
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಅನುದಾನ ನೀಡಬೇಕು ಎಂದು ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮಂಗಳವಾರ 2ನೇ ದಿನಕ್ಕೆ ತಲುಪಿತು.
ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಅನುದಾನ ಘೋಷಣೆ ಮಾಡುವವರೆಗೂ ಉಪವಾಸ ಸತ್ಯಾಗ್ರಹ ನಡೆಯಲಿದೆ. 2 ದಿನಗಳಿಂದ ಉಪವಾಸ ನಡೆಸುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿಲ್ಲ. ರೈತರ ನೋವು, ಕೂಗು ಜನಪ್ರತಿನಿಧಿಗಳಿಗೆ ಕೇಳಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮುಖಂಡ ಆರ್.ಶೇಷಣ್ಣಕುಮಾರ್ ಮಾತನಾಡಿ, ‘35 ವರ್ಷಗಳಿಂದ ರೈತರು, ಕಾರ್ಮಿಕರು, ವಿವಿಧ ಸಂಘಟನೆಗಳು ನಡೆಸಿದ ಚಳವಳಿ ಪರಿಣಾಮ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ. ಆದರೆ ಅದನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಭದ್ರೆಗೆ ಹಣ ಕೊಡಲು ಆಗದಿದ್ದರೇ ಅಧಿಕಾರದಿಂದ ಕೆಳಗಿಳಿಯಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇಶಕ್ಕೆ ಅನ್ನ ಕೊಡುವ ಅನ್ನದಾತರು ನೀರಿಗಾಗಿ ಅನ್ನ-ನೀರು ತೊರೆದು ಉಪವಾಸ ಕುಳಿತಿದ್ದಾರೆ. ಹೋರಾಟದ ಕಿಚ್ಚು ಹೆಚ್ಚಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಕೇಂದ್ರ ಸರ್ಕಾರ ₹ 5,300 ಕೋಟಿ, ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ₹5,000 ಕೋಟಿ ಬಿಡುಗಡೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು’ ಎಂದರು.
ನೀರಾವರಿ ಹೋರಾಟ ಸಮಿತಿ ಸಂಚಾಲಕ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ 1,200 ಅಡಿ ಅಳಕ್ಕೆ ಇಳಿದರೂ ನೀರು ಸಿಗುತ್ತಿಲ್ಲ. ರೈತರು ಕೊಳವೆಬಾವಿ ಕೊರೆಸಿ ಸಾಲಗಾರರಾಗುತ್ತಿದ್ದಾರೆ. ಈ ಸಮಸ್ಯೆಗೆ ಸ್ಪಂದಿಸಬೇಕಾದ ರಾಜಕಾರಣಿಗಳು ಇನ್ನೇನು ನೀರು ಹರಿದೇ ಬಿಟ್ಟಿತು ಎಂದು ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಟೀಕಿಸಿದರು.
ಸಿಐಟಿಯು ಮುಖಂಡ ಗೌಸ್‌ಪೀರ್ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಬರದ ಜಿಲ್ಲೆಯ ಜನರನ್ನು ಮಾನವೀಯ ಕಣ್ಣಿನಲ್ಲಿ ನೋಡಬೇಕು. ಇಲ್ಲದಿದ್ದರೇ ನಾವು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಬೇಡರರೆಡ್ಡಿಹಳ್ಳಿ ಬಸವರೆಡ್ಡಿ, ನರೇನಹಳ್ಳಿ ಅರುಣ್‌ಕುಮಾರ್ ಜೋಗಿಮಟ್ಟಿ ಈ. ಮಹೇಶಬಾಬು, ರೆಡ್ಡಿಹಳ್ಳಿ ವೀರಣ್ಣ, ಸಿದ್ರಾಮಪ್ಪ, ಸಣ್ಣತಿಮ್ಮಣ್ಣ, ಸಣ್ಣೀರಪ್ಪ, ನಿಂಗಪ್ಪ, ಪ್ರಸನ್ನ, ವೆಂಕಟೇಶ್, ವೀರಭದ್ರಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ರಂಗಣ್ಣ, ತಿಪ್ಪೇಸ್ವಾಮಿ, ಕೆಪಿಎಂ ಗಣೇಶಯ್ಯ, ಹುಣಸೆಕಟ್ಟೆ ರಾಜು ಇದ್ದರು. ವಿವಿಧ ಸಂಘಟನೆಗಳ ಸದಸ್ಯರು ಹೋರಾಟ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು.
‘ಭದ್ರೆ ನೀರಿಗಾಗಿ ಸಾಯಲು ಸಿದ್ಧ’ ‘
ಕೇಂದ್ರ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಅನುದಾನ ಬಿಡುಗಡೆ ಮಾಡಲೇಬೇಕು. ಹಣ ನೀಡದಿದ್ದರೆ ಉಪವಾಸ ಮುಂದುವರಿಯಲಿದ್ದು ನಾವು ಸಾಯಲು ಸಿದ್ಧರಿದ್ದೇವೆ’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು. ‘ಹೋರಾಟಗಳನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ಇಂಥವರಿಂದಲೇ ಯೋಜನೆ ವಿಳಂಬವಾಗುತ್ತಿದೆ. ಆರು ಮಂದಿ ಉಪವಾಸ ಆರಂಭಿಸಿದ್ದು ನಾವು ಸತ್ತು ಲಕ್ಷಾಂತರ ರೈತರ ಬದುಕು ಹಸನುಗೊಳಿಸಲು ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾತುಗಳು ಹುಸಿಗೊಳ್ಳುತ್ತಲೇ ಇವೆ. ಪ್ರಧಾನಮಂತ್ರಿ ಮುಖ್ಯಮಂತ್ರಿ ಇಬ್ಬರೂ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟದ ಕಿಚ್ಚು ಅವರನ್ನೂ ಸುಡಲಿದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.