ಹಿರಿಯೂರು: ‘ನಾನು ಶಿಕ್ಷಣ ಸಚಿವನಾಗುವ ಮೊದಲು 55–60 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದವು. ಅದರಲ್ಲಿ 13 ಸಾವಿರ ಹುದ್ದೆ ಭರ್ತಿ ಮಾಡಲಾಯಿತು. ಪ್ರಸ್ತುತ ಒಳ ಮೀಸಲಾತಿ ಜಾರಿ ಆದೇಶ ಹೊರಬಂದ ತಕ್ಷಣ 18,000 ಶಿಕ್ಷಕರ ಹುದ್ದೆಗಳನ್ನು 3–4 ತಿಂಗಳೊಳಗೆ ಭರ್ತಿ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ತಾಳವಟ್ಟಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರ ಕೆಲಸವಾಗಬಾರದು. ಸಾರ್ವಜನಿಕರು, ಗ್ರಾಮಸ್ಥರು, ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕು. ಶಿಕ್ಷಣಕ್ಕೆ ಒತ್ತು ನೀಡುವುದು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿ. ಶತಮಾನ ಪೂರೈಸಿರುವ ತಾಳವಟ್ಟಿ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳ ನೆರವು ಹಾಗೂ ದಾನಿಗಳ ಸಹಾಯದಿಂದ ಉತ್ತಮ ಕಾಯಕಲ್ಪ ನೀಡಿದ್ದು, ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿರುವುದು ಶ್ಲಾಘನೀಯ’ ಎಂದರು.
‘ರಾಜ್ಯದಲ್ಲಿ ಪ್ರಸ್ತುತ 307 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಈ ವರ್ಷವೇ ರಾಜ್ಯ ಸರ್ಕಾರ ವತಿಯಿಂದ 500 ಕೆಪಿಎಸ್ ಶಾಲೆಗಳನ್ನು 15 ದಿನದ ಒಳಗೆ ಘೋಷಣೆ ಮಾಡಲಾಗುವುದು. ಇದರ ಜೊತೆಗೆ ಹೈದರಾಬಾದ್ ಕರ್ನಾಟಕದಲ್ಲಿ ಅಕ್ಷರ ಅವಿಷ್ಕಾರ ವತಿಯಿಂದ 100 ಕೆಪಿಎಸ್ ಸೇರಿದಂತೆ ಒಟ್ಟು 600 ಕೆಪಿಎಸ್ ಕಾರ್ಯಾರಂಭ ಮಾಡಲಿವೆ’ ಎಂದು ತಿಳಿಸಿದರು.
‘ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ನಿಟ್ಟಿನಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಮಕ್ಕಳು ಸ್ವಂತ ಶಕ್ತಿ, ಸಾಮರ್ಥ್ಯದ ಮೇಲೆ ಉತ್ತೀರ್ಣರಾಗುವ ವ್ಯವಸ್ಥೆಗಾಗಿ ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಕ್ಕೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ‘ತಾಳವಟ್ಟಿ ಗ್ರಾಮದಲ್ಲಿ ವಿಶೇಷವಾದ ಸಂಭ್ರಮ ಕಾಣುತ್ತಿದೆ. ಗ್ರಾಮದ ಹಿರಿಯರು ಸೇರಿ ಸುಮಾರು ₹ 1 ಕೋಟಿ ಹಾಗೂ ಸರ್ಕಾರದಿಂದ ₹ 25 ಲಕ್ಷ ವೆಚ್ಚ ಮಾಡಿ ಶತಮಾನೋತ್ಸವ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆ ಆಧಾರದ ಮೇಲೆ ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರಿದ್ದಾರೆ. ಮಕ್ಕಳಿಗೆ ಹಾಲು, ಮೊಟ್ಟೆ, ಸಮವಸ್ತ್ರ, ಶೂ ಸೇರಿದಂತೆ ಹಲವಾರು ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ’ ಎಂದರು.
‘ಹಿರಿಯೂರು ವಿಧಾನ ಕ್ಷೇತ್ರದಲ್ಲಿ ಸುಮಾರು ₹ 30 ಕೋಟಿ ವೆಚ್ಚದಲ್ಲಿ 250 ಶಾಲಾ ತರಗತಿ ಕೊಠಡಿಗಳು, 100ಕ್ಕೂ ಹೆಚ್ಚು ಶೌಚಾಲಯ ಹಾಗೂ ಕಾಂಪೌಂಡ್‍ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕ ಪಾಲುಗಾರಿಕೆಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಬೇಕಿದೆ. ಗ್ರಾಮಸ್ಥರ ಮನವಿಯಂತೆ ಐಮಂಗಲ ಹೋಬಳಿಯ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರಮವಹಿಸುತ್ತೇನೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿದರು. ಶಾಲಾ ಪುನಶ್ಚೇತನ ಮತ್ತು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವಿ.ವೀರಭದ್ರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್, ಡಿಡಿಪಿಐ ಎಂ.ಆರ್.ಮಂಜುನಾಥ್, ತಹಶೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಶತಮಾನೋತ್ಸವ ಸಮಿತಿಯ ಎ.ಚಂದ್ರಾರೆಡ್ಡಿ, ಜಲೀಲ್ ಸಾಬ್, ಎಂ.ನೀಲಕಂಠದೇವ, ಲಕ್ಷ್ಮಿಕಾಂತ್, ಎ.ಅನಂತರೆಡ್ಡಿ, ಪ್ರವೀಣ್ ಉಪಸ್ಥಿತರಿದ್ದರು.
ಸಚಿವ ಮಧು ಬಂಗಾರಪ್ಪ ಅವರು ಸಚಿವ ಡಿ. ಸುಧಾಕರ್ ಅವರನ್ನು ಸ್ಕೂಟರ್ ಹಿಂಬದಿ ಆಸನದಲ್ಲಿ ಕೂರಿಸಿಕೊಂಡು ಶಾಲಾ ಮುಖ್ಯದ್ವಾರದಿಂದ ವೇದಿಕೆಯವರೆಗೆ ಬಂದು ಅಚ್ಚರಿ ಮೂಡಿಸಿದರು.
ಶಾಲಾ ಗಂಟೆಯಿಂದ ದೇಶದ ಉದ್ಧಾರ
‘ಶಾಲೆ ಎಂಬ ದೇಗುಲದಲ್ಲಿ ಜಾತಿ– ಧರ್ಮದ ವಿಷ ಬೀಜ ಬಿತ್ತಬಾರದು. ದೇಗುಲದಲ್ಲಿ ಗಂಟೆ ಹೊಡೆಯುತ್ತಾರೋ ಬಿಡುತ್ತಾರೋ ಶಾಲೆಯಲ್ಲಿ ಗಂಟೆ ಹೊಡೆದರೆ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ‘ಮಕ್ಕಳು ನಾವು ಹೇಳಿಕೊಟ್ಟಿದ್ದನ್ನು ಕಲಿಯುತ್ತವೆ. ಅವುಗಳ ಮನಸ್ಸಿನಲ್ಲಿ ಕಲ್ಮಶ ತುಂಬಬಾರದು. ರಾಜ್ಯ ಶಿಕ್ಷಣ ನೀತಿ (ಎಸ್‍ಇಪಿ) ಕರಡು ವರದಿ ಸಲ್ಲಿಸಲಾಗಿದೆ. ಅದರಲ್ಲಿರುವ ನ್ಯೂನತೆಗಳನ್ನು ಪರಿಶೀಲನೆ ನಡೆಸಲು ಉಪ ಸಮಿತಿ ರಚನೆ ಮಾಡಿ ನಂತರ ಅಂತಿಮವಾಗಿ ಅನುಷ್ಠಾನ ಮಾಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ರಾಜ್ಯದಲ್ಲಿ ಒಪ್ಪುವುದಿಲ್ಲ’ ಎಂದರು.
‘ಪರೀಕ್ಷಾ ಬದಲಾವಣೆ; ಫಲಿತಾಂಶ ಸುಧಾರಣೆ’
ಹಿರಿಯೂರು: ‘ಎಸ್ಎಸ್ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತಂದು ಮೂರು ಪರೀಕ್ಷೆಗಳನ್ನು ಜಾರಿಗೊಳಿಸಿದ ಪರಿಣಾಮ 51 ವಿದ್ಯಾರ್ಥಿಗಳು ಶೇ 100ರಷ್ಟು ಅಂಕ ಗಳಿಸಲು ಕಾರಣವಾಯಿತು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ರಂಗನಾಥ ಪಿಯು ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಗ್ರಂಥಾಲಯ ಹಾಗೂ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಶನಿವಾರ ಮಾತನಾಡಿದರು. ‘ಮಕ್ಕಳ ಭವಿಷ್ಯದ ಸಾಧನೆಗೆ ಶಿಕ್ಷಣವೇ ತಳಹದಿ. ಪ್ರಸ್ತುತ ರಾಜ್ಯದಲ್ಲಿ ಪಿಯುವರೆಗೆ 1.8 ಕೋಟಿ ವಿದ್ಯಾರ್ಥಿಗಳಿದ್ದಾರೆ. ಅವರಿಗೆಲ್ಲ ಅನೇಕ ಶೈಕ್ಷಣಿಕ ಸೌಲಭ್ಯ ಒದಗಿಸಿದ್ದು ಪರೀಕ್ಷೆಗಳಲ್ಲಿ ಯಾರೂ ಅನುತ್ತೀರ್ಣರಾಗಬಾರದು ಎಂಬ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಬಡ ಮಕ್ಕಳ ಸಂಕಷ್ಟವನ್ನರಿತು ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳನ್ನು 2 ಮತ್ತು 3 ನೇ ಬಾರಿ ಬರೆಯಲು ಶುಲ್ಕರಹಿತ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ’ ಎಂದರು. ಸಚಿವ ಡಿ.ಸುಧಾಕರ್ ಮಾತನಾಡಿ ‘ಸಚಿವ ಮಧು ಬಂಗಾರಪ್ಪ ಹತ್ತಾರು ಬದಲಾವಣೆಗಳನ್ನು ತರುವ ಕೆಲಸ ಮಾಡುತ್ತಿದ್ದಾರೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಸಿರುವುದು ಸವಾಲಿನ ಕೆಲಸ. ಸರ್ಕಾರಿ ಶಾಲೆಗೆ ಸೇರುವ ಬಡಮಕ್ಕಳ ಮೇಲೆ ಸಚಿವರಿಗೆ ವಿಶೇಷ ಕಾಳಜಿ ಇರುವ ಕಾರಣಕ್ಕೆ ಅಜೀಂಪ್ರೇಂಜೀ ಫೌಂಡೇಷನ್ ಮೂಲಕ ಪೌಷ್ಠಿಕ ಆಹಾರ ವಿತರಿಸುವ ಕೆಲಸಕ್ಕೆ ಚಾಲನೆ ಕೊಡಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ವೀರಕರಿಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಬಾಲಕೃಷ್ಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ.ಸಣ್ಣಪ್ಪ ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಪ್ರಾಂಶುಪಾಲ ಶರತ್ ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್ ಮುಖಂಡರಾದ ಜಿ.ಪ್ರೇಮ್ ಕುಮಾರ್ ಆರ್.ನಾಗೇಂದ್ರ ನಾಯ್ಕ್ ಟಿ.ಚಂದ್ರಶೇಖರ್ ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.