ADVERTISEMENT

ಚಿತ್ರದುರ್ಗ | ನಿರ್ವಹಣೆ ಸಮಸ್ಯೆ: ಫ್ಲೋರೈಡ್‌ಯುಕ್ತ ನೀರೇ ಗತಿ

ಕರಿಯಣ್ಣನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಸಮಸ್ಯೆ

ವಿ.ಎಂ.ಶಿವಪ್ರಸಾದ್
Published 10 ಮೇ 2022, 3:20 IST
Last Updated 10 ಮೇ 2022, 3:20 IST
ಭರಮಸಾಗರ ಹೋಬಳಿ ಕರಿಯಣ್ಣನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ನಿವಾಸಿಗಳು ಕಾದು ನಿಂತಿರುವುದು.
ಭರಮಸಾಗರ ಹೋಬಳಿ ಕರಿಯಣ್ಣನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ನಿವಾಸಿಗಳು ಕಾದು ನಿಂತಿರುವುದು.   

ಭರಮಸಾಗರ: ಇಲ್ಲಿ ನೀರಿಗೆ ಬರವಿಲ್ಲ. ಆದರೆ, ನಿರ್ವಹಣೆ ಕೊರತೆಯಿಂದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

ಕಾಲ್ಗೆರೆ ಗ್ರಾಮ ಪಂಚಾಯಿತಿಗೆ ಸೇರಿದ ಕರಿಯಣ್ಣನಹಳ್ಳಿ ಗ್ರಾಮದ ಜನಸಂಖ್ಯೆ 496.

‘ಜಿಲ್ಲೆಯ ಗಡಿಭಾಗದ ಕುಗ್ರಾಮ ಎನ್ನುವ ಕಾರಣಕ್ಕಾಗಿ ನಮ್ಮ ಹಳ್ಳಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಒಂದು ವರ್ಷದಿಂದ ಉತ್ತಮ ಮಳೆಯಾಗುತ್ತಿದೆ. ಜೊತೆಗೆ ಸರ್ಕಾರದ ನೀರಾವರಿ ಯೋಜನೆಯಡಿ ಭರಮಸಾಗರ ದೊಡ್ಡಕೆರೆ ತುಂಬಿರುವುದರಿಂದ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಲ್ಲಿ ಉತ್ತಮ ನೀರು ದೊರಕುತ್ತಿದ್ದು, ನೀರಿನ ಅಭಾವ ದೂರಾಗಿದೆ. ಆದರೆ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಫ್ಲೋರೈಡ್‌ಯುಕ್ತ ನೀರು ಬಳಸುವುದು ಅನಿವಾರ್ಯ’ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

‘ಫೆಬ್ರುವರಿ ತಿಂಗಳಲ್ಲಿ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕುಂದುಕೊರತೆ ಆಲಿಸಿದ್ದರು. ಇದರಿಂದ ನಮ್ಮ ಹಳ್ಳಿಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂದುಕೊಂಡಿದ್ದ ನಮ್ಮ ನಂಬಿಕೆ ಸುಳ್ಳಾಗಿದೆ. ಜಿಲ್ಲಾಧಿಕಾರಿ ಬಂದು ಹೋಗಿ ಮೂರು ತಿಂಗಳಾಗುತ್ತಾ ಬಂದರೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡಿಲ್ಲ’ ಎಂದು ಕರಿಬಸಪ್ಪ, ರಾಜಪ್ಪ, ನಾಗರಾಜ್, ತಿಮ್ಮಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

‘ಗ್ರಾಮದ ಮುಖ್ಯ ರಸ್ತೆಯ ಎರಡೂ ಕಡೆ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಇಡೀ ಗ್ರಾಮದ ಜನರು ಈ ಎರಡು ಸ್ಥಳದಿಂದಲೇ ನೀರು ಹಿಡಿದುಕೊಂಡು ಹೋಗಬೇಕು. ವಿದ್ಯುತ್ ಇದ್ದಾಗ ಮಾತ್ರ ನೀರು ಪೂರೈಕೆಯಾಗುವುದರಿಂದ ಯಾವಾಗ ನೀರು ಬಿಡುತ್ತಾರೊ ಆಗ ಹಿಡಿದುಕೊಳ್ಳಬೇಕು. ಇದರಿಂದ ಕೂಲಿ ಕೆಲಸಕ್ಕೆ ಹೋಗುವ ನಮಗೆ ತೊಂದರೆ ಆಗುತ್ತದೆ. ಅಲ್ಲದೇ ದೂರದಿಂದ ನೀರು ತರುವುದು ಕಷ್ಟವಾಗಿದ್ದು, ನಲ್ಲಿ ವ್ಯವಸ್ಥೆ ಮಾಡಿ ಎಂದು ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರುತ್ತಾರೆ ಕೊಲ್ಲಮ್ಮ.

ನೀರು ಹಿಡಿದುಕೊಳ್ಳುವ ಸ್ಥಳದಲ್ಲಿ ನಲ್ಲಿಗಳ ವ್ಯವಸ್ಥೆ ಮಾಡದ ಕಾರಣ ಬಹಳಷ್ಟು ಪ್ರಮಾಣದ ನೀರು ಕೊಡಗಳಿಂದ ಹೊರಗೆ ಚೆಲ್ಲಿ ವ್ಯರ್ಥವಾಗಿ ಚರಂಡಿ ಸೇರುತ್ತದೆ. ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಿದೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎನ್ನುತ್ತಾರೆ ಕರಿಯಣ್ಣನಹಳ್ಳಿ ಕ್ಯಾಂಪಿನ ಮಂಜಮ್ಮ.

ಗ್ರಾಮದಲ್ಲಿನ ಓವರ್‌ ಹೆಡ್ ಟ್ಯಾಂಕ್‌ಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಸಂಪರ್ಕ ಕಲ್ಪಿಸಬೇಕು. ಇದರಿಂದ ಬೀದಿ ನಲ್ಲಿಗಳ ವ್ಯವಸ್ಥೆಗೂ ಸಹಕಾರಿಯಾಗುತ್ತದೆ. ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಇಒ, ಪಿಡಿಒಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

***

ಶುದ್ಧ ನೀರಿನ ಘಟಕದ ಕಟ್ಟಡ ನಿರ್ಮಾಣವಾಗಿದೆ. ಆದರೆ ನೀರು ಯಂತ್ರಗಳನ್ನು ಅಳವಡಿಸಿಲ್ಲ. ಪಿಡಿಒ ಸ್ಪಂದಿಸುವುದಿಲ್ಲ. ವಿದ್ಯುತ್ ಇಲ್ಲದೆ ಎರಡು ದಿನಗಳಿಂದ ನೀರು ಬಂದಿಲ್ಲ.
–ನಾಗರಾಜ್, ಗ್ರಾಮಸ್ಥ

**

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನೀರಿನ ಸಮಸ್ಯೆ ಪರಿಹರಿಸುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.
–ಮಂಜಮ್ಮ, ಕರಿಯಣ್ಣನಹಳ್ಳಿ ಕ್ಯಾಂಪ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.