ADVERTISEMENT

ಚಿತ್ರದುರ್ಗ | ಹಬ್ಬದ ಶುಭಾಶಯ ‘ವಾಟ್ಸ್‌ಆ್ಯಪ್‌’ನಲ್ಲಿ ವಿನಿಮಯ

‘ಈದ್‌ ಉಲ್‌ ಫಿತ್ರ್‌‘ ಸರಳ ಆಚರಣೆಗೆ ಧರ್ಮಗುರುಗಳ ಸೂಚನೆ

ಕೆ.ಎಸ್.ಪ್ರಣವಕುಮಾರ್
Published 21 ಮೇ 2020, 19:45 IST
Last Updated 21 ಮೇ 2020, 19:45 IST
ಚಿತ್ರದುರ್ಗದ ರಾಜವೀರ ಮದಕರಿನಾಯಕ ವೃತ್ತದ ಸಮೀಪವಿರುವ ಮಸೀದಿ
ಚಿತ್ರದುರ್ಗದ ರಾಜವೀರ ಮದಕರಿನಾಯಕ ವೃತ್ತದ ಸಮೀಪವಿರುವ ಮಸೀದಿ   

ಚಿತ್ರದುರ್ಗ:ಕೊರೊನಾ ಸೋಂಕು ಸೃಷ್ಟಿಸಿದ ಭೀತಿಯ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮೀಯರ ಪವಿತ್ರ ಹಬ್ಬ ‘ಈದ್‌ ಉಲ್‌ ಫಿತ್ರ್‌‘ ಅನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಪ್ರತಿ ವರ್ಷ ಇಸ್ಲಾಂ ಧರ್ಮದ ಸಾವಿರಾರು ಜನ ಸುಗಂಧ ದ್ರವ್ಯದ ಪರಿಮಳ, ಹೊಸ ಬಟ್ಟೆಗಳೊಂದಿಗೆ ಶ್ವೇತ ವಸ್ತ್ರಧಾರಿಗಳಾಗಿ ಸಡಗರದಿಂದ ಈದ್ಗಾ ಮೈದಾನ ಪ್ರವೇಶಿಸುತ್ತಿದ್ದರು. ಈ ಬಾರಿ ಇದಕ್ಕೆ ಅವಕಾಶವಿಲ್ಲ. ‘ಈದ್‌ ಉಲ್‌ ಫಿತ್ರ್‌’ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲು ಮೌಲ್ವಿ, ಧರ್ಮಗುರು, ಪೇಶ್‍ಇಮಾಮ್, ಮೌಝಿನ್‍ ಹಾಗೂ ಸಿಬ್ಬಂದಿ ಸೇರಿ ಐದು ಜನ ಮಾತ್ರ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಅಂತರಂಗ ಶುದ್ಧಿ, ದಾನ, ಧರ್ಮ, ಸನ್ನಡತೆಗೆ ಮಾರ್ಗ ತೋರಿಸುವ ‘ರಂಜಾನ್’ ಮುಸ್ಲಿಂ ಸಮುದಾಯಕ್ಕೆ ಪವಿತ್ರ ಮಾಸ. ಈ ಅವಧಿಯಲ್ಲಿ ಮುಸ್ಲಿಮರಿಗೆ ಉಪವಾಸ ವ್ರತ ಅತ್ಯಂತ ಮಹತ್ವದ್ದು. ಈ ವ್ರತವನ್ನು ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಳಿಸುತ್ತಿದ್ದರು. ಇದಕ್ಕೂ ಕೂಡ ಅವಕಾಶ ಇಲ್ಲವಾಗಿದೆ.

ADVERTISEMENT

ವ್ಯಾಪಕವಾಗಿ ಹರಡುತ್ತಿರುವ ‘ಕೋವಿಡ್-19’ರ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಇಸ್ಲಾಂ ಧರ್ಮ ಗುರುಗಳು ಬೆಂಬಲಿಸಿದ್ದಾರೆ. ಸರ್ಕಾರದ ನಿಯಮ ಪಾಲನೆಗಾಗಿ ಮಸೀದಿಗಳಲ್ಲೇ ಐದು ಮಂದಿ ಬೆಳಿಗ್ಗೆ 5.30ಕ್ಕೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆನಂತರ ಎಲ್ಲ ಮುಸ್ಲಿಮರು ಮನೆಗಳಲ್ಲೇ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು ಎಂದು ಜಾಮೀಯಾ ಮಸೀದಿ ಹಾಗೂ ವಕ್ಫ್ ಮಂಡಳಿ ಮನವಿ ಮಾಡಿವೆ.

ಮನೆಯಲ್ಲೇ ಆಚರಣೆ ಹೇಗೆ?: ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಇಲ್ಲಿನ ಜಾಮೀಯಾ ಮಸೀದಿಯ ಅಧ್ಯಕ್ಷ ಇಕ್ಪಾಲ್ ಹುಸೇನ್ (ಎಂಸಿಒ ಬಾಬು), ‘ರಂಜಾನ್ ಆಚರಣೆ ಬಗ್ಗೆ ಜಿಲ್ಲೆಯ ಎಲ್ಲ ಮಸೀದಿಗಳ ಮುಖ್ಯಸ್ಥರ ಜತೆ ಈಗಾಗಲೇ ಚರ್ಚಿಸಿದ್ದೇವೆ. ಈ ಬಾರಿ ಸರಳವಾಗಿ ಆಚರಿಸಲು ರಾಜ್ಯಮಟ್ಟದ ಧರ್ಮಗುರುಗಳು ಸೂಚಿಸಿದ್ದಾರೆ. ಅದರಂತೆಯೇ ಸಮುದಾಯದವರು ಆಚರಿಸಲಿದ್ದಾರೆ’ ಎಂದರು.

‘ಮಸೀದಿಗಳಲ್ಲಿ ನಮಾಜ್ ಮುಗಿದ ಬಳಿಕ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ವಿಶ್ವವೇ ಸಾವು-ನೋವಿನಿಂದ ನಲುಗುತ್ತಿರುವ ಕಾರಣ ಕೊರೊನಾ ಮುಕ್ತವಾಗಲು ದೇವರಲ್ಲಿ ಪ್ರತಿಯೊಬ್ಬರು ಪ್ರಾರ್ಥಿಸಬೇಕು. ದೂರವಾಣಿ ಕರೆ ಅಥವಾ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಳ್ಳಬೇಕು. ಧರ್ಮಗುರುಗಳ ಮಾರ್ಗದರ್ಶನ ಪಾಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಇಫ್ತಾರ್ ಬದಲು ಕಿಟ್ ವಿತರಣೆ:ಒಂದು ತಿಂಗಳು ಕಠಿಣ ಉಪವಾಸ ಆಚರಿಸಿರುವ ಮುಸ್ಲಿಮರು ಮೇ 23 ಅಥವಾ 24ರಂದು ಚಂದ್ರನ ದರ್ಶನ ಮಾಡಲಿದ್ದಾರೆ. ಹಸಿವಿನ ಮಹತ್ವ ಸಾರುವ ಈ ಮಾಸಾಚರಣೆಯಲ್ಲಿ ಇಫ್ತಾರ್ ಕೂಟಗಳು ನಡೆಯುತ್ತಿದ್ದವು. ಆದರೆ, ಇದೇ ಮೊದಲ ಬಾರಿ ಜಿಲ್ಲೆಯ ಎಲ್ಲಿಯೂ ಇಂತಹ ಕೂಟಗಳು ನಡೆದಿಲ್ಲ. ಇದರ ಬದಲು ಸಮುದಾಯದ ಹಮಾಲರಿಗೆ, ಮೆಕ್ಯಾನಿಕ್‌ಗಳಿಗೆ, ಕೂಲಿ ಕಾರ್ಮಿಕರು ಸೇರಿ ಬಡವರಿಗೆ ಉಳ್ಳವರು ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಿದ್ದಾರೆ. ಇಂತಹ ಸೇವೆಯ ಮೂಲಕವೇ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸನ್ನದ್ಧರಾಗಿದ್ದಾರೆ.

ರಂಜಾನ್‌ ಮಾಸಾಚರಣೆಯಲ್ಲಿ ಬೆಳಿಗ್ಗೆ 5ಕ್ಕೆ ಫಜರ್, ಮಧ್ಯಾಹ್ನ 1ಕ್ಕೆ ಜೋಹರ್, ಸಂಜೆ 5ಕ್ಕೆ ಅಸರ್, ರಾತ್ರಿ 7ಕ್ಕೆ ಮಗರೀಬ್, 8ಕ್ಕೆ ಇಶಾನ್ ಸೇರಿ ಐದು ಹೊತ್ತಿನ ಪ್ರಾರ್ಥನೆ ನಡೆದಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಈ ಬಾರಿ ಸಾರ್ವಜನಿಕ ಪ್ರವಚನ, ಧಾರ್ಮಿಕ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

ಹೊಸ ಬಟ್ಟೆ ಧರಿಸದಂತೆ ಸೂಚನೆ
‘ಪ್ರತಿ ವರ್ಷದಂತೆ ಈ ಬಾರಿ ರಂಜಾನ್ ಆಚರಿಸಲು ಸಾಧ್ಯವಾಗುತ್ತಿಲ್ಲ. ಜಗತ್ತು ತೊಂದರೆಯಲ್ಲಿ ಇರುವಾಗ ನಾವು ಹೊಸ ಬಟ್ಟೆ ಧರಿಸಿ ಸಂಭ್ರಮಿಸುವುದು ಸರಿಯಲ್ಲ. ಹಳೆ ಬಟ್ಟೆಯನ್ನೇ ಧರಿಸಿ ಸರ್ವರ ಒಳಿತಿಗಾಗಿ ಮನೆಯಲ್ಲೇ ಪ್ರಾರ್ಥಿಸೋಣ. ಇತಿಹಾಸದಲ್ಲೇ ಸರಳ ಆಚರಣೆ ಇದಾಗಿದೆ’ ಎಂದು ಇಕ್ಪಾಲ್ ಹುಸೇನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.