ಸದಸ್ಯರು ಎಸೆದು ಹೋಗಿರುವಂಥವು), ಹಳೆ ಮನೆಗಳ ತ್ಯಾಜ್ಯವನ್ನು ಸ್ಮಶಾನಗಳಲ್ಲಿ ಎಸೆಯಲಾಗಿದೆ. ನಿರ್ವಹಣೆಯ ಕೊರತೆಯಿಂದಾಗಿ ಹೋಬಳಿ ವ್ಯಾಪ್ತಿಯ ಬಹುತೇಕ ಸ್ಮಶಾನಗಳು ವಿಷಜಂತುಗಳ ಆವಾಸ ಸ್ಥಾನವಾಗಿವೆ.

ನಾಯಕನಹಟ್ಟಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮುಸ್ಲಿಂ ಸಮುದಾಯಗಳಳಿಗೆ ಸ್ಮಶಾನ ಜಾಗ ಮೀಸಲಿರಿಸಲಾಗಿದೆ. ಇದರಲ್ಲಿ ಮುಸ್ಲಿಂ ಮತ್ತು ವೀರಶೈವ ಲಿಂಗಾಯತ ಸಮುದಾಯದ ರುದ್ರಭೂಮಿಗಳು ಮಾತ್ರ ಕಾಂಪೌಂಡ್, ನೀರು, ನೆರಳಿನ ವ್ಯವಸ್ಥೆ ಸೇರಿ ಸಮರ್ಪಕ ಸೌಲಭ್ಯ ಹೊಂದಿವೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಮಶಾನಗಳು ಸೌಕರ್ಯಗಳಿಂದ ವಂಚಿತವಾಗಿವೆ. ಕುರುಬ ಸಮುದಾಯಕ್ಕೆ ಸ್ಮಶಾನ ಮಂಜೂರಾಗಿದೆ. ಆದರೆ, ಅಭಿವೃದ್ಧಿಯಾಗಿಲ್ಲ.

ADVERTISEMENT

ಬ್ರಾಹ್ಮಣ, ಗೊಲ್ಲ, ರೆಡ್ಡಿ, ಮಡಿವಾಳ, ಈಡಿಗ, ಆರ್ಯವೈಶ್ಯ ಸಮುದಾಯಗಳಿಗೆ ಪ್ರತ್ಯೇಕ ಸ್ಮಶಾನ ಜಾಗ ಮಂಜೂರಾಗಿಲ್ಲ. ಆದರೂ ಅನಿವಾರ್ಯವಾಗಿ ಕೋಲಮ್ಮನಹಳ್ಳಿ ರಸ್ತೆ, ಮಾದಯ್ಯನಹಟ್ಟಿ ರಸ್ತೆ ಬಳಿ ಇರುವ ಕಾಳಿಕಾದೇವಿ ದೇವಾಲಯದ ಪಕ್ಕದಲ್ಲಿರುವ ಚಿಕ್ಕಜಾಗದಲ್ಲಿ, ರೈತ ಸಂಪರ್ಕ ಕೇಂದ್ರದ ಹಿಂಬದಿ ಇರುವ ಜಾಗದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಮಾದಯ್ಯನಹಟ್ಟಿ ಮಜಿರೆ ಗ್ರಾಮದಲ್ಲಿ 1,200ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೇ ಹೆಚ್ಚಿದ್ದಾರೆ. ಆದರೆ, ಗ್ರಾಮಕ್ಕೆ ಸ್ಮಶಾನವಿಲ್ಲ. ಜಾಗನೂರಹಟ್ಟಿ ಗ್ರಾಮಕ್ಕೂ ಸ್ಮಶಾನಕ್ಕೆ ಜಾಗ ಇಲ್ಲ. ಊರ ಹೊರಗಿನ ಹಳ್ಳದ ಗಡ್ಡೆಗೆ ಶವಗಳನ್ನು ಹೊತ್ತು ತಂದು ಅಂತ್ಯಕ್ರಿಯೆ ಮುಗಿಸುತ್ತಾರೆ. ಗಂಗಯ್ಯನಹಟ್ಟಿ, ಚನ್ನಬಸಯ್ಯನಹಟ್ಟಿ ಜನರು ಮಲ್ಲೂರಹಟ್ಟಿ ರಸ್ತೆಯ ಬಳಿ ದಟ್ಟವಾಗಿ ಬೆಳೆದಿರುವ ಸೀಮೆ ಜಾಲಿ ಗಿಡಗಳ ಮಧ್ಯೆ ಇರುವ ಹಳ್ಳದಲ್ಲಿ ಹೂಳುತ್ತಾರೆ. ಕೊಂಡಯ್ಯನ ಕಪಿಲೆ ಭಾಗದ ಜನರು 2 ಕಿ.ಮೀ. ದೂರದಿಂದ ಶವವನ್ನು ಹೊತ್ತು ಇಲ್ಲಿಗೇ ಬರಬೇಕಿದೆ. ಇದರಿಂದ ಬೇಸರಗೊಂಡ ಹಲವರು ತಮ್ಮ ತಮ್ಮ ಜಮೀನುಗಳಲ್ಲಿಯೇ ಶವಸಂಸ್ಕಾರ ನೆರವೇರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿರುವ ಸ್ಮಶಾನವು ತಗ್ಗು ಪ್ರದೇಶದಲ್ಲಿದ್ದು, ಮಳೆ ಬಂದರೆ ಜಲಾವೃತವಾಗುತ್ತದೆ. ಕೆಸರುಗದ್ದೆಯಂತಾಗುವ ಜಾಗದಲ್ಲಿ ಶವಗಳನ್ನು ಹೂಳುವ ಪರಿಸ್ಥಿತಿಯಿದೆ. ಅಬ್ಬೇನಹಳ್ಳಿ ಗ್ರಾಮದ ಸ್ಮಶಾನವು ಜಿನಗಿ ಹಳ್ಳಕ್ಕೆ ಹೊಂದಿಕೊಂಡಿದ್ದು, ಸೌಕರ್ಯಗಳಿಲ್ಲದೆ ಸೊರಗಿದೆ. ಮಲ್ಲೆಬೋರನಹಟ್ಟಿ, ಮುಸ್ಟಲಗುಮ್ಮಿ, ಕೊರಡಿಹಟ್ಟಿ ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿ ಮಂಜೂರಾದರೂ ಸ್ಮಶಾನ ಅಭಿವೃದ್ಧಿ ಸಾಧ್ಯವಾಗಿಲ್ಲ. ಗಿಡ್ಡಾಪುರದ ಬಳಿ ಸರ್ಕಾರ ಜಮೀನು ಮಂಜೂರು ಮಾಡಿದರೂ ಸೀಮೆ ಜಾಲಿ ಗಿಡಗಳ ಮಧ್ಯೆ ಸಾಗಲು ಕಷ್ಟವಾಗುತ್ತದೆ ಎಂದು ರಸ್ತೆ ಪಕ್ಕ ರೈತರು ಸಾಗುವಳಿ ಮಾಡಿರುವ ಜಮೀನಿನಲ್ಲಿಯೇ ಶವಸಂಸ್ಕಾರ ಮಾಡಲಾಗುತ್ತಿದೆ.

ತಳಕು ಹೋಬಳಿಯ ಬಹುತೇಕ ಸ್ಮಶಾನಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹಳ್ಳಕೊಳ್ಳಗಳ ದಂಡೆಯ ಬಳಿಯಲ್ಲಿ, ಸೀಮೆ ಜಾಲಿಗಿಡಗಳ ಮಧ್ಯದಲ್ಲಿ ಶವಗಳನ್ನು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. ತಳಕು ಗ್ರಾಮದ ಹೊರ ವಲಯದಲ್ಲಿರುವ ಸ್ಮಶಾನವು ಹಲವು ವರ್ಷಗಳಿಂದ ಪಾಳುಬಿದ್ದಿದೆ.

ಗ್ರಾ.ಪಂ. ಆಡಳಿತ ಅಭಿವೃದ್ಧಿ ಕೈಗೊಳ್ಳಲಿ
ಚಳ್ಳಕೆರೆ ತಾಲ್ಲೂಕಿನಲ್ಲಿ 182 ಕಂದಾಯ ಗ್ರಾಮಗಳು, 101 ಮಜಿರೆ ಗ್ರಾಮಗಳಿದ್ದು, ಬಹುತೇಕ ಎಲ್ಲ ಗ್ರಾಮಗಳಿಗೂ ಸ್ಮಶಾನಗಳನ್ನು ಹಂತಹಂತವಾಗಿ ಮಂಜೂರು ಮಾಡಲಾಗುತ್ತಿದೆ. ಸ್ಮಶಾನಗಳಿಗೆ ಭೂಮಿ ನೀಡುವುದು ಕಂದಾಯ ಇಲಾಖೆಯ ಜವಾಬ್ದಾರಿ. ಗ್ರಾಮ ಪಂಚಾಯಿತಿ ಆಡಳಿತ ಸ್ಮಶಾನಗಳ ನಿರ್ವಹಣೆಗೆ ಗಮನ ಹರಿಸಬೇಕು.
– ಎನ್. ರಘುಮೂರ್ತಿ, ತಹಶೀಲ್ದಾರ್

*
ಪಟ್ಟಣದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನವಿಲ್ಲ. ಪಟ್ಟಣದ ರೈತ ಸಂಪರ್ಕ ಕೇಂದ್ರದ ಹಿಂದಿನ ಜಾಗದಲ್ಲಿ ಶವ ಸಂಸ್ಕಾರ ನಡೆಸಲಾಗುತ್ತಿದೆ. ಸ್ಮಶಾನಕ್ಕಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
-ಬಿ. ಗೋಪಿ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.