ಹಿರಿಯೂರು: ‘ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಕನ್ನಡ ಈ ಮಣ್ಣಿನ ಭಾಷೆ. ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್ ಕಲಿಕೆಯ ಅಗತ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.
ನಗರದ ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 1ನೇ ತರಗತಿಯಿಂದ ನೂತನವಾಗಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ದುಬಾರಿ ಶುಲ್ಕವನ್ನು ಭರಿಸುವ ಶಕ್ತಿ ಇಲ್ಲದೆ ಬಡತನದ ಹಿನ್ನೆಲೆ ಹೊಂದಿರುವವರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಇದೆ. ಭವಿಷ್ಯದಲ್ಲಿ ಬಡವರ ಮಕ್ಕಳು ಎಂಜಿನಿಯರಿಂಗ್, ಮೆಡಿಕಲ್, ಕೃಷಿ, ತೋಟಗಾರಿಕೆ, ವಿಜ್ಞಾನ–ತಂತ್ರಜ್ಞಾನ ಓದಲು ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯ. ಹೀಗಾಗಿ ಆರ್ಥಿಕವಾಗಿ ಹಿಂದುಳಿದ ಪೋಷಕರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿ ಆರಂಭಿಸಲಾಗುತ್ತಿದೆ. ಇದರಿಂದ ಕನ್ನಡ ಕಲಿಕೆಗೆ ಹಿನ್ನಡೆ ಆಗದು’ ಎಂದು ತಿಳಿಸಿದರು.
ಬಿಇಒ ಸಿ.ಎಂ. ತಿಪ್ಪೇಸ್ವಾಮಿ, ನಗರಸಭಾಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾದಿ ರಮೇಶ್, ಎಂ.ಎಸ್. ಈರಲಿಂಗೇಗೌಡ, ಈ. ಮಂಜುನಾಥ್, ಎಂ.ಡಿ. ಸಣ್ಣಪ್ಪ, ಮಮತಾ, ವಿಠಲ್, ಗುಂಡೇಶ್ ಕುಮಾರ್, ದೇವಿರಮ್ಮ, ಟಿ. ಚಂದ್ರಶೇಖರ್, ಗುಜ್ಜಾರ್ ಗೌಡ, ವಿ. ಶಿವಕುಮಾರ್, ಮಂಜು, ಹನುಮಂತ ಬೋವಿ, ಜ್ಞಾನೇಶ್, ದರ್ಶನ್, ದುರ್ಗೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.