ADVERTISEMENT

ಚಿತ್ರದುರ್ಗ | ಜಿಲ್ಲಾಧಿಕಾರಿ ಕಚೇರಿಗೆ ರೈತರ ದಿಗ್ಬಂಧನ

3–4 ದಿನ ಯೂರಿಯಾ ವಿತರಣೆ ಇಲ್ಲ; ಸಿಬ್ಬಂದಿಗೆ ಪ್ರವೇಶ ನೀಡದೆ ಅನ್ನದಾತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:50 IST
Last Updated 30 ಜುಲೈ 2025, 6:50 IST
ಯೂರಿಯಾ ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮನವೊಲಿಸಲು ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ್‌ ಯತ್ನಿಸಿದರು 
ಯೂರಿಯಾ ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮನವೊಲಿಸಲು ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ್‌ ಯತ್ನಿಸಿದರು    

ಚಿತ್ರದುರ್ಗ: ಮುಂಗಾರು ಬಿತ್ತನೆಗೆ ಯೂರಿಯಾ ಕೊರತೆಯಾಗಿರುವುದನ್ನು ಖಂಡಿಸಿ ನೂರಾರು ರೈತರು, ರೈತ ಮಹಿಳೆಯರು ಮಂಗಳವಾರ ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ದುಗ್ಬಂಧನ ಹಾಕಿದರು. ಕಚೇರಿಯೊಳಗೆ ಸಿಬ್ಬಂದಿ ಸೇರಿದಂತೆ ಯಾರೂ ಪ್ರವೇಶ ಮಾಡದಂತೆ ರಸ್ತೆ ಬಂದ್‌ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬೇಡರಶಿವನಕೆರೆ, ಬಸವನಶಿವನಕೆರೆ, ಕಬ್ಬಿಗೆರೆ ಗ್ರಾಮದ ನೂರಾರು ರೈತರು ಬೆಳಿಗ್ಗೆ 6 ಗಂಟೆಗೆ ನಗರದ ಎಪಿಎಂಸಿ ಆವರಣದಲ್ಲಿರುವ ರೈತರ ಸೊಸೈಟಿಗೆ ಯೂರಿಯಾ ಪಡೆಯಲು ಬಂದಿದ್ದರು. ಯೂರಿಯಾ ಸಿಗುತ್ತದೆ ಎಂಬ ಆಸೆಯಿಂದ ಸಾಲುಗಟ್ಟಿ ನಿಂತಿದ್ದರು. ಆದರೆ ಸೊಸೈಟಿ ಸಿಬ್ಬಂದಿ ‘ಯೂರಿಯಾ ಸಂಗ್ರವಿಲ್ಲದ ಕಾರಣ ಸಿಗುವುದಿಲ್ಲ. ಇನ್ನೂ 3–4 ನಾಲ್ಕು ದಿನ ಗೊಬ್ಬರವಿಲ್ಲ’ ಎಂದು ಉತ್ತರ ನೀಡಿದರು.

ಯೂರಿಯಾ ಸಿಗುವುದಿಲ್ಲ ಎಂಬ ಉತ್ತರ ಸಿಗುತ್ತಿದ್ದಂತೆ ರೈತರು, ಮಹಿಳೆಯರು ಸೊಸೈಟಿ, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಬೆಳಿಗ್ಗೆ 8.30ರ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದು ಪ್ರತಿಭಟನೆ ಆರಂಭಿಸಿದರು. ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲೇ ರೈತರು ಕುಳಿತಿದ್ದ ಕಾರಣ ಕಚೇರಿಯ ಒಳಗೆ ತೆರಳಲು ಯಾರಿಗೂ ಸಾಧ್ಯವಾಗಲಿಲ್ಲ.

ADVERTISEMENT

ಬೆಳಿಗ್ಗೆ 9.30 ಆದರೂ ಕಚೇರಿಯೊಳಗೆ ತೆರಳಲು ಸಿಬ್ಬಂದಿಗೆ ಸಾಧ್ಯವಾಗಲಿಲ್ಲ. ಯೂರಿಯಾ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ನಡೆಯಲು ಅವಕಾಶ ಕೊಡುವುದಿಲ್ಲ. ಯೂರಿಯಾ ಕೊಟ್ಟರೆ ಮಾತ್ರ ಮಾತ್ರ ನಾವು ಇಲ್ಲಿಂದ ತೆರಳುತ್ತೇವೆ ಎಂದು ಪಟ್ಟು ಹಿಡಿದರು. ಕಚೇರಿಗೆ ಬಂದ ನೌಕರರು ಒಳಗೆ ತೆರಳಲು ಸಾಧ್ಯವಾಗದೇ ಹೊರಗೇ ನಿಂತಿದ್ದರು. ರಸ್ತೆಗೆ ಅಡ್ಡಲಾಗಿ ಕುಳಿತಿದ್ದ ಕಾರಣ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಪರಿಸ್ಥಿತಿ ಕೈಮೀರು ಹೋಗುತ್ತಿರುವುದನ್ನು ಅರಿತ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ರೈತರ ಮನವೊಲಿಸಲು ಯತ್ನಿಸಿದರು. ನಗರ ಠಾಣೆ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ ರೈತರಿಗೆ ಮನವಿ ಮಾಡಿದರೂ ಕಚೇರಿಯ ಒಳಗೆ ಸಿಬ್ಬಂದಿಯನ್ನು ಬಿಡದೇ ಗೇಟ್‌ ಬಳಿಯೇ ಕುಳಿತಿದ್ದರು. ‘ಬೆಳೆದು ನಿಂತಿರುವ ಮೆಕ್ಕೆಜೋಳ ಬೆಳೆ ಉಳಿಸಿಕೊಳ್ಳಲು ಯೂರಿಯಾ ಬೇಕು. ಹಣ ಕೊಟ್ಟರೂ ಯೂರಿಯಾ ಏಕೆ ಸಿಗುತ್ತಿಲ್ಲ’ ಎಂದು ರೈತ ಮಹಿಳೆಯರು ಪ್ರಶ್ನಿಸಿದರು.

ರೈತರು ಪಟ್ಟು ಹಿಡಿದ ನಂತರ ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್‌ ಸ್ಥಳಕ್ಕೆ ಬಂದು ರೈತರ ಮನವೊಲಿಸಲು ಪ್ರಯತ್ನಿಸಿದರು. ‘ಸೋಮವಾರವೇ 600 ಟನ್‌ನಷ್ಟು ಯೂರಿಯಾ ವಿತರಣೆ ಮಾಡಿದ್ದೇವೆ. ಇನ್ನೂ 3–4 ದಿನ ಗೊಬ್ಬರ ಬರುವುದಿಲ್ಲ. ಅಲ್ಲಿಯವರೆಗೂ ರೈತರು ಸಾವಧಾನದಿಂದ ಕಾಯಬೇಕು. 300 ಟನ್‌ನಷ್ಟು ಯೂರಿಯಾ ಜಿಲ್ಲೆಗೆ ಬರಲಿದೆ’ ಎಂದು ಹೇಳಿದರು.

ಬಿ.ಮಂಜುನಾಥ್‌ ಮಾತಿಗೆ ಸಮಾಧಾನಗೊಳ್ಳದ ರೈತರು ಸರ್ಕಾರ, ಕೃಷಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಯೂರಿಯಾ ಸಿಗದಿದ್ದರೆ ಯೂರಿಯಾ ವಿತರಣೆಯ ಟೋಕನ್‌ ನೀಡಬೇಕು. ಟೋಕನ್‌ ನೀಡಿದರೆ ಮಾತ್ರ ನಾವು ಜಿಲ್ಲಾಧಿಕಾರಿ ಕಚೇರಿಯಿಂದ ತೆರಳುತ್ತೇವೆ. ಇಲ್ಲದಿದ್ದರೆ ಜಿಲ್ಲಾಧಿಕಾರಿ ಸೇರಿ ಯಾರನ್ನೂ ಕಚೇರಿಯೊಳಗೆ ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು. ಟೋಕನ್‌ ನೀಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ರಸ್ತೆಗೆ ಅಡ್ಡಲಾಗಿ ಕುಳಿತಿದ್ದ ರೈತ ಮಹಿಳೆಯರನ್ನು ಪೊಲೀಸರು ಮನವೊಲಿಸುತ್ತಿರುವುದು

ಡಿ.ಸಿ ಕಚೇರಿ ಪ್ರವೇಶದ್ವಾರದಲ್ಲೇ ಪ್ರತಿಭಟನೆ ಕಚೇರಿ ಸಿಬ್ಬಂದಿಗೆ ಪ್ರವೇಶ ನೀಡದೇ ಆಕ್ರೋಶ ಯೂರಿಯಾ ವಿತರಣೆ ಮಾಡುವವರೆಗೂ ಹೋರಾಟ

ಕೇಂದ್ರ ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ? ದೇಶ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರಧಾನ ಮಂತ್ರಿ ಮುಖ್ಯಮಂತ್ರಿಗೆ ಯೂರಿಯಾ ಕೊಡುವ ಯೋಗ್ಯತೆ ಇಲ್ಲವೇ? ಉತ್ತಮ ಮಳೆಯಾಗುತ್ತಿದ್ದು ಈ ವೇಳೆ ಮೆಕ್ಕೆಜೋಳಕ್ಕೆ ಯೂರಿಯಾ ಹಾಕಿದ್ದರೆ ಬೆಳೆ ಉಳಿಯುವುದಿಲ್ಲ. ಬೆಳೆ ಬಾರದಿದ್ದರೆ ಇಡೀ ವರ್ಷದ ನಮ್ಮ ಅನ್ನಕ್ಕೆ ಕಲ್ಲು ಬೀಳುತ್ತದೆ. ರೈತರ ಕಷ್ಟ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಖಾಸಗಿ ರಸಗೊಬ್ಬರದ ಅಂಗಡಿಗಳಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ರೈತರ ಸೊಸೈಟಿಗಳಲ್ಲಿ ಗೊಬ್ಬರ ಇಲ್ಲ ಎನ್ನುತ್ತಿದ್ದಾರೆ. ಖಾಸಗಿ ಅಂಗಡಿಗಳಲ್ಲಿ ಸಿಗುವ ಗೊಬ್ಬರ ಸೊಸೈಟಿಗಳಲ್ಲಿ ಏಕೆ ಸಿಗುವುದಿಲ್ಲ? ಅಧಿಕಾರಿಗಳು ಕೃತಕ ಬರ ಸೃಷ್ಟಿಸಿದ್ದು ರೈತರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.