ADVERTISEMENT

ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಿ: ಆರ್‌.ಶಿವಣ್ಣ

ಕೈವಾರ ತಾತಯ್ಯ ಜಯಂತಿ ; ಅಧ್ಯಕ್ಷ ಆರ್‌.ಶಿವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:29 IST
Last Updated 4 ಮಾರ್ಚ್ 2026, 6:29 IST
ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಆರ್‌.ಶಿವಣ್ಣ ಉದ್ಘಾಟಿಸಿದರು
ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಆರ್‌.ಶಿವಣ್ಣ ಉದ್ಘಾಟಿಸಿದರು   

ಚಿತ್ರದುರ್ಗ: ‘ಬಲಿಜ ಸಮಾಜವು 3ಬಿ ವರ್ಗದಲ್ಲಿ ಒಕ್ಕಲಿಗ ಮತ್ತು ರೆಡ್ಡಿ ಸಮುದಾಯಗಳ ಜೊತೆ ಹೋರಾಟ ನಡೆಸಿ ಮೀಸಲಾತಿ ಪಡೆದುಕೊಂಡಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಶಿವಣ್ಣ ಸಲಹೆ ನೀಡಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮೀಸಲಾತಿಯಿಂದ ಸಮಾಜದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅನುಕೂಲವಾಗಿದೆ’ ಎಂದರು.

‘ಕೈವಾರ ಕ್ಷೇತ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಅಲ್ಲಿನ ಗದ್ದುಗೆ ಮತ್ತು ತಾತಯ್ಯನವರ ತತ್ವಗಳೇ ಕಾರಣ. ಬಲಿಜ ಸಮಾಜವು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ಬಳೆಗಾರ ವೃತ್ತಿಯು ಅತ್ಯಂತ ಪವಿತ್ರವಾದುದು. ಸಮಾಜದ ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೂ ಬಳೆಗಾರರ ಉಪಸ್ಥಿತಿ ಮತ್ತು ಅವರು ತೊಡಿಸುವ ಬಳೆಗಳು ಮಂಗಳಕರ ಸಂಕೇತಗಳಾಗಿವೆ’ ಎಂದು ತಿಳಿಸಿದರು.

ADVERTISEMENT

‘ಈ ಹಿಂದೆ ಬಳೆಗಾರ ವೃತ್ತಿ‌ಗೆ ಮಾತ್ರ ಸೀಮಿತವಾಗಿದ್ದ ಬಲಿಜ ಸಮಾಜದ ಪರಿಸ್ಥಿತಿ ಈಗ ಬದಲಾಗಿದೆ. ಶಿಕ್ಷಣ ಪಡೆದ ನಂತರ ಸಮುದಾಯದವರು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾರೆ’ ಎಂದು ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ಸಂತಸ ವ್ಯಕ್ತಪಡಿಸಿದರು.

‘ಯೋಗಿ ನಾರೇಯಣ ಯತೀಂದ್ರರು ಒಬ್ಬ ಯೋಗಿಯಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿಯ ಮಹಾನ್ ಪುರುಷರಾಗಿದ್ದರು. ಕನ್ನಡ, ಸಂಸ್ಕೃತ ಮತ್ತು ತೆಲುಗಿನಲ್ಲಿ ಅಮೂಲ್ಯವಾದ ತತ್ವಪದಗಳನ್ನು ರಚಿಸಿದ್ದಾರೆ’ ಎಂದು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಹುರುಳಿ ಎಂ.ಬಸವರಾಜ ಹೇಳಿದರು.

‘ತೆಲುಗು ಸೇರಿದಂತೆ ಕನ್ನಡದಲ್ಲಿ ಹಲವು ಕೃತಿಗಳನ್ನು ಕೈವಾರ ತಾತಯ್ಯ ರಚಿಸಿದ್ದಾರೆ. ಅವರ ರಚನೆಯ ನಾಲ್ಕು ಹಾಗೂ ಐದು ಸಾಲಿನ ಹಲವು ಪದ್ಯಗಳು ಲಭಿಸಿವೆ. ಭವಿಷ್ಯತ್ತಿನ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಮುನ್ಸೂಚಿಸುವ ಕಾಲಜ್ಞಾನವನ್ನು ರಚಿಸಿದ್ದರು’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ವಾಲ್ಮೀಕಿ ಭವನದವರೆಗೂ ಕೈವಾರ ತಾತಯ್ಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬಲಿಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ.ಸೇತುರಾಮ್‌, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ಸೂರ್ಯನಾರಾಯಣ, ಯೋಗಿನಾರಾಯಣ ಸೌಹಾರ್ದ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಪ್ರಹ್ಲಾದ್‌, ಯೋಗಿನಾರಾಯಣ ಯತೀಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ಎಸ್‌.ಸೋಮಶೇಖರ್‌ ಇದ್ದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿವೆ. ಬಲಿಜ ಸಮಾಜದವರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು
ಆರ್‌.ಶಿವಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.