ADVERTISEMENT

ಮೇಕೆದಾಟು ಹೋರಾಟ ಮಾಡಲಿ; ರಿಸ್ಕ್ ತೆಗೆದುಕೊಳ್ಳುವುದು ಬೇಡ: ಈಶ್ವರಪ್ಪ ವ್ಯಂಗ್ಯ

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 3:07 IST
Last Updated 6 ಜನವರಿ 2022, 3:07 IST
   

ಚಿತ್ರದುರ್ಗ: ‘ನಾನು, ಸಿದ್ದರಾಮಯ್ಯ ಇಬ್ಬರೂ ಕೋವಿಡ್ ಅನುಭವಿಸಿದ್ದೇವೆ. ಮೇಕೆದಾಟು ಹೋರಾಟ ಮಾಡಲಿ ಆದರೆ ರಿಸ್ಕ್ ತೆಗೆದುಕೊಳ್ಳುವುದು ಬೇಡ’ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ಬಿ.ಎಸ್. ಯಡಿಯೂರಪ್ಪ, ದೇವೇಗೌಡರಂತೆ ಸಿದ್ದರಾಮಯ್ಯ ಸಹ ರಾಜ್ಯದ ಆಸ್ತಿ. ಕೋವಿಡ್‌ನಿಂದ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ? ಕೋವಿಡ್‌ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೊತ್ತೇನು? ಅಷ್ಟೇ ಅಲ್ಲ ಬಿಎಸ್‌ವೈ, ಸಿದ್ದರಾಮಯ್ಯ, ಗೊತ್ತೇನು?’ ಎಂದುಪ್ರಶ್ನಿಸಿದರು

‘ಗುರುವಾರ ನಡೆಯುವ ಕ್ಯಾಬಿನೆಟ್‌ ಸಭೆಯಲ್ಲಿ ಮೇಕೆದಾಟು ಹೋರಾಟದ ಪರವಾನಗಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕೋವಿಡ್ ಏರಿಕೆ ಸಮಯದಲ್ಲಿ ಮೇಕೆದಾಟು ಹೋರಾಟದಿಂದ ಸಮಸ್ಯೆ ಆಗುವ ಸ್ಥಿತಿ ನಿರ್ಮಿಸಬೇಡಿ’ ಎಂದು ಮನವಿ ಮಾಡಿದರು.

ADVERTISEMENT

‘ಜನರ ರಕ್ಷಣೆಗಾಗಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮತ್ತು ಇತರ ಜಿಲ್ಲೆಗಳ ಸ್ಥಿತಿ ಭಿನ್ನವಾಗಿದೆ. ಬೆಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿದೆ’ ಎಂದು ತಿಳಿಸಿದರು.

‘ಇಂದಿರಾ ಗಾಂಧಿ ಹತ್ಯೆ ಇರಬಹುದು, ಮೋದಿ ಭದ್ರತಾ ಲೋಪ ಇರಬಹುದು ಇಂಥ ವಿಷಯದಲ್ಲಿ ರಾಜಕಾರಣ ಮಾಡಬಾರದು. ಇಂದಿರಾಗಾಂಧಿ ಸತ್ತರೆ ಸಾಯಲಿ ಬಿಡು, ಮೋದಿಗೆ ತೊಂದರೆ ಆಗಲಿ ಬಿಡು ಅನ್ನಬಾರದು. ಒಂದಷ್ಟು ಜನ, ಸಂಸ್ಥೆಗಳು ಅಭದ್ರತೆ ಸೃಷ್ಟಿಸಲೆಂದೇ ಇದ್ದಾರೆ. ಅಂಥವರನ್ನು ಹುಡುಕಿ ಬಿಗಿ ಮಾಡುವ ಕೆಲಸ ನಡೆದಿದೆ’ ಎಂದರು.

‘ಪಾಕಿಸ್ತಾನದಿಂದ ಬಂದು ದುಷ್ಕೃತ್ಯ ಮೆರೆದವರಿಗೆ ತಕ್ಕ ಉತ್ತರ ನೀಡಲಾಗಿದೆ. ಅಭದ್ರತೆ ಮಾಡಿರಬಹುದು ಆದರೆ ಮೋದಿಯ ಕೂದಲೂ ಅಲುಗಾಡಿಸಲಾಗಲ್ಲ. ಇಡೀ ಪ್ರಪಂಚ ಪ್ರಧಾನಿಯ ಜತೆಗಿದೆ’ ಎಂದು ಖಡಕ್ ಸಂದೇಶ ರವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.