ADVERTISEMENT

ಗೋವಿಂದ ಕಾರಜೋಳ ವಿರುದ್ಧ ಎಸ್ಟಿ ಮುಖಂಡರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 16:11 IST
Last Updated 31 ಮಾರ್ಚ್ 2024, 16:11 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ದ ಎಸ್ಟಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಎಸ್ಟಿ ಮೀಸಲು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 60,000ಕ್ಕೂ ಹೆಚ್ಚು ಎಸ್ಟಿ ಸಮುದಾಯದ ಮತಗಳಿವೆ. ಈ ಸಮುದಾಯದಲ್ಲಿ ಬಿಜೆಪಿ ನಿಷ್ಠಾವಂತ ನಾಯಕರಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕೆಲವೇ ಕೆಲವು ನಾಯಕರನ್ನು ಹಿಂದೆ ಇಟ್ಟುಕೊಂಡು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ’ ಎಂದು ಭಾನುವಾರ ನಡೆದ ಸಭೆಯಲ್ಲಿ ಬೇಸರ ಹೊರಹಾಕಿದರು.

ಕಾರಜೋಳ ಅವರು ಮಾ.30ರಂದು ಶನಿವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕ್ಷೇತ್ರ ಪ್ರವಾಸ ಮಾಡುವ ಮಾಹಿತಿ ಯಾರಿಗೂ ತಿಳಿಸಿಲ್ಲ ಎಂದು ನಗರಸಭೆ ಸದಸ್ಯ ಜಯಣ್ಣ ಹೇಳಿದರು. 

ADVERTISEMENT

ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದರೆ ಲೋಕಸಭಾ ಚುನಾವಣೆಯಲ್ಲಿ ಎಸ್ಟಿ ಸಮುದಾಯ ಕಾರಜೋಳ ಅವರನ್ನು ಬೆಂಬಲಿಸುವುದಿಲ್ಲ ಎಂದು ಮೊಳಕಾಲ್ಮುರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದರು.

ಎಸ್ಟಿ ಮೋರ್ಚಾ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎ.ಅನಿಲ್‍ಕುಮಾರ್, ಮುಖಂಡ ಜಯರಾಂ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದೊರೆ ಬೈಯಣ್ಣ, ನಗರಸಭೆ ಸದಸ್ಯ ವೆಂಕಟೇಶ್, ಈಶ್ವರನಾಯ್ಕ, ಸದಸ್ಯೆ ಪಾಲಮ್ಮ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎನ್.ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.