ಚಿತ್ರದುರ್ಗ: ಜಿಲ್ಲೆಯ ಶಿಕ್ಷಕರ ವಿವಿಧ ಚಟುವಟಿಕೆಗಳ ಸ್ಥಳವಾಗಬೇಕಿದ್ದ ಗುರುಭವನ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರದ ಹೃದಯ ಭಾಗ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಗುರುಭವನ ಪಾಳುಕಟ್ಟಡದಂತಿದ್ದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಹಳೇ ಮಾಧ್ಯಮಿಕ ಶಾಲಾ ಕ್ರೀಡಾಂಗಣದ ಸುತ್ತಲೂ ಹಲವು ಸರ್ಕಾರಿ ಕಚೇರಿಗಳಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸರ್ಕಾರಿ ಉರ್ದು ಶಾಲೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಹಲವು ಕಟ್ಟಡಗಳಿದ್ದು ಗುರುಭವನವೂ ಒಂದು. ರಸ್ತೆಬದಿಯಲ್ಲೇ ಇರುವ ಈ ಗುರುಭವನವನ್ನು ನೋಡಿದರೆ ಪಾಳು ಕಟ್ಟಡದಂತೆ ಕಾಣುತ್ತದೆ.
ಗುರುಭವನವನ್ನು ಜಿಲ್ಲಾಡಳಿತ ಹಲವು ವರ್ಷಗಳಿಂದ ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿತ್ತು. ಮೊದಲ ಹಾಗೂ ಮೇಲ್ಮಹಡಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿತ್ತು. 2023ರ ವಿಧಾನಸಭಾ ಚುನಾವಣೆವರೆಗೂ ಈ ಕಾರ್ಯಕ್ಕೆ ಬಳಕೆಯಾಗಿತ್ತು. ಆದರೆ ಈಗ ಇವಿಎಂ ಸಂಗ್ರಹಕ್ಕೆ ಬೇರೆ ಕಟ್ಟಡ ಪಡೆಯಲಾಗಿದ್ದು ಗುರುಭವನ ಸಂಪೂರ್ಣವಾಗಿ ಪಾಳು ಬಿದ್ದಿದೆ.
1995–96ರಲ್ಲಿ ಶಿಕ್ಷಕರ ಹಣದಲ್ಲಿ ನಿರ್ಮಾಣವಾದ ಭವನ ಶಿಕ್ಷಕ ಬಳಗದ ಹಲವು ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಶಿಕ್ಷಕರ ಮಕ್ಕಳ ಮದುವೆ, ನಾಮಕರಣ ಮುಂತಾದ ಚಟುವಟಿಕೆಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಯಾವ ಚಟುವಟಿಕೆಗಳೂ ಬಳಸಲಾಗದ ಸ್ಥಿತಿಯಲ್ಲಿ ಗುರುಭವನ ಇದ್ದು ಜಿಲ್ಲಾ ಕೇಂದ್ರದಲ್ಲಿ ಒಂದು ಭವನ ಇಲ್ಲವೆಂಬ ಕೊರಗು ಶಿಕ್ಷಕರನ್ನು ಕಾಡುತ್ತಿದೆ.
ಭವನದ ಕೆಳ ಮಹಡಿಯಲ್ಲಿ ಕೊಳಕು ತುಂಬಿಕೊಂಡಿದ್ದು ಅಲ್ಲಿಗೆ ಮಳೆ ನೀರು ನುಗ್ಗಿದೆ. ಕಟ್ಟೆಯಂತೆ ನೀರು ನಿಂತಿರುವ ಕಾರಣ ಕಟ್ಟಡದ ಭದ್ರತೆಗೆ ಹಾನಿಯಾಗಿದೆ. ಎಲ್ಲೆಂದರಲ್ಲಿ ಬೀಡಿ, ಸಿಗರೇಟು ತುಂಡುಗಳು, ಮದ್ಯದ ಬಾಟಲಿಗಳು ಬಿದ್ದು ಚೆಲ್ಲಾಡುತ್ತಿವೆ. ಕ್ರೀಡಾಂಗಣದಲ್ಲಿ ಹಲವು ಶಾಲೆಗಳ ಮಕ್ಕಳು ಆಟವಾಡುತ್ತಾರೆ, ಸಾರ್ವಜನಿಕರು ಓಡಾಡುತ್ತಾರೆ. ಆದರೆ ಇಲ್ಲಿ ಎಲ್ಲೂ ಒಂದು ಶೌಚಾಲಯವಿಲ್ಲ. ಹೀಗಾಗಿ ಜನರು ಗುರುಭವನದ ಗೋಡೆಗಳನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.
ಭವನದ ಹಿಂಭಾಗದಲ್ಲಿರುವ ಒಂದು ಕೊಠಡಿಯಲ್ಲಿ ನಿವೃತ್ತ ನೌಕರರ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈಗ ಅದೂ ಇಲ್ಲವಾಗಿದ್ದು ಕುಡುಕರು, ಕಿಡಿಗೇಡಿಗಳು ಮಲಗುವ ತಾಣವಾಗಿದೆ. ಸಂಜೆಯಾಯಿತೆಂದರೆ ಇಲ್ಲಿ ಒಬ್ಬೊಬ್ಬರೇ ಓಡಾಡಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಭವನದ ಸುತ್ತಲೂ ಇರುವ ಕಬ್ಬಿಣದ ಕಿಟಕಿ, ಸರಳುಗಳು ಕಳ್ಳರ ಪಾಲಾಗಿವೆ.
ಭವನದ ಮುಖ್ಯ ದ್ವಾರದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಕಟ್ಟಡದ ಕೆನೊಪಿಯಲ್ಲಿ ಮರಗಳ ಬೇರು ಇಳಿದಿವೆ. ಭವನ ಚುನಾವಣಾ ಭದ್ರತಾ ಕೊಠಡಿಯೂ ಆಗಿದ್ದ ಕಾರಣ ಕಟ್ಟಡದ ಚಿತ್ರಣವೇ ಬದಲಾಗಿ ಹೋಗಿದೆ. ನಿಯಮಾನುಸಾರ ಕಿಟಕಿಗಳನ್ನು ಇಟ್ಟಿಗೆ ಕಟ್ಟಿ ಮುಚ್ಚಲಾಗಿದೆ. ಹೀಗಾಗಿ ಭವನವನ್ನು ಯಾವುದೇ ಚಟುವಟಿಕೆಗಳಿಗೂ ಬಳಸಲಾಗದ ಪರಿಸ್ಥಿತಿ ಇದೆ.
‘ದಿವ್ಯಪ್ರಭು ಅವರು ಜಿಲ್ಲಾಧಿಕಾರಿಯಾಗಿದ್ದಾಗ ಗುರುಭವನ ದುರಸ್ತಿ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೆವು. ಕಟ್ಟಡ ದುರಸ್ತಿ ಮಾಡಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಭವನ ದುರಸ್ತಿಯಾಗಿಲ್ಲ, ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಮಹಾಂತೇಶ್ ಹೇಳಿದರು.
ಲಾಭ ತರುತ್ತಿದ್ದ ಗುರುಭವನ: ಜಿಲ್ಲಾಡಳಿತ ಗುರುಭವನವನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳುವುದಕ್ಕೂ ಮೊದಲು ಭವನವನ್ನು ವಾಣಿಜ್ಯ ಉದ್ದೇಶಗಳಿಗೂ ನೀಡಲಾಗುತ್ತಿತ್ತು. ಖಾಸಗಿ ವಸ್ತುಪ್ರದರ್ಶನ, ಮಾರಾಟ ಮೇಳ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಬಂದ ಹಣವನ್ನು ಶಿಕ್ಷಕರ ಕಲ್ಯಾಣ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.
‘ಶಿಕ್ಷಕರ ಬೆವರ ಹನಿಯಿಂದ ನಿರ್ಮಾಣಗೊಂಡಿರುವ ಗುರುಭವನವನ್ನು ಕೆಟ್ಟ ಸ್ಥಿತಿಯಲ್ಲಿ ಬಿಟ್ಟಿರುವುದನ್ನು ನೋಡಿದರೆ ನೋವಾಗುತ್ತದೆ. ಈಗಲಾದರೂ ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಗುರುಭವನ ನಿರ್ಮಾಣ ಮಾಡಬೇಕು. ಈಗಿರುವ ಗುರುಭವನ ದುರಸ್ತಿ ಮಾಡಲಾಗದ ರೀತಿಯಲ್ಲಿ ಹಾಳಾಗಿದೆ. ಹೀಗಾಗಿ ಅದೇ ಜಾಗದಲ್ಲಿ ಹೊಸ ಗುರುಭವನ ನಿರ್ಮಾಣ ಮಾಡಬೇಕು’ ಶಿಕ್ಷಕರು ಒತ್ತಾಯಿಸಿದರು.
ಜಿಲ್ಲಾ ಕೇಂದ್ರದಲ್ಲಿ ಇಲ್ಲದ ಸುಸಜ್ಜಿತ ಗುರುಭವನ ಶಿಕ್ಷಕರ ಚುಟುವಟಿಕೆಗಳಿಗೆ ಇಲ್ಲವಾದ ಸ್ಥಳ ಶಿಕ್ಷಕರ ಬೆವರ ಹನಿಗೆ ಬೆಲೆಯೇ ಇಲ್ಲವೇ?
ನಾನು ಹೊಸದಾಗಿ ಬಂದಿದ್ದೇನೆ ಗುರುಭವನ ದುರಸ್ತಿ ಪ್ರಯತ್ನ ಎಲ್ಲಿಯವರೆಗೆ ಬಂದಿದೆ ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆನಾಸಿರುದ್ದೀನ್ ಡಿಡಿಪಿಐ ಗುರುಭವನ ಸಮಿತಿ ಅಧ್ಯಕ್ಷ
ಜಿಲ್ಲಾ ಕೇಂದ್ರದ ಗುರುಭವನವನ್ನು ತೀರಾ ಕೆಟ್ಟದಾಗಿ ಇಟ್ಟುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಗುರುಭವನಗಳು ಚೆನ್ನಾಗಿದ್ದರೆ ಶಿಕ್ಷಕರ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳಿಗೂ ಒಳ್ಳೆಯದಾಗುತ್ತದೆಎಚ್.ಏಕಾಂತಪ್ಪ ಪ್ರಜಾರಕ್ಷಣಾ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.