ADVERTISEMENT

ಚಿತ್ರದುರ್ಗ | ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 6:45 IST
Last Updated 4 ಮಾರ್ಚ್ 2024, 6:45 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿಯಲ್ಲಿ ಟ್ಯಾಂಕರ್ ನೀರಿಗಾಗಿ ಖಾಲಿ ಕೊಡಗಳನ್ನು ಸಾಲಿನಲ್ಲಿ ಇಟ್ಟಿರುವುದು
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿಯಲ್ಲಿ ಟ್ಯಾಂಕರ್ ನೀರಿಗಾಗಿ ಖಾಲಿ ಕೊಡಗಳನ್ನು ಸಾಲಿನಲ್ಲಿ ಇಟ್ಟಿರುವುದು   

ಚಿತ್ರದುರ್ಗ: ‘ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕೊಳವೆಬಾವಿ ಬತ್ತಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ರಾತ್ರಿ–ಹಗಲು ಎನ್ನದೇ ಕಾದಿದ್ದು ನೀರು ಹಿಡಿದಿಟ್ಟುಕೊಳ್ಳಬೇಕು. ಬರ ಪರಿಸ್ಥಿತಿಯಲ್ಲಿ ಯಾರಿಗೆ ನೀರು ಸರಿಯಾಗಿ ಸಿಗುತ್ತದೆ ಹೇಳಿ...’

ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪ್ಪನಹಳ್ಳಿಯ ತಿಪ್ಪಮ್ಮ ಅವರ ಅಸಹಾಯಕ ಮಾತುಗಳಿವು. ನೀರು ಪೂರೈಕೆ ಮಾಡುವ ಹೊಣೆಗಾರಿಕೆ ಇರುವ ಗ್ರಾಮಪಂಚಾಯಿತಿ ಅಧಿಕಾರಿಗಳ ವಿರುದ್ಧ ಆರೋಪ ಮಾಡದೇ ಪರಿಸ್ಥಿತಿಯನ್ನು ಶಪಿಸುತ್ತಿದ್ದರು. ಆದಷ್ಟು ಬೇಗ ವರುಣ ಕೃಪೆ ತೋರಲಿ ಎಂದು ಪ್ರಾರ್ಥಿಸಿದರು.

ಬರ ಪರಿಸ್ಥಿತಿಯ ಪರಿಣಾಮವಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸತೊಡಗಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಕೊಳವೆಬಾವಿಗಳೇ ಕುಡಿಯುವ ನೀರಿನ ಮೂಲಗಳು. ಬೇಸಿಗೆ ಕಾಲಿಡುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕೊಳವೆ ಬಾವಿಯ ನೀರು ಬತ್ತತೊಡಗಿದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗತೊಡಗಿದೆ. ತಿಂಗಳಾಂತ್ಯಕ್ಕೆ ಈ ಬಿಕ್ಕಟ್ಟು ಇನ್ನಷ್ಟು ಹೆಚ್ಚುವ ಆತಂಕ ಜನರನ್ನು ಕಾಡತೊಡಗಿದೆ.

ADVERTISEMENT

ತಾಲ್ಲೂಕಿನ 264 ಗ್ರಾಮಗಳ ಪೈಕಿ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತಾಲ್ಲೂಕು ಪಂಚಾಯಿತಿ ಗುರುತಿಸಿರುವ 44 ಸಮಸ್ಯಾತ್ಮಕ ಹಳ್ಳಿಗಳ ಕೊಳವೆ ಬಾವಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಸಾರ್ವಜನಿಕ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕುವ ಸದ್ದು ಕೂಡ ನಿಂತು ಹೋಗಿದೆ. ರೈತರ ಜಮೀನಿನ ಕೊಳವೆ ಬಾವಿಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ನೀರು ಸಂಗ್ರಹಿಸಿಕೊಳ್ಳುವುದೇ ಜನರ ಪ್ರಮುಖ ಕೆಲಸವಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಆಯಿತೊಳಲು ಗೊಲ್ಲರಹಟ್ಟಿಯಲ್ಲಿ 300ಕ್ಕೂ ಅಧಿಕ ಮನೆಗಳಿವೆ. ಎರಡು ಕೊಳವೆ ಬಾವಿಗಳಲ್ಲಿ ಮಾತ್ರ ಸಣ್ಣ ಪ್ರಮಾಣದ ನೀರು ಬರುತ್ತಿದೆ. ಇದೇ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಎಲ್ಲ ನಲ್ಲಿಗಳಿಗೆ ನೀರು ಹಂಚಿಕೆಯಾಗುತ್ತಿಲ್ಲ. ತಗ್ಗು ಪ್ರದೇಶಕ್ಕೆ ತೆರಳಿ ನೀರು ಸಂಗ್ರಹಿಸಿಕೊಳ್ಳಲಾಗುತ್ತಿದೆ. ಈ ನೀರು ಜನಬಳಕೆಗೆ ಮಾತ್ರ ಸಾಕಾಗುತ್ತಿದೆ. ಧನ, ಕರು, ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿರುವವರು ನೀರಿಗೆ ಪರದಾಡುತ್ತಿದ್ದಾರೆ.

‘ನಾಲ್ಕು ಕೊಳವೆಬಾವಿಗಳಲ್ಲಿ ಎರಡು ಸಂಪೂರ್ಣ ಸ್ಥಗಿತಗೊಂಡಿವೆ. ಕೊಳವೆಬಾವಿ ಹೊರತುಪಡಿಸಿ ನೀರಿಗೆ ಅನ್ಯ ಮೂಲಗಳಿಲ್ಲ. ಖಾಸಗಿ ಕೊಳವೆಬಾವಿ ಎರವಲು ಸೇವೆಗೆ ಕರಿಯಪ್ಪ ಎಂಬುವರು ಒಪ್ಪಿಗೆ ಸೂಚಿಸಿದ್ದಾರೆ. ತಿಂಗಳ ಬಾಡಿಗೆ ನಿಗದಿಪಡಿಸುವ ವಿಚಾರ ಚರ್ಚೆಯಲ್ಲಿದೆ. ಇಲ್ಲಿಯೂ ನೀರು ನಿರೀಕ್ಷಿತ ಪ್ರಮಾಣದಲ್ಲಿ ಸಿಗದೇ ಹೋದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಜಿ.ಆರ್‌.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಿತೊಳು ಗೊಲ್ಲರಹಟ್ಟಿಯ ಸದಸ್ಯ ಕ್ಯಾತಪ್ಪ ಮಾಹಿತಿ ನೀಡಿದರು.

ಬೆಳಗಟ್ಟ ಗ್ರಾಮದಲ್ಲಿ ಪರಿಸ್ಥಿತಿ ಇದಕ್ಕಿಂತ ಕಷ್ಟಕರವಾಗಿದೆ. ಗ್ರಾಮಕ್ಕೆ ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿ ಬತ್ತಿಹೋಗಿದೆ. ಬೀದಿ ನಲ್ಲಿಗಳಲ್ಲಿ ಬರುತ್ತಿದ್ದ ನೀರು ಕಡಿಮೆಯಾಗಿದೆ. ಬಿಂದಿಗೆ ಹಿಡಿದು ಜನರು ಜಮೀನುಗಳಿಗೆ ತೆರಳುತ್ತಿದ್ದಾರೆ. ಹುಲ್ಲೂರು ಲಂಬಾಣಿಹಟ್ಟಿ, ಪಾಪಯ್ಯನಹಟ್ಟಿ, ಹೊಸ ಕಾಟಪ್ಪನಹಟ್ಟಿ, ಹಾಯ್ಕಲ್‌ ಗೊಲ್ಲರಹಟ್ಟಿ, ಪೇಲಾರಹಟ್ಟಿ ಸೇರಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ.

ಜಿಲ್ಲೆಯಲ್ಲಿ 367ಕ್ಕೂ ಹೆಚ್ಚು ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. ಶಾಸಕರ ಅಧ್ಯಕ್ಷತೆಯ ತಾಲ್ಲೂಕು ಕಾರ್ಯಪಡೆಗಳಲ್ಲಿ ತೀರ್ಮಾನ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಪ್ರತಿ ತಾಲ್ಲೂಕಿಗೆ ₹ 40 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಕೊಳವೆಬಾವಿ ದುರಸ್ತಿ, ಖಾಸಗಿ ಕೊಳವೆ ಬಾವಿ ಎರವಲು ಸೇವೆ, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಹಾಗೂ ಹೊಸ ಕೊಳವೆಬಾವಿ ಕೊರೆಸುವುದಕ್ಕೆ ಸಂಬಂಧಿಸಿದಂತೆ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಜನರು ಎದುರಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಕೂಲಿ ಬಿಟ್ಟು ಟ್ಯಾಂಕರ್‌ಗೆ ಕಾಯುವ ಜನ

ಸುವರ್ಣಾ ಬಸವರಾಜ್‌

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಗ್ರಾಮೀಣ ನೀರು ಸರಬರಾಜು ಇಲಾಖೆ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುತ್ತಿರುವ ನೀರು ಜನರಿಗೆ ಸಾಕಾಗುತ್ತಿಲ್ಲ. ಜವನಗೊಂಡನಹಳ್ಳಿ ಹೋಬಳಿಯ ದಿಂಡಾವರ ಗ್ರಾಮ ಪಂಚಾಯಿತಿಯ ಸುಮಾರು 13 ಹಳ್ಳಿಗಳು ಕರಿಯಾಲ ಗ್ರಾಮ ಪಂಚಾಯಿತಿ ಹಾಗೂ ಯಲ್ಲದಕೆರೆ ಪಂಚಾಯಿತಿಯ ತಲಾ 5 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ.

‘ನೀರಿನ ಸಮಸ್ಯೆ ಹೆಚ್ಚಿರುವ ಹಳ್ಳಿಗಳಲ್ಲಿ 60 ಕೊಳವೆ ಬಾವಿ ಕೊರೆಸಿದ್ದೇವೆ. ಕೊರೆಸುವಾಗ ಒಂದೂವರೆ ಎರಡು ಇಂಚು ನೀರು ಕಾಣಿಸಿಕೊಳ್ಳುತ್ತದೆ. ಗಾಂಧಿನಗರ ಮಾಳಗೊಂಡನಹಳ್ಳಿಗಳಲ್ಲಿ ಮೂರು ಇಂಚು ನೀರು ಬಂದಿತ್ತು. ಎಂಟತ್ತು ದಿನಗಳಲ್ಲಿ ಎಲ್ಲ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಯಲ್ಲದಕೆರೆ ಭಾಗದಲ್ಲಿ 700 ಅಡಿ ದಿಂಡಾವರ ಭಾಗದಲ್ಲಿ 650 ಅಡಿ ಕೊಳವೆಬಾವಿ ಕೊರೆಸಿದ್ದೇವೆ. ಕೆಲವು ಕಡೆ ಹಳೆಯ ಕೊಳವೆಬಾವಿಗಳನ್ನು 900 ಅಡಿ ಆಳದವರೆಗೆ ಮತ್ತೆ ಕೊರೆಸಿದ್ದೇವೆ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಸನ್ ಭಾಷಾ ಹೇಳುತ್ತಾರೆ.

‘ಪ್ರತಿ ವರ್ಷ ಬೇಸಿಗೆಯಲ್ಲೂ ನೀರಿನ ಸಮಸ್ಯೆ ತಪ್ಪದ ಗೋಳಾಗಿದೆ. ಈ ಭಾಗದ ಹಳ್ಳಿಗಳಲ್ಲಿ ನೆಲೆಸಿರುವ ಬಹುತೇಕರು ಸಣ್ಣ ರೈತರು. ಮುಂಗಾರು ಹಂಗಾಮು ಹೊರತುಪಡಿಸಿದರೆ ಕೂಲಿಯೇ ಬದುಕಿಗೆ ಆಧಾರ. ಈಗ ಕೂಲಿಬಿಟ್ಟು ನೀರಿನ ಟ್ಯಾಂಕರ್ ಯಾವಾಗ ಬರುತ್ತದೆ ಎಂದು ಖಾಲಿ ಕೊಡಗಳನ್ನು ಸಾಲಿನಲ್ಲಿಟ್ಟು ಕಾಯುವುದೇ ಕೆಲಸವಾಗಿದೆ. ಕೂಲಿಗೆ ಹೋಗದಿದ್ದರೆ ಬದುಕು ನಡೆಸುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಸೂರಪ್ಪನಹಟ್ಟಿಯ ಸರಸ್ವತಿ ಜಯರಾಂ.

ತಾಲ್ಲೂಕಿನ ಐಮಂಗಲ ಧರ್ಮಪುರ ಹಾಗೂ ಕಸಬಾ ಹೋಬಳಿಗಳಲ್ಲಿ ನೀರಿಗೆ ಸದ್ಯಕ್ಕೆ ಹೇಳಿಕೊಳ್ಳುವಂತಹ ಸಮಸ್ಯೆ ಇಲ್ಲ.

ಟ್ಯಾಂಕರ್‌ ನೀರೇ ಆಸರೆ

ಶ್ವೇತಾ ಜಿ. 

ಹೊಸದುರ್ಗ: ಬೇಸಿಗೆ ಆರಂಭವಾಗುವ ಮುನ್ನವೇ ಬರಗಾಲದಿಂದಾಗಿ ತಾಲ್ಲೂಕಿನ ವಿವಿಧೆಡೆ ನೀರಿನ ಅಭಾವ ಉಂಟಾಗಿದೆ. ಕೆಲವು ಕಡೆಗಳಲ್ಲಿ ಹೊಸ ಕೊಳವೆಬಾವಿ ಕೊರೆಯಲಾಗಿದೆ. ಇನ್ನೂ ಹಲವೆಡೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ ಹಲವೆಡೆ ನೀರಿನ ಸಮಸ್ಯೆಯಿದೆ. ಇರುವ ಕೊಳವೆಬಾವಿಗಳಲ್ಲಿ ನೀರು ಸಣ್ಣದಾಗಿ ಬರುತ್ತಿದೆ. ತಾಲ್ಲೂಕಿನ ಯಲ್ಲಾಭೋವಿಹಟ್ಟಿ ಗುತ್ತಿಕಟ್ಟೆ ಲಂಬಾಣಿಹಳ್ಳಿ ಹಾಗೂ ಹೆಬ್ಬಳ್ಳಿಯಲ್ಲಿ ನೀರಿನ ಅಭಾವವಿದೆ. ಕಳೆದ ಮೂರು ದಿನಗಳಿಂದ ಯಲ್ಲಾಭೋವಿಹಟ್ಟಿ ಹಾಗೂ ಗುತ್ತಿಕಟ್ಟೆ ಲಂಬಾಣಿಹಟ್ಟಿಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ.

‘ಹೆಬ್ಬಳ್ಳಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಗಾಗಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಮಾಡದಕೆರೆ ರಂಗವ್ವನಹಳ್ಳಿ ಹುಣವಿನೊಡು ಸೇರಿ ಹಲವೆಡೆ 140ಕ್ಕೂ ಅಧಿಕ ಕೊಳವೆ ಬಾವಿ ಕೊರೆಯಿಸಲಾಗಿದೆ. ನೀರು ಬಾರದ ಕಾರಣ ಟ್ಯಾಂಕರ್‌ ಮೂಲಕ ಒದಗಿಸಲಾಗುತ್ತಿದೆ. ತಾಲ್ಲೂಕಿನಾದ್ಯಂದ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ದಿನಕ್ಕೆ ನಾಲ್ಕೇ ಕೊಡ ನೀರು!

ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ. ಕಾಲ್ಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು ಪ್ರತಿ ಮನೆಗೆ ದಿನಕ್ಕೆ ಕೇವಲ 4 ಕೊಡ ನೀರು ವಿತರಿಸಲಾಗುತ್ತಿದೆ. ಕಾಲ್ಕೆರೆ ಲಂಬಾಣಿಹಟ್ಟಿ ಕಲ್ಲವ್ವ ನಾಗತಿಹಳ್ಳಿ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಬಿಗಡಾಯಿಸಿದೆ.

‘ತಾಲ್ಲೂಕಿನಲ್ಲಿ ಅಡಿಕೆ ತೋಟಗಳು ಹೆಚ್ಚಿದ್ದು ಕೊಳವೆ ಬಾವಿಗಳೂ ಹೆಚ್ಚಿವೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕೆರೆಕಟ್ಟೆಗಳಲ್ಲಿ ನೀರು ಬರಿದಾಗಿದೆ. ಇದರಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆದರೂ ನೀರು ಬರುತ್ತಿಲ್ಲ. ಸಾವಿರ ಅಡಿಯವರೆಗೆ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ’ ಎನ್ನುತ್ತಾರೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೀಲಕಂಠಪ್ಪ.

‘ರಾಮಗಿರಿ ಹಾಗೂ ತಾಳ್ಯ ಹೋಬಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ನೀರು ಇಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲು ತೀರ್ಮಾನಿಸಲಾಗಿದೆ. ಆದರೆ ಖಾಸಗಿ ಕೊಳವೆಬಾವಿ ಮಾಲೀಕರು ತಮ್ಮ ತೋಟಗಳಿಗೆ ನೀರು ಕಡಿಮೆ ಆಗುತ್ತದೆ ಎಂದು ನೀರು ಕೊಡುತ್ತಿಲ್ಲ. ಐದಾರು ಕಿಲೋ ಮೀಟರ್ ದೂರದಿಂದ ನೀರು ತಂದು ವಿತರಿಸುವ ಪರಿಸ್ಥಿತಿ’ ಇದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್.

ಯಾರು ಏನಂತಾರೆ?

ಕೂಗಳತೆ ದೂರದಲ್ಲಿ ಗಾಯತ್ರಿ ಜಲಾಶಯವಿದೆ. ಅಲ್ಲಿಂದ ಜವನಗೊಂಡನಹಳ್ಳಿ ಹೋಬಳಿಯ ಎಲ್ಲ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು- ಸರಸ್ವತಿ ಸೂರಪ್ಪನಹಟ್ಟಿ ಹಿರಿಯೂರು ತಾಲ್ಲೂಕು

ಜಮೀನಿನಲ್ಲಿ ನೀರು ಬಿಟ್ಟಾಗ ಒಬ್ಬೊಬ್ಬರು 10 ಬಿಂದಿಗೆ ತುಂಬಿಸಿಕೊಳ್ಳುತ್ತಿದ್ದೇವೆ. ನಿತ್ಯ ನೀರು ತರುವುದೇ ಕೆಲಸವಾಗಿದೆ. ಈ ಸಮಸ್ಯೆಗೆ ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕು - ವಿನೋದ ಗುತ್ತಿಕಟ್ಟೆ ಲಂಬಾಣಿಹಟ್ಟಿ ಹೊಸದುರ್ಗ ತಾಲ್ಲೂಕು

ಈಗಿನ್ನೂ ಬೇಸಿಗೆ ಆರಂಭವಾಗಿದೆ. ಆದರೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಮುಂದೆ ಯಾವ ಪರಿಸ್ಥಿತಿಗೆ ಹೋಗುವುದೋ ಗೊತ್ತಿಲ್ಲ. ಬೇಸಿಗೆಯಲ್ಲಿ ಮಳೆ ಬಂದರೆ ಪರವಾಗಿಲ್ಲ. ಇಲ್ಲವಾದರೆ ನಮ್ಮನ್ನು ದೇವರೇ ಕಾಪಾಡಬೇಕು - ತಿಪ್ಪಮ್ಮ ರಾಮಗಿರಿ ಹೊಳಲ್ಕೆರೆ ತಾಲ್ಲೂಕು

ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿಯ ಕುಮ್ಮಿನಘಟ್ಟ ಗ್ರಾಮದಲ್ಲಿ ಕುಡಿಯುವ ನೀರಿಗೆ ಮುಗಿಬಿದ್ದ ಮಹಿಳೆಯರು
ಹೊಳಲ್ಕೆರೆ ತಾಲ್ಲೂಕಿನ ಕಾಲ್ಕೆರೆ ಗ್ರಾಮದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಕೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.