ADVERTISEMENT

ಅಂಗವಿಕಲರು ಕೀಳರಿಮೆ ತೊರೆಯಿರಿ: ರಂಗಸ್ವಾಮಿ

ವಿಶ್ವ ಅಂಗವಿಕಲರ ದಿನಾಚರಣೆ; ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:10 IST
Last Updated 4 ಡಿಸೆಂಬರ್ 2025, 6:10 IST
ಚಿತ್ರದುರ್ಗದ ವಾಲ್ಮೀಕಿ ಸಮುದಾಯ ಭವನದಲ್ಲಿ ಬುಧವಾರ ನಡೆದ ವಿಶ್ವ ಅಂಗವಿಲರ ದಿನಾಚರಣೆ ಕಾರ್ಯಕ್ರಮವನ್ನು ಅತಿಥಿಗಳು ಅಂಗವಿಕಲ ವ್ಯಕ್ತಿಯಿಂದಲೇ ಉದ್ಘಾಟನೆ ಮಾಡಿಸಿದರು
ಚಿತ್ರದುರ್ಗದ ವಾಲ್ಮೀಕಿ ಸಮುದಾಯ ಭವನದಲ್ಲಿ ಬುಧವಾರ ನಡೆದ ವಿಶ್ವ ಅಂಗವಿಲರ ದಿನಾಚರಣೆ ಕಾರ್ಯಕ್ರಮವನ್ನು ಅತಿಥಿಗಳು ಅಂಗವಿಕಲ ವ್ಯಕ್ತಿಯಿಂದಲೇ ಉದ್ಘಾಟನೆ ಮಾಡಿಸಿದರು   

ಚಿತ್ರದುರ್ಗ: ‘ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆ ಜೀನವ ನಡೆಸಬೇಕಾದರೆ ಅವರು ತಮ್ಮೊಳಗಿನ ಕೀಳರಿಮೆ ತೊರೆಯಬೇಕು. ಮುನ್ನೆಲೆಗೆ ಬಂದು ಬದುಕು ಕಟ್ಟಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಹೇಳಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.

‘ವಿಕಲಚೇತನರಿಗೆ ಅನುಕಂಪಕ್ಕಿಂತಲೂ ಅವಕಾಶಗಳು ಸಿಗಬೇಕಾಗಿದೆ. ಸಮಾಜಮುಖಿಯಾಗಿ ಜೀವನ ನಡೆಸುವಂತಾಗಬೇಕು. ಅಂಗವಿಕಲರ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ತಮ್ಮ ಆಸಕ್ತಿಯನ್ನು ಅರಿತು ಆ ಕ್ಷೇತ್ರದಲ್ಲೇ ತಮ್ಮ ಬದುಕು ಕಟ್ಟಿಕೊಳ್ಳಬೇಕು’ ಎಂದರು.

ADVERTISEMENT

‘ಅಂಗವಿಕಲರಿಗಾಗಿ ಸರ್ಕಾರದ ವಿವಿಧ ಯೋಜನೆಗಳ ಅಡಿ ಸೌಲಭ್ಯ ನೀಡಲಾಗುತ್ತಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ ‘ಅಂಗವಿಕಲರು ಬದುಕು ಕಟ್ಟಿಕೊಳ್ಳಲು ಸರ್ಕಾರದ ಸಹಾಯಹಸ್ತ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂಗವಿಕಲರ ಅಭಿವೃದ್ಧಿಗೆ ಸಾಕಷ್ಟು  ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿವೆ’ ಎಂದರು.

ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ ‘ಸ್ಥಳೀಯ ಸಂಸ್ಥೆಗಳು ಅಂಗವಿಕಲರಿಗೆ ಶೇ 5ರಷ್ಟು ಅನುದಾನ ಮೀಸಲಿಟ್ಟು ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು. ಅಂಗವಿಕಲರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣಬೇಕಾದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ ‘2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 35,971 ಅಂಗವಿಕಲರಿದ್ದರು. ಸಾಮಾನ್ಯರಂತೆ ಜೀವಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಅವರಿಗೆ ನೀಡಲಾಗುತ್ತಿದೆ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಪ್ರಕಾರ 21 ವಿಧದ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ನಿಯಮಗಳು 2019 ಕೂಡಾ ಜಾರಿಯಲ್ಲಿದೆ’ ಎಂದರು.

ಅಂಗವಿಕಲ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹೊಳಲ್ಕೆರೆಯ ಧನಂಜಯ, ಹೊಸದುರ್ಗದ ಕೆ.ಎಚ್.ಭರತ್, ಮೊಳಕಾಲ್ಮುರಿನ ಬಿ.ಪ್ರೇಮಕುಮಾರ, ಚಿತ್ರದುರ್ಗದ ಜಿ.ಎಂ.ಚೇತನ, ಚಳ್ಳಕೆರೆ ಎ.ಮಾನಸ ಹಾಗೂ ಹಿರಿಯೂರಿನ ಸಿ.ಸಂಗೀತಾ ಅವರನ್ನು ಅಭಿನಂದಿಸಲಾಯಿತು.

ತಾಲ್ಲೂಕಿನ ಮಾನಂಗಿ ಗ್ರಾಮದ ಅಂಗವಿಕಲರಾದ ಬಿ.ಕುಮಾರಸ್ವಾಮಿ ಹಾಗೂ ಕಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ನೆಹರೂ ನಗರದ ಆರ್.ಶ್ರೀಚಿತ್ರಾ ಹಾಗೂ ಅಂಗವಿಲಕರ ಸಾಧನೆಗೆ ಸ್ಫೂರ್ತಿಯಾಗಿರುವ ನೀಡಿದ ಲಾಸಿಕಾ ಫೌಂಡೇಷನ್‍ನ ಕಾರ್ಯದರ್ಶಿ ಮಂಜುನಾಥ್ ಅವರಿಗೆ ಅಭಿನಂದಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‌ ಪೀರ್‌, ಡಿವೈಎಸ್‌ಪಿ ಪಿ.ಕೆ.ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ ಕುಮಾರ್, ನಿರೂಪಣಾಧಿಕಾರಿ ಮಂಜುನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.