ADVERTISEMENT

ಚಿತ್ರದುರ್ಗ: ಹಿಂದೂ ಮಹಾಗಣಪತಿ ವಿಸರ್ಜನೆ, ಶೋಭಾಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 7:40 IST
Last Updated 17 ಸೆಪ್ಟೆಂಬರ್ 2022, 7:40 IST
   

ಚಿತ್ರದುರ್ಗ: ಹಿಂದೂ ಮಹಾಗಣಪತಿಯ ವಿಸರ್ಜನೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಶನಿವಾರ ಏರ್ಪಡಿಸಿದ ಶೋಭಾಯಾತ್ರೆ ಆರಂಭವಾಗಿದೆ. ಜೈನಧಾಮದಿಂದ ಮಧ್ಯಾಹ್ನ 12ಕ್ಕೆ ಹೊರಟ ಯಾತ್ರೆ ಚಂದ್ರವಳ್ಳಿಯಲ್ಲಿ ಅಂತ್ಯವಾಗಲಿದ್ದು, ಗಣೇಶ ಮೂರ್ತಿಯು ತಡರಾತ್ರಿ ವಿಸರ್ಜನೆಯಾಗಲಿದೆ.

ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಂಬರೀಶ್‌ ಸಿಂಗ್‌ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ವಿ.ಡಿ. ಸಾವರ್ಕರ್, ಶ್ರೀರಾಮ, ಶಿವಾಜಿ ಹಾಗೂ ಹನುಮಂತನ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿ ಅನೇಕರು ಇದ್ದರು.

ಕೋವಿಡ್‌ ಕಾರಣಕ್ಕೆ ಎರಡು ವರ್ಷ ಶೋಭಾಯಾತ್ರೆ ಸರಳವಾಗಿ ನಡೆದಿತ್ತು. ಈ ಬಾರಿ ನಿರೀಕ್ಷೆಗೂ ಮೀರಿದ ಜನ ಸೇರುತ್ತಿದ್ದಾರೆ. ಶೋಭಾಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಮೂರು ಡಿ.ಜೆ ಗಳಿದ್ದು ಸಂಗೀತಕ್ಕೆ ಯುವಕರು ಹೆಜ್ಜೆ ಹಾಕುತ್ತಿದ್ದಾರೆ.

ADVERTISEMENT

ಶೋಭಾಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಕೇಸರಿಮಯವಾಗಿದೆ. ಗಾಂಧಿ ವೃತ್ತ, ಮದಕರಿ ನಾಯಕ ವೃತ್ತ, ಕನಕ ವೃತ್ತ, ಒನಕೆ ಓಬವ್ವ ವೃತ್ತ, ವಾಸವಿ ವೃತ್ತ, ಸಂಗೋಳ್ಳಿ ರಾಯಣ್ಣ ಪ್ರತಿಮೆಗಳನ್ನು ಸಿಂಗರಿಸಲಾಗಿದೆ. ಹತ್ತಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಿವೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಭದ್ರತೆಗೆ ಕೆಎಸ್‌ಆರ್‌ಪಿಯ 8, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಆರ್) 8 ತುಕಡಿ ನಿಯೋಜಿಸಲಾಗಿದೆ. 9 ಚೆಕ್‌ಪೋಸ್ಟ್‌ ಸ್ಥಾಪಿಸಿದ್ದು, ಮೆರವಣಿಗೆ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.