ಮೊಳಕಾಲ್ಮುರು: ಕೊಳವೆಬಾವಿ ಕೊರೆಯುವ ದರ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ರೈತರು ಜಮೀನುಗಳನ್ನು ಕೊಳವೆಬಾವಿಗಳನ್ನು ಕೊರೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾಲ್ಲೂಕು ಆಡಳಿತ ಗಮನ ಹರಿಸಿ ರೈತಸ್ನೇಹಿ ದರ ನಿಗದಿ ಮಾಡುವ ಮೂಲಕ ನೆರವಿಗೆ ಬರಬೇಕು ಎಂದು ರೈತಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಮನವಿ ಮಾಡಿದರು.
ಈಚೆಗೆ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ಕೊಳವೆಬಾವಿ ಕೊರೆಸುವ ದರ ನಿಗದಿ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ಉದ್ದೇಶಕ್ಕೆ ಕೊಳವೆಬಾವಿ ಕೊರೆಸುವ ದರಕ್ಕೂ ಕೃಷಿ ಉದ್ದೇಶಕ್ಕೆ ಕೊರೆಸುವ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮಳೆ ಕೈಕೊಟ್ಟು ಅಂತರ್ಜಲ ಕುಸಿದಿರುವ ಪರಿಣಾಮ ಕೊಳವೆಬಾವಿಗಳನ್ನು ಕೊರೆಸುವ ಅನಿವಾರ್ಯ ಎದುರಾಗಿದೆ. ಈ ಪರಿಸ್ಥಿತಿಯನ್ನು ಬೋರ್‌ವೆಲ್ ಮಾಲೀಕರು ದುರುಪಯೋಗ ಮಾಡಿಕೊಂಡು ಹೆಚ್ಚಿನ ದರ ವಿಧಿಸುತ್ತಿದ್ದಾರೆ. ಇಂತಿಷ್ಟು ಅಡಿಗೆ ಇಷ್ಟು ದರ ಎಂದು ನಿಗದಿಪಡಿಸಿ ಶೋಷಿಸುತ್ತಿದ್ದಾರೆ ಎಂದು ದೂರಿದರು.
ಏಕಾಏಕಿ ದರ ಹೆಚ್ಚಳ ಮಾಡಿರುವ ಕಾರಣ ನೀರಿನ ಕೊರತೆ ಎದುರಿಸುತ್ತಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣ ದರ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಮಂಜುನಾಥ್ ಹೇಳಿದರು.
'ಕುಡಿಯುವ ನೀರು ಹಾಗೂ ಕೃಷಿಗೆ ಕೊಳವೆಬಾವಿ ಕೊರೆಸುವ ದರ ಸಮಸ್ಯೆಯನ್ನು ಶೀಘ್ರವೇ ಬೋರ್‌ವೆಲ್ ಮಾಲೀಕರು, ರೈತರ ಸಭೆ ಕರೆದು ನಿಗದಿ ಮಾಡಲಾಗುವುದು’ ಎಂದು ತಹಶೀಲ್ದಾರ್ ಶಂಕರಪ್ಪ ಭರವಸೆ ನೀಡಿದರು. ಕೃಷಿ ಇಲಾಖೆಯ ಗಿರೀಶ್, ಸಿಕಂಧರ್ ಭಾಷಾ, ಪಶು ಇಲಾಖೆಯ ಡಾ. ರಂಗಪ್ಪ, ಶೀರಸ್ತೇದಾರ್ ಗೋಪಾಲ್, ರೈತಸಂಘದ ನಿಂಗಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.