ADVERTISEMENT

ಚಿತ್ರದುರ್ಗ: ಬೇಸಿಗೆ ಆರಂಭದಲ್ಲೇ ಅಗ್ನಿಶಾಮಕ ಠಾಣೆಗೆ ‘ವಾಹನಾಘಾತ’

ತ್ವರಿತ ಕಾರ್ಯಾಚರಣೆಗೆ ಎದುರಾದ ಸಮಸ್ಯೆ ; ಮಾರ್ಚ್‌ 3ರಿಂದ ಪರಿಸ್ಥಿತಿ ಗಂಭೀರ

ಕೆ.ಪಿ.ಓಂಕಾರಮೂರ್ತಿ
Published 24 ಫೆಬ್ರುವರಿ 2025, 8:15 IST
Last Updated 24 ಫೆಬ್ರುವರಿ 2025, 8:15 IST
ಚಿತ್ರದುರ್ಗ ನಗರದ ಅಗ್ನಿಶಾಮಕ ಠಾಣೆ ಅವರಣದಲ್ಲಿ ನಿಂತಿರುವ ಜಲ ವಾಹನಗಳು
ಚಿತ್ರದುರ್ಗ ನಗರದ ಅಗ್ನಿಶಾಮಕ ಠಾಣೆ ಅವರಣದಲ್ಲಿ ನಿಂತಿರುವ ಜಲ ವಾಹನಗಳು   

ಚಿತ್ರದುರ್ಗ: ‘15 ವರ್ಷ ಮೀರಿದ ವಾಹನ ಬಳಸುವಂತಿಲ್ಲ’ ಎಂಬ ಕೇಂದ್ರ ಸರ್ಕಾರದ ನಿಯಮದಿಂದ ಬೇಸಿಗೆ ಆರಂಭದಲ್ಲೇ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ‘ವಾಹನಾಘಾತ’ವಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಎರಡು, ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ವಾಹನಗಳು ಸದ್ಯ ಲಭ್ಯವಿವೆ. ಆದರೆ, ಮಾರ್ಚ್‌ 3ರಂದು ಚಿತ್ರದುರ್ಗ, ಹಿರಿಯೂರಿನಲ್ಲಿ ಒಂದೊಂದು ವಾಹನ ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ. ಇದರಿಂದ ಹಿರಿಯೂರಿನಲ್ಲಿ ವಾಹನ ಸಂಖ್ಯೆ ಶೂನ್ಯವಾಗಲಿದೆ.

ಕೇಂದ್ರದ ನಿಯಮವು ಕಳೆದ ವರ್ಷವೇ ಜಾರಿಗೆ ಬಂದಿದ್ದರೂ ಅದರ ಪರಿಣಾಮ ಈ ಬಾರಿ ಹೆಚ್ಚಾಗಿದೆ. ಜಿಲ್ಲಾ ಕೇಂದ್ರದಲ್ಲೇ ಮಾರ್ಚ್‌ 3ರಂದು ಒಂದು ವಾಹನ ಸ್ಥಗಿತಗೊಳ್ಳುವುದರಿಂದ 16,000 ಲೀಟರ್‌ ಸಾಮರ್ಥ್ಯದ ವಾಹನ ಮಾತ್ರ ಕಾರ್ಯಾಚರಣೆ ನಡೆಸಲಿದೆ.

ADVERTISEMENT

ಬೇಸಿಗೆ ಆರಂಭದಲ್ಲೇ ಜಿಲ್ಲೆಯಾದ್ಯಂತ ಬೆಂಕಿ ಅವಘಡದ ಸಂಖ್ಯೆ 474 ತಲುಪಿದೆ. ಆದರೆ, ತ್ವರಿತ ಕಾರ್ಯಾಚರಣೆಗೆ ಜಲ ವಾಹನದ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ.

ಕಳೆದ ವರ್ಷದವರೆಗೂ ಜಿಲ್ಲಾ ಕೇಂದ್ರದ ಅಗ್ನಿಶಾಮಕ ಠಾಣೆಯಲ್ಲಿ ಐದು ವಾಹನಗಳಿದ್ದವು. ಆದರೆ, ಹಂತಹಂತವಾಗಿ ವಾಹನಗಳ ಸಂಖ್ಯೆ ಕಡಿಮೆಯಾಗಿ, ಇದೀಗ 4,500 ಲೀಟರ್‌ ಹಾಗೂ 16,000 ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಜಲವಾಹನ ಲಭ್ಯ ಇವೆ. ಆದರೆ, ಕೆಲವೇ ದಿನಗಳಲ್ಲಿ ಸರಣಿಯಂತೆ ವಾಹನಗಳು ಸ್ಥಗಿತಗೊಳ್ಳಲಿದ್ದು, ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

ಈ ಬಾರಿ ಅವಧಿಗೂ ಮುನ್ನವೇ ಬಿಸಿಲು ಹೆಚ್ಚಾಗಿರುವುದರಿಂದ ಬಣವೆ, ತೋಟಗಳಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿದೆ. ಗಾಳಿಯ ವೇಗ ಹೆಚ್ಚಿರುವ ಕಾರಣ ನೆಲಕ್ಕೆ ಬೀಳುವ ಒಂದು ಸಣ್ಣ ಕಿಡಿಯಿಂದಲೂ ಅಗ್ನಿ ಅವಘಡಗಳ ಪ್ರಮಾಣ ಹೆಚ್ಚಾಗುತ್ತಿದೆ.

ತಾಲ್ಲೂಕಿನ ಬೆಳಘಟ್ಟ, ಹಾಯ್ಕಲ್‌, ತಮಟಕಲ್ಲು, ಲಿಂಗದಹಳ್ಳಿ, ಗೋನೂರು, ಗುಡ್ಡದ ರಂಗವ್ವನಹಳ್ಳಿ, ಐಮಂಗಲ, ಕ್ಯಾದಿಗೆರೆ, ಬುರುಜನರೊಪ್ಪ, ಮರಡಿಹಳ್ಳಿ, ಹಿರೇಗುಂನೂರು, ಭೀಮಸಮುದ್ರ, ಭರಮಸಾಗರ ಭಾಗದಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತ್ತಿವೆ. ಉಳಿದಂತೆ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಭಾಗದಲ್ಲಿ ತೋಟಗಳು ಹೆಚ್ಚಾಗಿರುವ ಕಾರಣ ನಿತ್ಯ ಪ್ರಕರಣಗಳು ದಾಖಲಾಗುತ್ತಿವೆ ಎನ್ನುತ್ತಾರೆ ಠಾಣೆ ಸಿಬ್ಬಂದಿ.

ಜಿಲ್ಲೆಯಲ್ಲಿ ಬಹುತೇಕ ಕಡೆ ಕೆರೆಗಳು ತುಂಬಿರುವ ಕಾರಣ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಲಭ್ಯವಿರುವ ಒಂದೊಂದು ವಾಹನದಲ್ಲೇ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಈವರೆಗೂ ಪರಿಸ್ಥಿತಿ ಕೈಮೀರುವ ಹಂತದ ಘಟನೆ ನಡೆದಿಲ್ಲ ಎಂಬುದೇ ಸಮಾಧಾನ.

‘ನಗರ, ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಜಾಗೃತಿಯಿಂದ ಬೆಂಕಿ ನಂದಿಸುವ ಬಗ್ಗೆ ಪ್ರಾಯೋಗಿಕವಾಗಿ ಯುವಕರಿಗೆ ತಿಳಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್‌ ವಿ.ಅಗಡಿ.

ನಾಯಕನಹಟ್ಟಿಯ ಕಾವಲುಬಸವೇಶ್ವರ ನಗರ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಕಾಯ್ದಿರಿಸಿರುವ ಜಾಗ
ಜಿಲ್ಲೆಯಲ್ಲಿ ಜಲ ವಾಹನದ ಕೊರತೆ ನಡುವೆಯೂ ಅವಘಡ ತಪ್ಪಿಸಲು ನಮ್ಮ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಗತ್ಯ ವಾಹನದ ಸೌಲಭ್ಯ ಕಲ್ಪಿಸಬೇಕಿದೆ. ಹಿರಿಯೂರಿಗೆ ಸದ್ಯ ದಾವಣಗೆರೆಯಿಂದ ಎರವಲು ಸೇವೆ ಕೇಳಿದ್ದೇವೆ
ಸೋಮಶೇಖರ್‌ ವಿ.ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಜಿಲ್ಲೆಯ ಗಡಿಭಾಗದಲ್ಲಿರುವ ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಬೇಕೆಂಬ ಉದ್ದೇಶದಿಂದ ಸ್ಥಳ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ. ಸರ್ಕಾರದಿಂದ ಅನುದಾನ ಮಂಜೂರಾದ ಕೂಡಲೇ ಠಾಣೆ ನಿರ್ಮಾಣವಾಗಲಿದೆ
ಪಿ.ಎಸ್‌. ಜಯರಾಮಯ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗ
ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಮೂಲಕ ಆಗುತ್ತಿರುವ ನಷ್ಟ ತಪ್ಪಿಸಬೇಕು. ಹಿರಿಯೂರಿನಿಂದ ವಾಹನ ಬರಲು ವಿಳಂಬವಾಗಿ ಬೆಂಕಿ ಅವಘಡಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ
ಜ.ರಾಮಚಂದ್ರ ಅರಳೀಕೆರೆ
ಶ್ರೀರಾಂಪುರ ಹೋಬಳಿಗೂ ಒಂದು ಅಗ್ನಿಶಾಮಕ ವಾಹನ ತುರ್ತಾಗಿ ಬೇಕಿದೆ. ಬೇಸಿಗೆಯಲ್ಲಿ ಹೆಚ್ಚುವರಿ ವಾಹನಗಳ ಅವಶ್ಯಕತೆಯಿದೆ. ಅವಘಡ ನಡೆದಿರುವ ಸ್ಥಳಕ್ಕೆ ವಾಹನ ಬರುವಷ್ಟರಲ್ಲಿ ಅಪಾರ ನಷ್ಟವಾಗಿರುತ್ತದೆ
ಪಿ.ಶಶಿಕುಮಾರ್‌ ಶಿವನೇಕಟ್ಟೆ

ಅಗ್ನಿಶಾಮಕ ಠಾಣೆ ಮರೀಚಿಕೆ ವಿ.ವೀರಣ್ಣ

ಧರ್ಮಪುರ: ಒಂದೆಡೆ ಬಿಸಿಲಿನ ತಾಪ ಬೋರ್‌ವೆಲ್‌ಗಳಲ್ಲಿ ನೀರು ನಿಂತು ಒಣಗಿದ ಅಡಕೆ ಪಪ್ಪಾಯಿ ದಾಳಿಂಬೆ ಮತ್ತು ತೋಟಗಾರಿಕಾ ಬೆಳೆಗಳು. ಈ ಮಧ್ಯೆ ಸರಣಿಯಂತೆ ಸಂಭವಿಸುತ್ತಿರುವ ಅಗ್ನಿ ಅವಘಡಗಳಿಂದ ರೈತರು ಹೈರಾಣಾಗಿದ್ದಾರೆ. ಹಿರಿಯೂರಿನ ದೊಡ್ಡ ಹೋಬಳಿಯಾಗಿರುವ ಧರ್ಮಪುರ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ.ದೂರವಿದೆ. ಗಡಿ ಗ್ರಾಮಗಳಾದ ಮದ್ದಿಹಳ್ಳಿ ಹಲಗಲದ್ದಿ ಹೊಸಕೆರೆ ಬೇತೂರು ಪಾಳ್ಯ ಕಣಜನಹಳ್ಳಿ ಸಕ್ಕರ ಕೋಡಿಹಳ್ಳಿ ಅರಳೀಕೆರೆ ಬೆಟ್ಟಗೊಂಡನಹಳ್ಳಿ ಗ್ರಾಮಗಳು ಇನ್ನೂ ದೂರ. ಹೋಬಳಿಯಲ್ಲಿ ಬೆಂಕಿ ಅವಘಡಗಳು ನಡೆದಾಗ ದೂರದ ಹಿರಿಯೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಇಲ್ಲಿಗೆ ಬರಲು ಕನಿಷ್ಠ  ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ. ಇದರಿಂದ ಹೆಚ್ಚಿನ ಹಾನಿ ಸಂಭವಿಸುವುದು ಸಾಮಾನ್ಯವಾಗಿದೆ. ಹಿರಿಯೂರು ಅಗ್ನಿಶಾಮಕ ಠಾಣೆಯಲ್ಲಿ ಎರಡು ಬೆಂಕಿ ನಂದಿಸುವ ಜಲ ವಾಹನಗಳಿವೆ. ಅದರಲ್ಲಿ ಒಂದು 15 ವರ್ಷ ಕಾರಣಕ್ಕೆ ರಸ್ತೆಗಳಿಯುವಂತಿಲ್ಲ. ಇನ್ನೊಂದು ವಾಹನ ದಿನ ಎಣಿಸುತ್ತಿದೆ. ‘ಕಳೆದ ವರ್ಷ ತಾಲ್ಲೂಕಿನಲ್ಲಿ 394 ಅಗ್ನಿ ಅವಘಡ ಸಂಭವಿಸಿದ್ದು ಅಂದಾಜು ₹ 2ಕೋಟಿಯಷ್ಟು ನಷ್ಟವಾಗಿದೆ. ಜನವರಿ ಆರಂಭದಿಂದ ಈವರೆಗೆ 120 ಬೆಂಕಿ ಅವಘಡಗಳು ನಡೆದಿವೆ. ಕೇಂದ್ರ ಸರ್ಕಾರದ ನಿಯಮದಂತೆ ವಾಹನಕ್ಕೆ 15ವರ್ಷ ಕಾಲಮಿತಿ ಇದೆ. ಒಂದು ವಾಹನಕ್ಕೆ ಈಗಾಗಲೇ 15 ವರ್ಷ ಕಾಲಮಿತಿ ಮುಗಿದಿದೆ. ಇನ್ನೊಂದು ವಾಹನ ಮಾರ್ಚ್ 3ಕ್ಕೆ ತನ್ನ ಸೇವೆ ನಿಲ್ಲಿಸಲಿದೆ. ಇದರಿಂದ ನಮಗೆ ತುಂಬಾ ತೊಂದರೆಯಾಗಲಿದೆ’ ಎನ್ನುತ್ತಾರೆ ಹಿರಿಯೂರು ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಗರೀಬ್‌ ಷಾ ವಲಿ. ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಬೇಕು ಎಂಬ ಒತ್ತಡಕ್ಕೆ ಮಣಿದ ಅಧಿಕಾರಿಗಳ ತಂಡ 2021-22ರಲ್ಲಿ ಕೃಷ್ಣಾಪುರದಲ್ಲಿ ಮೂರು ಎಕರೆ ಜಾಗ ಗುರುತಿಸಿ ಮೌಖಿಕ ಒಪ್ಪಿಗೆ ಸೂಚಿಸಿತ್ತು. ಆದರೆ ಅದು ಮರೀಚಿಕೆಯಾಗಿಯೇ ಉಳಿಯಿತು. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಬದ್ಧರಾಗಬೇಕೆಂದು ಹೋಬಳಿಯ ಜನರ ಒತ್ತಾಯ.

ರೈತರಿಗೆ ಶುರುವಾಗಿದೆ ಬೆಂಕಿ ಅವಘಡದ ಚಿಂತೆ ವಿ.ಧನಂಜಯ

ನಾಯಕನಹಟ್ಟಿ: ವರ್ಷದ ಪ್ರಾರಂಭದಲ್ಲೇ ಹೋಬಳಿಯ ರೈತರಿಗೆ ಅಗ್ನಿ ಅವಘಡದ ಚಿಂತೆ ಶುರುವಾಗಿದೆ. ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣದ ಕೂಗು ಜನಪ್ರತಿನಿಧಿಗಳಿಗೆ ಕೇಳದಿರುವುದೇ ಇದಕ್ಕೆ ಕಾರಣ. ಹೋಬಳಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಅಗ್ನಿ ಅವಘಡಗಳು ಸಂಭವಿಸಿದರೆ ಚಳ್ಳಕೆರೆ ಅಥವಾ ಚಿತ್ರದುರ್ಗದಿಂದ ಅಗ್ನಿಶಾಮಕ ವಾಹನ ಬರಬೇಕಿದೆ. ಅವು ಬರುವಷ್ಟರಲ್ಲೇ ಎಲ್ಲವೂ ಸುಟ್ಟು ಭಸ್ಮವಾಗಿರುತ್ತದೆ. ಈ ಭಾಗದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವಂತೆ ಹಲವು ವರ್ಷದಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಜನರು ಹೈರಾಣಾಗಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಸುಮಾರು 230ರಿಂದ 250 ಹಳ್ಳಿಗಳಲ್ಲಿ ಎಲ್ಲಿಯೇ ಅಗ್ನಿ ಅವಘಡಗಳು ಸಂಭವಿಸಿದರೂ ಇರುವುದೊಂದೇ ಚಳ್ಳಕೆರೆ ಅಗ್ನಿಶಾಮಕ ಠಾಣೆ. ದೂರವಾಣಿ ಕರೆ ಬಂದರೆ ಅವರು ಅಗ್ನಿ ಅವಘಡ ಸ್ಥಳಕ್ಕೆ ತೆರಳಲು ಸಾಕಷ್ಟು ಸಮಯ ಬೇಕಾಗುತ್ತದೆ. ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳು ಒಣಹವೆ ಮತ್ತು ಅತಿಹೆಚ್ಚು ಬಿಸಿಲನ್ನು ಹೊಂದಿರುವ ಪ್ರದೇಶಗಳಾಗಿವೆ. ಇಲ್ಲಿ ವರ್ಷದಿಂದ ವರ್ಷಕ್ಕೆ ಆಕಸ್ಮಿಕ ಅಗ್ನಿ ಅವಘಡದ ಸಂಖ್ಯೆ ಹೆಚ್ಚಾಗುತ್ತಿದೆ. ಜಾನುವಾರುಗಳಿಗೆ ಸಂಗ್ರಹಿಸಿದ ಹುಲ್ಲಿನ ಬಣವೆಗಳು ಗುಡಿಸಲು ಮನೆ ಕಳೆದುಕೊಳ್ಳುವವರ ಸಂಖ್ಯೆ ವರ್ಷದಿಂದ ಹೆಚ್ಚಾಗುತ್ತಿದೆ. ನಾಯಕನಹಟ್ಟಿಯ ಕಾವಲು ಬಸವೇಶ್ವರ ನಗರದ ಬಳಿ 5 ಎಕರೆ ಜಾಗವನ್ನು ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಗುರುತಿಸಿ ವರ್ಷಗಳೇ ಉರುಳಿವೆ. ಆದರೆ ಠಾಣೆ ನಿರ್ಮಾಣಕ್ಕೆ ಅನುದಾನ ಮತ್ತು ತಾಂತ್ರಿಕ ಅನುಮೋದನೆ ಮಾತ್ರ ದೂರದ ಮಾತಾಗಿದೆ. ಹೋಬಳಿಯ ರೈತರು ಪ್ರಗತಿಪರರು ಹೋರಾಟಗಾರರು ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದು ಸಾಮಾನ್ಯವಾಗಿದೆ.

ತಾಲ್ಲೂಕಿಗೆ ಇರುವುದು ಒಂದೇ ವಾಹನ ಎಚ್‌.ಡಿ.ಸಂತೋಷ್‌

ಹೊಸದುರ್ಗ: ತಾಲ್ಲೂಕು ವ್ಯಾಪ್ತಿಯಲ್ಲಿ ತೋಟ ಕೃಷಿ ಅವಲಂಬಿತ ಚಟುವಟಿಕೆಗಳು ಹೆಚ್ಚಾಗಿವೆ. ಬೇಸಿಗೆಯಲ್ಲಿ ಸಂಭವಿಸುವ ಬೆಂಕಿ ಅವಘಡ ನಿಯಂತ್ರಿಸಲು ಅಗ್ನಿಶಾಮಕ ಠಾಣೆಯಲ್ಲಿ ಕೇವಲ ಒಂದೇ ವಾಹನ ಇದೆ. 2001ರಲ್ಲಿ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಠಾಣೆ ಪ್ರಾರಂಭವಾಗಿದೆ. 20 ಸಿಬ್ಬಂದಿಗಳಿದ್ದು ನೀರಿನ ಸೌಲಭ್ಯವೂ ಇದೆ. ಆದರೆ ಬೆಂಕಿ ನಂದಿಸಲು ಒಂದೇ ವಾಹನ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಈ ಹಿಂದೆ ಠಾಣೆಯಲ್ಲಿ 2 ವಾಹನಗಳಿದ್ದವು. ಒಂದು ವಾಹನಕ್ಕೆ ವಯಸ್ಸಾಗಿದೆ. ಇದೀಗ ತಾಲ್ಲೂಕಿನಾದ್ಯಂತ ಒಂದೇ ವಾಹನ ಸಂಚರಿಸುತ್ತಿದೆ. ‘ಶ್ರೀರಾಂಪುರ ಭಾಗದಲ್ಲಿ ಬೆಂಕಿ ಅವಘಡ ಆದರೆ ನಾವು ಅಲ್ಲಿಗೆ ಹೋಗಲು 30 ನಿಮಿಷ ಬೇಕು. ನಾವು ಹೋಗುವಷ್ಟರಲ್ಲಿ ಬೆಂಕಿ ಹೆಚ್ಚಾಗಿರುತ್ತದೆ. ಒಂದು ದಿನಕ್ಕೆ 7ರಿಂದ 8 ಅವಘಡ ನಡೆಯುತ್ತಿರುತ್ತವೆ. ಆದರೆ 4ರಿಂದ 5 ಸ್ಥಳಗಳಿಗೆ ಮಾತ್ರ ತಲುಪಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಬಿ.ವೈ.ಗುಡಗನಟ್ಟಿ.

ಬೆಂಕಿ ಅವಘಡಗಳು
(ಜ.1 ರಿಂದ ಫೆ.21 ) ತಾಲ್ಲೂಕು; ಪ್ರಕರಣ ಚಿತ್ರದುರ್ಗ; 110 ಚಳ್ಳಕೆರೆ; 62 ಹಿರಿಯೂರು; 118 ಹೊಸದುರ್ಗ; 85 ಹೊಳಲ್ಕೆರೆ; 63 ಮೊಳಕಾಲ್ಮುರು; 36 ಒಟ್ಟು; 474 (ಮಾಹಿತಿ–ಜಿಲ್ಲಾ ಅಗ್ನಿಶಾಮಕ ಠಾಣೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.