ADVERTISEMENT

ಕೋಟೆನಗರಿಯಲ್ಲಿ ಪ್ರತಿಧ್ವನಿಸಿದ ಅನ್ನದಾತನ ಹೋರಾಟ

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ರೈತರು ಹೋರಾಟದಲ್ಲಿ ಭಾಗಿ, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 8:38 IST
Last Updated 14 ಫೆಬ್ರುವರಿ 2026, 8:38 IST
ಭದ್ರಾ ಮೇಲ್ದಂಡೆ ಯೋಜನೆ ಜಾರಿ ಒತ್ತಾಯಿಸಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ರೈತರು ಹರಿಸು ಶಾಲು ಬೀಸಿದರು
ಭದ್ರಾ ಮೇಲ್ದಂಡೆ ಯೋಜನೆ ಜಾರಿ ಒತ್ತಾಯಿಸಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ರೈತರು ಹರಿಸು ಶಾಲು ಬೀಸಿದರು   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು, ಜನಪ್ರತಿನಿಧಿಗಳು ಕೊಟ್ಟ ಮಾತು ಉಳಿಸಿಕೊಳ್ಳಬೇಕು, ಶೀಘ್ರ ಅನುದಾನ ಬಿಡುಗಡೆ ಮಾಡಬೇಕು, ಬಯಲುಸೀಮೆ ಜನರ ನೀರಾವರಿ ಕನಸನ್ನು ಸಾಕಾರಗೊಳಿಸಬೇಕು’ ಎಂಬ ರೈತರ ಧ್ವನಿ ಶುಕ್ರವಾರ ಕೋಟೆನಗರಿಯಲ್ಲಿ ಪ್ರತಿಧ್ವನಿಸಿತು. 

ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ನೀಡಿದ್ದ ಪ್ರತಿಭಟನೆ ಕರೆಗೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ರೈತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.

ನಗರದ ವಿವಿಧೆಡೆ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒನಕೆ ಓಬವ್ವ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹಸಿರು ಶಾಲು ಬೀಸಿ ‘ಭದ್ರಾ ಯೋಜನೆ ಜಾರಿಯಾಗಲೇಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು. 

ADVERTISEMENT

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟ ಮಾತು ತಪ್ಪಿದ್ದಾರೆ. ಚಿತ್ರದುರ್ಗ ನೆಲದಲ್ಲೇ ₹ 5,300 ಕೋಟಿ ನೀಡುವುದಾಗಿ ಮಾತು ಕೊಟ್ಟು ಹೋಗಿದ್ದರು. ಆದರೆ, ಲೋಕಸಭಾ ಚುನಾವಣೆ ಮುಗಿದ ನಂತರ ಅವರು ತಮ್ಮ ಮಾತು ಮರೆತಿದ್ದಾರೆ. ರಾಜ್ಯ ಸರ್ಕಾರ ಕೂಡ ಯೋಜನೆ ಜಾರಿಗೆ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಸದಾ ಕೇಂದ್ರದ ಮೇಲೆ ಕೈತೋರಿಸುತ್ತಾ ರಾಜಕೀಯ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಯೋಜನೆ ಅನುಷ್ಠಾನ ವಿಷಯದಲ್ಲಿ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೊಳಲ್ಕೆರೆ ತಾಲೂಕಿನ ಪ್ರತಿ ರೈತರ ಜಮೀನಿನಲ್ಲೂ ಹನಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಹೊಸದುರ್ಗ ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಬಿಟ್ಟು ಹೋದ ಕೆರೆಗಳನ್ನು ಸೇರಿಸಿಕೊಳ್ಳಬೇಕು. ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.  

‘ಕಲ್ಪಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ತುರ್ತಾಗಿ ಆರಂಭಿಸಬೇಕು. ಧರ್ಮಪುರ, ಐಮಂಗಲ ಹಾಗೂ ಕಸಬಾ ಹೋಬಳಿಯ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ ‘18 ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಪಕ್ಷಗಳು ನೀಡಿದ್ದ ಭರವಸೆಗಳು ಈಡೇರಿಲ್ಲ. ದೇಶದ ಪ್ರಧಾನ ಮಂತ್ರಿ ಘೋಷಿಸಿದ್ದ ಅನುದಾನದಲ್ಲಿ ಯೋಜನೆಗೆ ಒಂದು ರೂಪಾಯಿಯೂ ಬಂದಿಲ್ಲ. 3 ತಿಂಗಳೊಳಗೆ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿ ಹೋದ ಅವರು ಮತ್ತೆ ನಮ್ಮ ಕಡೆ ತಿರುಗಿಯೂ ನೋಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ ‘ರಾಜ್ಯ ಸರ್ಕಾರದಿಂದ ಅನುದಾನ ತರುವಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ₹ 1,450 ಕೋಟಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ, ಗುತ್ತಿಗೆದಾರರಿಗೆ ₹ 1,850 ಕೋಟಿ ಬಾಕಿ ಇದೆ. ತಪ್ಪು ಮಾಹಿತಿ ನೀಡುವುದನ್ನು ಬಿಡಬೇಕು. ಯೋಜನೆಯನ್ನು ಜಾರಿಗೊಳಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ತೆರಳಬೇಕು’ ಎಂದು ಕಿಡಿಕಾರಿದರು. 

ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ ‘ಕೇಂದ್ರ, ರಾಜ್ಯ ಸರ್ಕಾರಗಳು ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಒಬ್ಬರ ಮೇಲೊಬ್ಬರು ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಚುನಾವಣೆ, ಜಾತಿ, ಧರ್ಮಗಳೇ ಸರ್ಕಾರಗಳ, ರಾಜಕೀಯ ಪಕ್ಷಗಳ ಆದ್ಯತೆಯಾಗಿವೆ. ನೀರಾವರಿ ಕುರಿತು ತುಟಿ ಬಿಚ್ಚದಿರುವುದು ಖಂಡನೀಯ’ ಎಂದರು. 

ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರಪ್ಪ ತಾಳಿಕಟ್ಟೆ, ರವಿಕುಮಾರ್, ಪರಮೇಶ್ವರಪ್ಪ, ಕುಮಾರ್ ಸಮತಳ, ಡಿ.ಸಿ. ನಾಗರಾಜ್, ರೆಡ್ಡಿಹಳ್ಳಿ ವೀರಣ್ಣ, ಬಿ.ಎಸ್. ರಂಗಸ್ವಾಮಿ, ಸಿ.ಆರ್. ಜಯಪ್ಪ, ಚನ್ನಕೇಶವಮೂರ್ತಿ ಇತರರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಮನವಿ ಸ್ವೀಕರಿಸಿ ಮಾತನಾಡಿದರು

‘ದೆಹಲಿಯಲ್ಲಿ ಹೋರಾಟಕ್ಕೂ ಸಿದ್ಧ’

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಹಣ ಬಿಡುಗಡೆ ಮಾಡಿ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಜೈಲ್ ಭರೋ ಚಳವಳಿ ಮೂಲಕ ವಿಧಾನಸಭೆ ಮುತ್ತಿಗೆ ಮುತ್ತಿಗೆ ಹಾಕಲಾಗುವುದು. ಅಷ್ಟೇ ಅಲ್ಲ ದೆಹಲಿಯ ಜಂತರ್ ಮಂತರ್ ಬಳಿ ಹೋರಾಟ ನಡೆಸಲಾಗುವುದು. ಮಾ. 6ರೊಳಗೆ ರೈತ ಮುಖಂಡರ ಸಭೆ ಕರೆದು ಕಾಮಗಾರಿ ಪೂರ್ಣಗೊಳಿಸಲು ದಿನಾಂಕ ನಿಗದಿಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು. ನೀರಾವರಿ ಸಚಿವರು ಖುದ್ದಾಗಿ ಬಂದು ಮನವಿ ಸ್ವೀಕರಿಸುವಂತೆ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ ಸಚಿವರು ಬಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಸಚಿವರು ಶಾಸಕರ ಮನೆಗಳಿಗೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾವೇ ಪೂರ್ಣಗೊಳಿಸುತ್ತೇವೆ: ಸಚಿವ

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ‘ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳಿಸಲಾಗುವುದು. 2013ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಯೋಜನೆಗೆ ವೇಗ ಪಡೆದಿದೆ. ನಾವೇ ಯೋಜನೆಗೆ ಹೆಚ್ಚು ಕೊಡುಗೆ ನೀಡಿದ್ದೇವೆ’ ಎಂದರು.

‘2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ₹500 ಕೋಟಿ ಬಿಡುಗಡೆಗೊಳಿದ್ದರು. ಇಲ್ಲಿಯವರೆಗೆ ₹ 12000 ಕೋಟಿ ಖರ್ಚು ಮಾಡಲಾಗಿದೆ. ಇನ್ನೂ ₹ 10000 ಕೋಟಿ ಅನುದಾನದ ಅಗತ್ಯವಿದೆ. ಕೇಂದ್ರ ಘೋಷಿಸಿದ ಅನುದಾನ ಬಿಡುಗಡೆಗೆ ಪಕ್ಷಾತೀತವಾಗಿ ಮನವಿ ಮಾಡಲಾಗಿದೆ. ಸಂಸದರು ಈ ಕುರಿತು ಗಮನಹರಿಸಬೇಕು’ ಎಂದರು.   ಶಾಸಕ ಟಿ.ರಘುಮೂರ್ತಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.