ADVERTISEMENT

ವಿದ್ಯಾರ್ಥಿಗಳೆಲ್ಲ ಒಂದೇ ಎಂಬ ಭಾವನೆ ಇರಲಿ: ವಿಶ್ರಾಂತ ಕುಲಪತಿ ಮುರಿಗೆಪ್ಪ

ಭಾರತೀಯ ಭಾಷಾ ಪರಿವಾರ ಕುರಿತ ರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:05 IST
Last Updated 9 ಜನವರಿ 2026, 7:05 IST
ಹಿರಿಯೂರು ತಾಲ್ಲೂಕಿನ ಭೀಮನ ಬಂಡೆ ಸಮೀಪ ಇರುವ ಯಾಜ್ಞವಲ್ಕ್ಯ ಪಿಯು ಕಾಲೇಜಿನಲ್ಲಿ ಬುಧವಾರ ಮುಕ್ತಾಯಗೊಂಡ ಭಾರತೀಯ ಭಾಷಾ ಪರಿವಾರ ರಾಷ್ಟ್ರೀಯ ಸಮ್ಮೇಳನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮುರಿಗೆಪ್ಪ ಅವರನ್ನು ಸನ್ಮಾನಿಸಲಾಯಿತು 
ಹಿರಿಯೂರು ತಾಲ್ಲೂಕಿನ ಭೀಮನ ಬಂಡೆ ಸಮೀಪ ಇರುವ ಯಾಜ್ಞವಲ್ಕ್ಯ ಪಿಯು ಕಾಲೇಜಿನಲ್ಲಿ ಬುಧವಾರ ಮುಕ್ತಾಯಗೊಂಡ ಭಾರತೀಯ ಭಾಷಾ ಪರಿವಾರ ರಾಷ್ಟ್ರೀಯ ಸಮ್ಮೇಳನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮುರಿಗೆಪ್ಪ ಅವರನ್ನು ಸನ್ಮಾನಿಸಲಾಯಿತು    

ಹಿರಿಯೂರು: ‘ತರಗತಿಯಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳು ಒಂದೇ ಎಂಬ ಭಾವನೆಯಿಂದ ಶಿಕ್ಷಕರು ಪಾಠ ಬೋಧಿಸಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮುರಿಗೆಪ್ಪ ಸಲಹೆ ನೀಡಿದರು.

ತಾಲ್ಲೂಕಿನ ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಭಾರತೀಯ ಭಾಷಾ ಪರಿವಾರ ಕುರಿತ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಸುವು ತನ್ನ ಕರುವಿಗೆ ಹಾಲುಣಿಸುವುದು ಆದ್ಯ ಕರ್ತವ್ಯ ಎಂದು ಭಾವಿಸುತ್ತದೆ. ಅಧ್ಯಾಪಕರು ಕೂಡ ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಬೇಕು. ಶಿಕ್ಷಕ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡದೆ ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಭಾರತದ ಸಾಂಸ್ಕೃತಿಕ ಬೇರುಗಳನ್ನು ಬಲಪಡಿಸುವಲ್ಲಿ ಭಾರತೀಯ ಭಾಷಾಶಾಸ್ತ್ರ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು, ಅದನ್ನು ವಿದ್ಯಾರ್ಥಿಗಳಿಗೆ ತಪ್ಪದೇ ತಿಳಿಸಬೇಕು’ ಎಂದು ಹೇಳಿದರು.

ADVERTISEMENT

‘ಮುಖ್ಯ ವಾಹಿನಿಯ ಶಿಕ್ಷಣ ಹಾಗೂ ಸಂಶೋಧನೆಗಳು ಮಾತೃಭಾಷೆಯಲ್ಲಿ ನಡೆಯಬೇಕು. ಹಾಗಾದಾಗ ಮಾತ್ರ ಪರಿಣಾಮಕಾರಿ ಬೋಧನೆ, ಗುಣಮಟ್ಟದ ಸಂಶೋಧನಾ ಕೃತಿಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿನ ಪಿಯು ಕಾಲೇಜೊಂದರಲ್ಲಿ ಭಾರತೀಯ ಭಾಷಾ ಪರಿವಾರ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಸುಲಭದ ವಿಚಾರವಲ್ಲ. ಹಲವು ತಜ್ಞರು, ಸಂಶೋಧಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂಬುದೇ ಖುಷಿಯ ಸಂಗತಿ’ ಎಂದು ಮುರಿಗೆಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

‘ಭಾರತೀಯ ಭಾಷೆಗಳ ಪ್ರಚಾರ ಮತ್ತು ಸಂರಕ್ಷಣೆಗೆ ಮೀಸಲಾಗಿರುವ ಉನ್ನತ ಮಟ್ಟದ ಶೈಕ್ಷಣಿಕ ಸಭೆಯು ತನ್ನ ಪರಾಕಾಷ್ಠೆಯನ್ನು ಗುರುತಿಸುವಲ್ಲಿ ಸಫಲವಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಭಾಷಾ ಉತ್ಸಾಹಿಗಳು ಸಕ್ರಿಯವಾಗಿ ಭಾಗವಹಿಸಿರುವುದು ಸಂತಸದ ಸಂಗತಿ. ಎಲ್ಲರೂ ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ಭಾರತೀಯ ಭಾಷೆಗಳ ಪಾತ್ರದ ಕುರಿತು ಚರ್ಚಿಸಿರುವುದು ಸಮ್ಮೇಳನದ ಆಯೋಜನೆಗೆ ರೆಕ್ಕೆ ಮೂಡಿಸಿದೆ’ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಸುರೇಶ್ ತಿಳಿಸಿದರು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕರಾದ ಜ್ಯೋತಿ ಶಂಕರ್, ಭಾರತೀಯ ವಿಜ್ಞಾನ ಸಂಸ್ಥೆಯ ಉಪ ನೋಂದಣಾಧಿಕಾರಿ ವೀರಣ್ಣ ಕಮ್ಮಾರ್, ಶಾಸನ ಶಾಸ್ತ್ರಜ್ಞ  ರಾಜಶೇಖರಪ್ಪ, ಸಂಪನ್ಮೂಲ ವ್ಯಕ್ತಿ ಬಾಲಾಜಿ, ಶಾಲೆಯ ಪ್ರಾಂಶುಪಾಲ ಶ್ರೀಶಾನ್, ಉಪನ್ಯಾಸಕರಾದ ವೇಣುಕುಮಾರ್, ಶಿವಾನಂದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.