ಹಿರಿಯೂರು: ಭರಪೂರ ನೀರು ಇದ್ದರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಕಷ್ಟವಾಗದು. ಆದರೆ, ಕಡಿಮೆ ನೀರು ಬೇಡುವ, ಹೆಚ್ಚು ಲಾಭ ತರುವ ಬೆಳೆಗಳ ಬಗ್ಗೆ ಪ್ರಗತಿಪರ ರೈತರು ಯೋಜನೆ ಹಾಕಿಕೊಳ್ಳುತ್ತಾರೆ. ಇಲ್ಲೊಬ್ಬ ರೈತ ದಾಳಿಂಬೆಯಲ್ಲಿ ಯಶಸ್ಸು ಪಡೆದ ನಂತರ ಡ್ರ್ಯಾಗನ್ ಫ್ರೂಟ್ ಬೆಳೆಯತ್ತ ಚಿತ್ತ ಹರಿಸಿ ಕೈತುಂಬ ಹಣ ಗಳಿಸುತ್ತಿದ್ದಾರೆ.
ಹಿರಿಯೂರು ನಗರದ ಗರೀಬ್ ಆಲಿ (ಮುನ್ನಾ) ಅಂತಹ ಪ್ರಯೋಗಶೀಲ ರೈತ. ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಇರುವ ಹೊಸ ಊರಿನ ಮುಂಭಾಗದ 10 ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಹಣ್ಣಿನ ಭರಪೂರ ಫಸಲು ನೋಡುಗರ ದೃಷ್ಟಿ ತಗುಲುವಂತಿದೆ.
ಡ್ರಾಗನ್ ಜೊತೆಗೆ ನೇರಳೆ, ನಾಟಿ ನಿಂಬೆ, ಆಲ್ಫಾನ್ಸ್ ಮಾವು, ಕರಿಬೇವು, ಹಲಸು ಹೀಗೆ ಬಹುಬಗೆಯ ತೋಟಗಾರಿಕೆ ಬೆಳೆಗಳನ್ನು ಹಾಕಿದ್ದು, ವರ್ಷವಿಡೀ ಒಂದಲ್ಲ ಒಂದು ಬೆಳೆಯಿಂದ ಆದಾಯ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗದ ಸಮೀಪ ಇರುವ ಜಮೀನಿನಲ್ಲಿ ಅವರು ಕರಿಬೇವು ಹಾಕಿದ್ದು, ಪ್ರತಿದಿನ ₹ 1,000ದಿಂದ 2,000 ಆದಾಯ ಕೊಡುತ್ತಿದೆ.
ಡ್ರ್ಯಾಗನ್ ಫ್ರೂಟ್:
ಡ್ರ್ಯಾಗನ್ ಹಣ್ಣು ಬೆಳೆಯುವ ರೈತರು ಸುಮಾರು ಐದಾರು ಅಡಿ ಎತ್ತರದ ಕಲ್ಲುಕಂಬ ನೆಟ್ಟು ಒಂದೊಂದು ಕಂಬಕ್ಕೆ ನಾಲ್ಕು ಡ್ರ್ಯಾಗನ್ ಸಸಿ ನಾಟಿ ಮಾಡುವುದು ವಾಡಿಕೆ. ಆದರೆ, ಮುನ್ನಾ ಅವರು ತಮ್ಮ ಜಮೀನಿನಲ್ಲಿಯೇ ವಿಶೇಷ ಅಚ್ಚಿನಲ್ಲಿ ಸಿಮೆಂಟ್ ಕಂಬ ತಯಾರಿಸಿ, ಅದರ ಮೇಲ್ಭಾಗಕ್ಕೆ ವಾಹನದ ಸ್ಟೇರಿಂಗ್ ಹೋಲುವ ದುಂಡಾಕಾರದ ನಾಲ್ಕು ರಂಧ್ರಗಳಿರುವ ಅಚ್ಚು ಜೋಡಿಸಿ, ಒಂದೊಂದು ರಂಧ್ರದಲ್ಲಿ ಒಂದೊಂದು ಕೊಂಬೆ ಬೆಳೆಯುವಂತೆ ಮಾಡಿದ್ದು, ಗಿಡದ ಬಳ್ಳಿ ಇಡೀ ಕಂಬವನ್ನು ಸುತ್ತುವರಿದು ಬೆಳೆಯುವ ಕಾರಣ ಫಸಲು ಬಿಟ್ಟಾಗ ಕಂಬದ ಸುತ್ತ ಹಣ್ಣುಗಳು ಜೋಕಾಲಿ ಆಡುತ್ತಿರುವಂತೆ ಕಾಣುತ್ತವೆ. ತೋಟದಲ್ಲಿನ ಡ್ರ್ಯಾಗನ್ ಬಳ್ಳಿಗಳು ಚಿತ್ರ ಬರೆದಂತೆ ಒಂದೇ ಸಮನಾಗಿ ಹರಡಿಕೊಂಡಿವೆ.
‘5,920 ಡ್ರ್ಯಾಗನ್ ಸಸಿ ತಂದು 1,480 ಕಲ್ಲುಕಂಬ ನೆಟ್ಟು, ಕಂಬವೊಂದಕ್ಕೆ ನಾಲ್ಕು ಗಿಡದಂತೆ ನಾಟಿ ಮಾಡಲಾಗಿದೆ. ಗಿಡ ನಾಟಿ ಮಾಡಿದ ನಂತರ 15 ತಿಂಗಳಿಗೆ ಫಸಲು ಬಂದಿದೆ. ಸತತ ಮೂರು ತಿಂಗಳು ಹಣ್ಣಿನ ಕೊಯ್ಲು ಮಾಡಬಹುದು. ಪ್ರಸಕ್ತ ವರ್ಷ ಒಂದೊಂದು ಬಳ್ಳಿಯಲ್ಲಿ ನೂರಕ್ಕೂ ಹೆಚ್ಚು ಹಣ್ಣುಗಳು ಸಿಕ್ಕಿವೆ. ಕೊಟ್ಟಿಗೆ ಗೊಬ್ಬರ ಹಾಕಿದ್ದ ಕಾರಣಕ್ಕೆ ಒಂದೊಂದು ಹಣ್ಣು 700ರಿಂದ 900 ಗ್ರಾಂ ತೂಕ ಇವೆ. ಹಣ್ಣಿನ ಗಾತ್ರ ದೊಡ್ಡದಿದ್ದರೆ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಾರೆ ಎಂದು ಖರೀದಿದಾರರು ಹೇಳಿದ ಕಾರಣಕ್ಕೆ ಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡಿದ್ದೇನೆ. ಈ ಬಾರಿ 500–700 ಗ್ರಾಂ ತೂಕದ ಹಣ್ಣುಗಳು ಬಂದಿವೆ’ ಎಂದು ಮುನ್ನಾ ಮಾಹಿತಿ ನೀಡಿದರು.
ಮಾರುಕಟ್ಟೆ ಸಮಸ್ಯೆ ಇಲ್ಲ:
ಹೆಚ್ಚು ಇಳುವರಿ ಬಂದಾಗ ಬೆಂಗಳೂರಿನಿಂದ ವರ್ತಕರು ಜಮೀನಿಗೇ ಬಂದು ಹಣ್ಣು ಖರೀದಿಸುತ್ತಾರೆ. 50ರಿಂದ 100 ಬಾಕ್ಸ್ ಹಣ್ಣುಗಳಿದ್ದರೆ ನೇರವಾಗಿ ಬೆಂಗಳೂರಿಗೆ ಒಯ್ದು ಹಣ್ಣಿನ ಅಂಗಡಿಗಳಿಗೆ ಕೊಟ್ಟು ಬರುತ್ತೇವೆ. ನಮ್ಮ ಜಮೀನಿನ ಹಣ್ಣುಗಳಿಗೆ ಬೆಂಗಳೂರಿನಲ್ಲಿ ತುಂಬಾ ಬೇಡಿಕೆ ಇದೆ. ಜುಲೈ ಮೊದಲ ವಾರದಲ್ಲಿ ಮುಂಬೈಗೆ ಪ್ರತಿ ಕೆ.ಜಿ.ಗೆ ₹ 192ರಂತೆ ಮಾರಿದ್ದೆ’ ಎಂದು ಅವರು ವಿವರಿಸುವರು.
‘ಬೆಂಗಳೂರಿನಲ್ಲಿ ಸರಾಸರಿ ₹ 100–120 ದರವಿದೆ (ಪ್ರತಿ ಕೆ.ಜಿ.ಗೆ). ಕೊಯ್ಲಿನ ನಂತರ 8–10 ದಿನ ಇಟ್ಟರೂ ಹಣ್ಣುಗಳು ಕೆಡುವುದಿಲ್ಲ. ಡ್ರ್ಯಾಗನ್ ಬೆಳೆಯುವವರಿಗೆ ಇದೊಂದು ವರದಾನ. ಹೆಚ್ಚು ನೀರು ಬಯಸದ, 40 ಡಿಗ್ರಿ ಉಷ್ಣಾಂಶದಲ್ಲೂ ಈ ಹಣ್ಣು ಹುಲುಸಾಗಿ ಬರುತ್ತದೆ. ಆರಂಭದಲ್ಲಿ ಕಲ್ಲುಕಂಬ, ಸಸಿ ಖರೀದಿ ಒಳಗೊಂಡಂತೆ ಹೆಚ್ಚಿನ ಖರ್ಚು ಬರುತ್ತದೆ. ಒಮ್ಮೆ ಬಳ್ಳಿಯನ್ನು ನಾಟಿ ಮಾಡಿದರೆ 15 ವರ್ಷಗಳವರೆಗೆ ಹೆಚ್ಚಿನ ಖರ್ಚಿಲ್ಲದೆ ಫಸಲು ಪಡೆಯಬಹುದು’ ಎನ್ನುತ್ತಾರೆ ಅವರು.
ಉಪ ಉತ್ಪನ್ನಕ್ಕೆ ಪ್ರಯತ್ನ
‘ಈಗಾಗಲೇ ಅಂಜೂರ ಕಿವಿ ಹಣ್ಣುಗಳನ್ನು ಒಣಗಿಸಿ ಮಾರುವ ಪ್ರಯತ್ನ ಯಶಸ್ವಿಯಾಗಿದೆ. ಇದೇ ರೀತಿ ಡ್ರ್ಯಾಗನ್ ಹಣ್ಣನ್ನು ಒಣಗಿಸಿದಲ್ಲಿ ಹೊರದೇಶಗಳಿಗೆ ರಫ್ತು ಮಾಡುವುದು ಸುಲಭ. ಜೂನ್ ಕೊನೆಯ ವಾರ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ತೋಟಗಾರಿಕೆ ವಿಜ್ಞಾನಿ ಎಂ.ಎಸ್. ಸಿಂಗ್ ಜೊತೆ ಸಭೆ ನಡೆಸಿದ್ದೇವೆ. ಈ ಹಣ್ಣಿನ ರಸ ತಯಾರಿಸುವ ಬಗೆಗೂ ಮೈಸೂರಿನಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಮೈಸೂರಿನ ಸಿಎಫ್‌ಟಿಆರ್‌ಐನ ತಜ್ಞರನ್ನು ಭೇಟಿ ಮಾಡಿ ಸಾಧಕ–ಬಾಧಕಗಳ ಬಗ್ಗೆ ಅಭಿಪ್ರಾಯ ಪಡೆಯುತ್ತೇವೆ. ಇದು ಯಶಸ್ವಿಯಾದರೆ ಮಾರುಕಟ್ಟೆ ಸಮಸ್ಯೆ ಎದುರಾಗದು. ಜೊತೆಗೆ ಹಣ್ಣಿನ ಮೌಲ್ಯ 2–3 ಪಟ್ಟು ಹೆಚ್ಚುತ್ತದೆ. ಎಷ್ಟು ರೈತರು ಬೇಕಾದರೂ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ಸು ಪಡೆಯಬಹುದು. ಇಂತಹ ಯೋಜನೆಗಳಿಗೆ ಸರ್ಕಾರದ ಪ್ರೋತ್ಸಾಹ ತುಂಬ ಅಗತ್ಯ’ ಎಂದು ಮುನ್ನಾ ಕೋರುತ್ತಾರೆ.
ದಾಳಿಂಬೆಗೆ ಕಳ್ಳರ ಕಾಟ ಹೆಚ್ಚು. ಆದರೆ ಡ್ರ್ಯಾಗನ್ ಕಳ್ಳತನ ಮುಕ್ತವಾದ ಹಣ್ಣು. ಜಮೀನಿನ ಸುತ್ತ ತಂತಿ ಬೇಲಿ ಹಾಕಿದ್ದು ಕಾಡು ಪ್ರಾಣಿಗಳ ಕಾಟವಿಲ್ಲ.ಮುನ್ನಾ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.