ADVERTISEMENT

ಹೊಂದಾಣಿಕೆ ಕೊರತೆಯಿಂದ ವಿಚ್ಛೇದನ ಹೆಚ್ಚಳ

ವೀರಶೈವ ವಧು-–ವರರ ಮುಖಾಮುಖಿ ಸಮಾವೇಶದಲ್ಲಿ ಬಸವಪ್ರಭು ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 2:44 IST
Last Updated 27 ಡಿಸೆಂಬರ್ 2021, 2:44 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 12ನೇ ವೀರಶೈವ ವಧು-ವರರ ಮುಖಾಮುಖಿ ಸಮಾವೇಶದಲ್ಲಿ ಬಸವಪ್ರಭು ಸ್ವಾಮೀಜಿ ಮಾತನಾಡಿದರು
ಚಿತ್ರದುರ್ಗದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 12ನೇ ವೀರಶೈವ ವಧು-ವರರ ಮುಖಾಮುಖಿ ಸಮಾವೇಶದಲ್ಲಿ ಬಸವಪ್ರಭು ಸ್ವಾಮೀಜಿ ಮಾತನಾಡಿದರು   

ಚಿತ್ರದುರ್ಗ: ‘ಎರಡು ಹೃದಯಗಳ ಶುಭಮಿಲನವೇ ಕಲ್ಯಾಣ. ಪರಸ್ಪರ ಒಬ್ಬರನ್ನೊಬ್ಬರು ಒಪ್ಪಿಕೊಂಡು ಸಮಾಗಮಗೊಳ್ಳುವ ದಾಂಪತ್ಯ ಸುಖಕರವಾಗಿರಲು ಗಂಡು–ಹೆಣ್ಣಿನ ಹೊಂದಾಣಿಕೆಯಿಂದ ಸಾಧ್ಯವಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿಯ ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ವೀರಶೈವ ಸಮಾಜದಿಂದ ಭಾನುವಾರ ಆಯೋಜಿಸಿದ್ದ ‘ರಾಜ್ಯಮಟ್ಟದ 12ನೇ ವೀರಶೈವ ವಧು-ವರರ ಮುಖಾಮುಖಿ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

‘ಮದುವೆಯಾಗಲು ಇಚ್ಛಿಸುವ ಗಂಡು–ಹೆಣ್ಣಿನ ನಡುವೆ ಮನಸ್ಸುಗಳು ಬೆಸೆಯಬೇಕು. ಆಗ ಸಂಸಾರ ಎಂಬ ಬಂಡಿಯ ಎರಡು ಗಾಲಿಗಳು ಸಮಾನಾಂತರವಾಗಿ ಚಲಿಸಲು ಸಾಧ್ಯ. ಜತೆಗೆ ಇಬ್ಬರೂ ತಾಳ್ಮೆಯಿಂದ ಜೀವನ ಸಾಗಿಸಬೇಕು. ಆಗ ಎಂದಿಗೂ ಬಿರುಕು ಮೂಡಲು ಸಾಧ್ಯವಿಲ್ಲ’ ಎಂದು ಸಲಹೆ ನೀಡಿದರು.

ADVERTISEMENT

‘ನಂಬಿಕೆ, ತಾಳ್ಮೆಯಿಂದ ಬದುಕು ಸಾಗಿಸುವುದು ಸುಲಭದ ಮಾತಲ್ಲ. ಅದೊಂದು ರೀತಿಯಲ್ಲಿ ದೀಕ್ಷೆ ಇದ್ದಂತೆ. ಬಹುಮುಖ ಕೌಶಲ ಮೈಗೂಡಿಸಿಕೊಂಡು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರ ಪ್ರೀತಿ ಗಳಿಸಲು ಮುಂದಾಗಬೇಕು. ಕಾಯಕ ತತ್ವದಡಿ ಜೀವನದುದ್ದಕ್ಕೂ ಸಾಗಬೇಕು’ ಎಂದರು.

‘ಮಹಾನಗರಗಳಲ್ಲಿ, ಅದರಲ್ಲೂ ವಿದ್ಯಾವಂತರೇ ಹೆಚ್ಚಾಗಿ ವಿಚ್ಛೇದನಕ್ಕೆ ಮುಂದಾಗುತ್ತಿರುವುದು ಆತಂಕದ ವಿಷಯ. ಇದಕ್ಕೆ ಹೊಂದಾಣಿಕೆಯ ಕೊರತೆಯೇ ಬಹುಮುಖ್ಯ ಕಾರಣ. ಇದರಿಂದ ಅದ್ದೂರಿಯಾಗಿ ಮದುವೆ ಮಾಡಿದ ಪೋಷಕರಿಗೆ ಹೆಚ್ಚು ನೋವುಂಟಾಗುತ್ತದೆ. ಇದಕ್ಕೆ ಆಸ್ಪದ ನೀಡದೆಯೇ, ಚಿಕ್ಕ–ಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳದೆಯೇ ಸುಂದರ ಬದುಕು ಕಟ್ಟಿಕೊಂಡರೇ ಅದೇ ಸ್ವರ್ಗ’ ಎಂದು ಸಲಹೆ ನೀಡಿದರು.

ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ. ರಾಜಶೇಖರ್, ‘ಪ್ರಸ್ತುತ ದಿನಗಳಲ್ಲಿ ಸ್ತ್ರೀಗಿಂತ ಪುರುಷರ ಸಂಖ್ಯೆ ಹೆಚ್ಚಾಗಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ರೈತಾಪಿ ಸಮುದಾಯದ ಗಂಡುಗಳಿಗೆ ಹೆಣ್ಣು ಸಿಗುವುದು ತುಂಬಾ ಕಷ್ಟವಾಗಿದೆ. ಹಳ್ಳಿಯಲ್ಲಿ ಜೀವಿಸಬೇಕು ಎಂಬ ಕಾರಣಕ್ಕೆ ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಹುಡುಗಿ ಮತ್ತು ಆಕೆಯ ಪೋಷಕರಲ್ಲಿ ಈ ಧೋರಣೆ ಬದಲಾಗಬೇಕು’ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಷಡಕ್ಷರಯ್ಯ, ಎನ್.ಬಿ. ವಿಶ್ವನಾಥ್, ಮಹಡಿ ಶಿವಮೂರ್ತಿ, ಮಲ್ಲಿಕಾರ್ಜುನಯ್ಯ, ಜಯಣ್ಣ, ಜ್ಞಾನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.