ADVERTISEMENT

ಕಲಿಕೆಯಿಂದ ಮಕ್ಕಳು ವಿಮುಖರಾಗಬಾರದು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 14:55 IST
Last Updated 4 ಡಿಸೆಂಬರ್ 2020, 14:55 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇದ್ದಾರೆ.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇದ್ದಾರೆ.   

ಚಿತ್ರದುರ್ಗ: ಕೋವಿಡ್‌ ಕಾರಣಕ್ಕೆ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳು ಕಲಿಕೆಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರಿ ಶಾಲೆ ಶಿಕ್ಷಕರು ಹೆಚ್ಚು ಮುತುವರ್ಜಿಯಿಂದ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸರ್ವಶಿಕ್ಷಣ ಅಭಿಯಾನದ ನಿರ್ದೇಶಕರೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ರೂಢಿಸಿ. ನಿರಂತರ ಕಲಿಕೆಯಲ್ಲಿ ತೊಡಗಿಸಲು ಕ್ರಮವಹಿಸಿ. ಗ್ರಂಥಾಲಯಗಳನ್ನು ತೆರೆದು ಕಲಿಕೆಗೆ ಪ್ರೋತ್ಸಾಹಿಸಿ’ ಎಂದು ಸಲಹೆ ನೀಡಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿ ನಡೆಸುತ್ತಿವೆ. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿವೆ. ಆದರೆ, ಸರ್ಕಾರಿ ಶಾಲೆ ಮಕ್ಕಳಿಗೆ ಈ ಸೌಲಭ್ಯವಿಲ್ಲ. ಇದು ಮಕ್ಕಳಲ್ಲಿ ಓದುವ ನಿರಾಸಕ್ತಿ ಮೂಡಿಸಿದರೆ ಕಷ್ಟವಾಗುತ್ತದೆ. ಶಾಲಾ ಶಿಕ್ಷಕರನ್ನು ಹೆಚ್ಚು ತೊಡಗಿಸಿಕೊಳ್ಳಿ’ ಎಂದು ಹೇಳಿದರು.

ADVERTISEMENT

‘ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ರೈತರಲ್ಲಿ ಜಾಗೃತಿ ಮೂಡಿಸಿ. ಈ ಮೂಲಕ ನೋಂದಣಿ ಪ್ರಮಾಣ ಹೆಚ್ಚಳ ಮಾಡಬೇಕು. ರೈತರ ಹಿತದೃಷ್ಠಿಯಿಂದ ಎಲ್ಲ ರೈತರು ಇದರಲ್ಲಿ ನೋಂದಣಿ ಮಾಡಿಸುವಂತೆ ಕ್ರಮವಹಿಸಬೇಕು’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ, ‘ಮುಂಗಾರು ಹಂಗಾಮಿನಲ್ಲಿ 85,912 ರೈತರು ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ 1,619 ರೈತರು ನೋಂದಣಿ ಮಾಡಿಸಿದ್ದಾರೆ. ಹೆಚ್ಚಿನ ಮಳೆಯಿಂದಾಗಿ ಇಳುವರಿ ಕುಂಠಿತಗೊಂಡಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

₹597 ಕೋಟಿ ಸಾಲ ಮನ್ನಾ

ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ 1.02 ಲಕ್ಷ ರೈತರ ₹597 ಕೋಟಿ ಸಾಲ ಮನ್ನಾ ಆಗಿದೆ. ಇನ್ನೂ ಹಣ ಬಿಡುಗಡೆ ಆಗಬೇಕಿರುವುದರಿಂದ ಕೆಲ ರೈತರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದ 66,196 ರೈತರ ₹427 ಕೋಟಿ ಮನ್ನಾಗೆ ಗುರುತಿಸಲಾಗಿದೆ. ₹349 ಕೋಟಿ ಬಿಡುಗಡೆಯಾಗಿದ್ದು, ₹77 ಕೋಟಿ ಬಾಕಿ ಇದೆ. ಸಹಕಾರ ವಲಯದ 36,469 ರೈತರ ₹170 ಕೋಟಿ ಮನ್ನಾ ಆಗಿದೆ. ₹151 ಕೋಟಿ ಬಿಡುಗಡೆಯಾಗಿದ್ದು, ₹18 ಕೋಟಿ ಬಾಕಿ ಇದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಇದ್ದರು.

***

ಉದ್ಯೋಗ ಖಾತ್ರಿ ಯೋಜನೆಯಡಿ 75 ಲಕ್ಷ ಮಾನವದಿನ ಸೃಜಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಶೇ 76ರಷ್ಟು ಸಾಧನೆ ಆಗಿದೆ. ಬದು ನಿರ್ಮಾಣದಲ್ಲಿ ಮೊಳಕಾಲ್ಮುರು ರಾಜ್ಯದಲ್ಲೇ ಮುಂದಿದೆ.

–ಟಿ.ಯೋಗೇಶ್‌,ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.