ಚಿತ್ರದುರ್ಗ: ‘ರೈತರ ಆದಾಯ ವೃದ್ಧಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಅವಶ್ಯವಾಗಿದೆ. ಕೃಷಿಯಿಂದ ಸಂಸ್ಕೃತಿ, ತೋಟಗಾರಿಕೆಯಿಂದ ಸಂಸ್ಕಾರ ಹಾಗೂ ಪಶು ಸಂಗೋಪನೆಯಿಂದ ರೈತರಿಗೆ ಸಮ್ಮೋಹನ ಶಕ್ತಿ ಬರಲಿದೆ’ ಎಂದು ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಎ.ಬಿ. ಪಾಟೀಲ್ ತಿಳಿಸಿದರು.
ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಕೃಷಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ತ್ಯಾಜ್ಯದ ಮೌಲ್ಯವರ್ಧನೆ ಹಾಗೂ ರೈತ ಉತ್ಪಾದಕ ಕಂಪನಿಗಳಿಗೆ ಮಾರುಕಟ್ಟೆಯ ಸೌಲಭ್ಯ ಕಲ್ಪಿಸುವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
‘ರೈತರು ಪ್ರಾಥಮಿಕ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಾರೆ. ಆದರೆ, ಅಧಿಕ ಆದಾಯ ಗಳಿಸಬೇಕಾದರೆ ರೈತ–ರೈತೋದ್ಯಮಿ ಆಗಬೇಕಾದರೆ ರೈತರಿಗೆ, ರೈತ ಉತ್ಪಾದಕ ಸಂಸ್ಥೆಯು ಉತ್ತಮವಾಗಿ ಸೇವೆ ನೀಡಬೇಕು’ ಎಂದರು.
‘ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಇತರೆ ಉಪ ಕಸುಬುಗಳನ್ನು ಅಳವಡಿಸಿಕೊಂಡರೆ ಆದಾಯ ವೃದ್ಧಿಯಾಗಲಿದೆ. ಕೃಷಿ ಹಾಗೂ ಇತರೆ ಉಪಕಸುಬುಗಳಿಂದ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಕಸದಿಂದ ರಸ ಮಾಡುವ ಸಾಕಷ್ಟು ವಿಧಾನ–ತಂತ್ರಜ್ಞಾನಗಳಿದ್ದು ಕೃಷಿ ತ್ಯಾಜ್ಯದಿಂದ ಮೌಲ್ಯವರ್ಧಿತ ಪದಾರ್ಥ ಪಡೆಯ ಬಹುದಾಗಿದೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಪುಷ್ಪ ಕೃಷಿ ವ್ಯಾಪಕವಾಗಿದೆ. ಹೂ ಬೆಳೆಗಾರರಿಗೆ ಮಧ್ಯವರ್ತಿಗಳ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ದೇವಸ್ಥಾನಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸಬೇಕು. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ದೇವಸ್ಥಾನಗಳಿಗೆ ತಲುಪಿಸುವ ಕೆಲಸ ಮಾಡೋಣ. ಈ ನಿಟ್ಟಿನಲ್ಲಿ ಸಂಪರ್ಕ ಕಲ್ಪಿಸಲು ಸಮನ್ವಯ ಟ್ರಸ್ಟ್ ಸಹಕಾರ ಅಗತ್ಯವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ಹೇಳಿದರು.
ಸಮನ್ವಯ ಟ್ರಸ್ಟ್ ಸಂಸ್ಥಾಪಕಿ ಕೆ.ಎಚ್. ಸುಮಂಗಳಾ, ಪ್ರಾದೇಶಿಕ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಕಟ್ಟಾ ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಜಿ.ಟಿ. ವೀರಭದ್ರ ರೆಡ್ಡಿ, ಪಾಲಿಕ್ಲಿನಿಕ್ ಉಪನಿರ್ದೇಶಕ ತಿಪ್ಪೇಸ್ವಾಮಿ, ಕೋಳಿ ಸಾಕಣೆದಾರರು ಮತ್ತು ತಳಿಗಾರರ ಸಂಘದ ನಿರ್ವಹಣಾ ಸಮಿತಿ ಸದಸ್ಯ ಎಸ್.ಜಿ. ವೀರಣ್ಣ ಇದ್ದರು.
ವಿಜ್ಞಾನ ಮತ್ತು ವಾಣಿಜ್ಯ ಸೇರಿದಾಗ ಮಾತ್ರ ರೈತರ ಆದಾಯ ಹೆಚ್ಚಾಗಲಿದೆ. ಇದರ ಜೊತೆಗೆ ಮಾರುಕಟ್ಟೆ ಹಾಗೂ ಹೆಚ್ಚಿನ ಬೆಲೆ ಸಿಗುವುದು ಸಹ ಬಹಳ ಮುಖ್ಯ.ಎ.ಬಿ.ಪಾಟೀಲ್ ಅಧ್ಯಕ್ಷ ಕೃಷಿ ತಂತ್ರಜ್ಞರ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.