
ಹೊಸದುರ್ಗದ ಹುಣಸೇಕಟ್ಟೆಯಿಂದ ಇಂಡೇದೇವರಹಟ್ಟಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ
ಹೊಸದುರ್ಗ: ವಿ.ವಿ. ಸಾಗರದ ಹಿನ್ನೀರಿನಿಂದಾಗಿ ಲಕ್ಕಿಹಳ್ಳಿ, ಅತ್ತಿಮಗ್ಗೆ, ಮಾಡದಕೆರೆ, ಕಾರೇಹಳ್ಳಿ, ಗುಡ್ಡದನೇರಲಕೆರೆ, ಹುಣವಿನಡು ಹಾಗೂ ಮತ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ರಸ್ತೆ ಹಾಗೂ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದ್ದು, ಸ್ಥಳೀಯರ ಪರದಾಟ ಹೇಳತೀರದು.
ಅತ್ತಿಮಗ್ಗೆ ಗ್ರಾಮದಲ್ಲಿ ನೀರು ನುಗ್ಗಿದ್ದು, ಗ್ರಾಮದೊಳಗೆ ಓಡಾಡಲೂ ತೊಂದರೆಯಾಗಿದೆ. ಕಾರೇಹಳ್ಳಿ ಹಾಗೂ ಲಿಂಗದಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ನೀರು ನಿಂತಿದ್ದು, ಭಾರಿ ವಾಹನಗಳ ಸಂಚಾರ ತಡೆಯಲಾಗಿದೆ. ಅಂಚಿಬಾರಿಹಟ್ಟಿಯ ಸಮೀಪ ಜನರು ತಮ್ಮ ಜಮೀನುಗಳಿಗೆ ತೆರಳುವ ರಸ್ತೆ ಜಲಾವೃತವಾಗಿದ್ದು, ಜಮೀನುಗಳ ಕಡೆ ಹೋಗಲು ಹಿಂದೇಟು ಹಾಕುವಂತಾಗಿದೆ.
ಇನ್ನು ಹುಣಸೇಕಟ್ಟೆ ಹಾಗೂ ಇಂಡಿದೇವರಹಟ್ಟಿ ಗ್ರಾಮದ ರಸ್ತೆಯಲ್ಲಿ ಹಿನ್ನೀರು ಆವರಿಸಿದ್ದು, ಕೆರೆಯಂತಾಗಿದೆ. ನಾಗತಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಹಿನ್ನೀರಿನಿಂದ ಮುಚ್ಚಿದಂತಾಗಿದೆ. ಬಸ್‌ಗಳನ್ನು ನಾಗತಿಹಳ್ಳಿಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇಂಡಿದೇವರಹಟ್ಟಿ ಹಾಗೂ ಹುಣಸೇಕಟ್ಟೆ ಗ್ರಾಮಗಳಿಗೆ ತೆರಳುವವರು ನಡೆದುಕೊಂಡು ಹೋಗುವಂತಹ ದುಃಸ್ಥಿತಿ ಉಂಟಾಗಿದೆ. ಹಿನ್ನೀರಿನಿಂದಾಗಿ 7ರಿಂದ 8 ರಸ್ತೆಗಳು ಮುಳುಗಡೆಯಾಗಿವೆ.
ಕಾರೇಹಳ್ಳಿ ಮೂಲಕ ಮತ್ತೋಡಿಗೆ ಹೋಗುವ ರಸ್ತೆಯಲ್ಲಿಯೂ ನೀರು ನಿಂತಿದ್ದು, ಭಾರಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಬೈಕ್ ಸವಾರರು ಹೇಗೋ ರಸ್ತೆ ದಾಟುತ್ತಿದ್ದಾರೆ. ಕೆಲವೊಮ್ಮೆ ಬೈಕ್ ಸವಾರರು ಸಹ ಬಿದ್ದಿರುವುದುಂಟು. ವಾಹನಗಳು ನೀರಿನೊಳಗೆ ಹೋದಾಗ ಇದ್ದಕ್ಕಿದ್ದಂತೆ ಬಂದ್ ಆಗುತ್ತಿವೆ. ಈ ದಾರಿ ಬಿಟ್ಟರೆ ಗ್ರಾಮಕ್ಕೆ 7ರಿಂದ 8 ಕಿ.ಮೀ. ಸುತ್ತಿ ಬರಬೇಕು. ಹೊಸದಾಗಿ ಬರುವವರಿಗೆ ದಾರಿ ಗೊತ್ತಾಗದೆ ಪರದಾಡುವಂತಾಗಿದೆ.
ಲಿಂಗದಹಳ್ಳಿ ಗ್ರಾಮದವರು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಮೂರೂವರೆ ಕಿ.ಮೀ ದೂರದ ಕಾರೇಹಳ್ಳಿ ಡೇರಿಗೆ ಹೋಗಿ ಹಾಲು ಹಾಕುತ್ತಿದ್ದರು. ಇಲ್ಲಿನ ಮಾರ್ಗ ಸ್ಥಗಿತಗೊಂಡ ನಂತರ ಈಗ ಆರೂವರೆ ಕಿ.ಮೀ. ದೂರದ ಗೊರವಿಗೊಂಡನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾರೆ. ಅಂದಾಜು 20ರಿಂದ 25 ಮನೆಯವರು ಹೈನುಗಾರಿಕೆಯಲ್ಲೇ ಜೀವನ ಕಂಡುಕೊಂಡಿದ್ದಾರೆ. ಅವರಿಗೂ ಸಮಸ್ಯೆಯಾಗಿದೆ. ಜೋಗಮ್ಮನಹಳ್ಳಿ ರಸ್ತೆಯಲ್ಲಿಯೂ ಹಿನ್ನೀರು ಆವರಿಸಿದ್ದು, 6 ಕಿ.ಮೀ. ದೂರದ ಗೊರವಿಗೊಂಡನಹಳ್ಳಿ ಡೇರಿಗೆ ಹಾಲು ಹಾಕಲು ತೆರಳುತ್ತಿದ್ದಾರೆ.
‘ಇಲ್ಲಿಗೆ ತೆರಳುವಾಗ ಅತ್ತಿಘಟ್ಟದಿಂದ ಲಿಂಗದಹಳ್ಳಿವರೆಗೂ ಕಚ್ಚಾ ರಸ್ತೆಯಿದೆ. ಈ ಮಾರ್ಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕು. ಸಮಯ ವ್ಯರ್ಥವಾಗುತ್ತಿದೆ. ಹಾಲಿನಿಂದ ಬರುವ ಆದಾಯಕ್ಕಿಂತ ವೆಚ್ಚ ಅಧಿಕವಾಗಿದೆ. ಜಾನುವಾರುಗಳಿಗೆ ಮೇವು ಸಹ ದೊರೆಯುತ್ತಿಲ್ಲ. ಜಮೀನಿನಲ್ಲಿ ಮೇವು ಇದೆ. ಮೇವು ತರಲು ಆಗುತ್ತಿಲ್ಲ’ ಎಂದು ಲಿಂಗದಹಳ್ಳಿ ಗ್ರಾಮದ ಆರ್.ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.
ಹಿನ್ನೀರು ನುಗ್ಗಿರುವ ಕಾರಣಕ್ಕೆ ಇಂಡೇದೇವರಹಟ್ಟಿ ಹಾಗೂ ಹುಣಸೇಕಟ್ಟೆ ಗ್ರಾಮಗಳ ಶಾಲೆಗಳಿಗೆ ಹೋಗುವ ಶಿಕ್ಷಕರು ನಾಗತಿಹಳ್ಳಿ ಗ್ರಾಮದಿಂದ ನಡೆದುಕೊಂಡು ಹೋಗುತ್ತಿದ್ದಾರೆ. ಅತ್ತಿಮಗ್ಗೆ ಶಾಲೆಗೆ ಹೋಗುವ ಶಿಕ್ಷಕರು ಭೋವಿಹಟ್ಟಿಯಿಂದ 3 ಕಿ.ಮೀ. ನಡೆದುಕೊಂಡು ಜಮೀನುಗಳ ಮೂಲಕ ಹೋಗುತ್ತಿದ್ದಾರೆ. ಇಲ್ಲಿ ವಾಹನಗಳ ಸೌಲಭ್ಯವಿಲ್ಲ. ಸ್ಥಳೀಯರು ಕೆಲವೊಮ್ಮ ಸಹಾಯ ಮಾಡುತ್ತಾರೆ.
‘ಅತ್ತಿಮಗ್ಗೆ ಶಾಲೆ ನೀರಿನಿಂದ ಆವರಿಸಿದೆ. ದಾಖಲೆಗಳು, ಆಹಾರ ಸಾಮಗ್ರಿ, ಸಿಲಿಂಡರ್‌ಗಳೆಲ್ಲಾ ಶಾಲೆಯಲ್ಲಿಯೇ ಇವೆ. ನೀರಿನಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ಪಕ್ಕದಲ್ಲಿಯೇ ತಿಪ್ಪೆ ಇರುವುದರಿಂದ ಶಾಲಾ ಆವರಣವೆಲ್ಲಾ ಗಲೀಜು ನೀರಿನಿಂದ ಆವರಿಸಿಬಿಟ್ಟಿದೆ. ವಿಷ ಜಂತುಗಳ ಭಯವಿದೆ. ನೀರು ಹೀಗೇ ನಿಂತರೆ ಸೊಳ್ಳೆಗಳ ತಾಣವಾಗಬಹುದು. ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ವಿದ್ಯಾಭ್ಯಾಸ ಮಾಡಿಸಲಾಗುತ್ತಿದೆ. ಬಿಸಿಯೂಟ ತಯಾರಿಕೆಗೆ ಅಗತ್ಯ ಸೌಲಭ್ಯ ಇಲ್ಲದ ಕಾರಣ ಹೋಟೆಲ್‌ನಿಂದ ತರಿಸಲಾಗುತ್ತಿದೆ’ ಎಂದು ಅತ್ತಿಮಗ್ಗೆ ಗ್ರಾಮದ ಪೋಷಕರೊಬ್ಬರು ಮಾಹಿತಿ ನೀಡಿದರು.
ಬೆಳಿಗ್ಗೆ 7 ಗಂಟೆಗೆ ಹೊಸದುರ್ಗದಿಂದ ಹೊರಡಬೇಕು. ನೀರು ಹೆಚ್ಚಾದರೆ ಬಸ್ ಕೂಡ ನಿಲ್ಲಿಸಬಹುದು. ವಿದ್ಯಾರ್ಥಿಗಳು ರಸ್ತೆ ದಾಟಿ ಈ ಕಡೆ ಬರುವಂತಿಲ್ಲ. ಶಿಕ್ಷಕರು ರಸ್ತೆ ದಾಟಿ ಆ ಕಡೆ ಹೋಗಲು ಸಮಸ್ಯೆಯಾಗುತ್ತಿದೆ. ನಮಗೆ ಸಮಸ್ಯೆಯಾದರೂ ಪರವಾಗಿಲ್ಲ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಬೇಕು. ನಿತ್ಯದ ಬೋಧನೆ ನಿರಂತರವಾಗಿದೆ.
– ಅತ್ತಿಮಗ್ಗೆ, ಇಂಡಿದೇವರಹಟ್ಟಿ, ಹುಣಸೇಕಟ್ಟೆ, ಪೂಜಾರಹಟ್ಟಿ ಶಿಕ್ಷಕರು
ಈ ಹಿಂದೆ ವಿಶ್ವೇಶ್ವರಯ್ಯ ಜಲಾನಯನ ಅಭಿವೃದ್ಧಿ ನಿಗಮದ ಎಂಜಿನಿಯರ್ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಈ ಭಾಗದ ಜನರ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಹಿನ್ನೀರಿನಿಂದ ಮುಳುಗಡೆಯಾಗಿರುವ ರಸ್ತೆ, ಸೇತುವೆಗಳ ಪುನರ್ ನಿರ್ಮಾಣಕ್ಕಾಗಿ ₹ 124 ಕೋಟಿ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಜಲಸಂಪನ್ಮೂಲ ಸಚಿವರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಪುನಃ ಪ್ರಸ್ತಾಪಿಸಲಾಗುವುದು.
– ಶಾಸಕ ಬಿ.ಜಿ. ಗೋವಿಂದಪ್ಪ
ಜಮೀನುಗಳಲ್ಲಿ ಹಿನ್ನೀರು ಆವರಿಸಿದ್ದು, ಒಂದು ವಾರದಿಂದ ಅತ್ತ ಹೋಗಿಲ್ಲ. ತೆಂಗಿನ ಕಾಯಿ ನೀರಿನಲ್ಲಿ ಬೀಳುತ್ತಿವೆ. ತೆಗೆದುಕೊಳ್ಳಲು ಆಗುತ್ತಿಲ್ಲ. ಅಡಿಕೆ ಹಾಗೂ ತೆಂಗಿನ ಮರಗಳು ಕೊಳೆಯುತ್ತಿವೆ. ಈ ನೀರು ಇನ್ನೂ 20ರಿಂದ 30 ದಿನಗಳಾದರೂ ಇಳಿಯುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
– ನಾಗೇಂದ್ರಪ್ಪ, ಐಯ್ಯನಹಳ್ಳಿ
ವಿವಿ ಸಾಗರದ ಹಿನ್ನೀರಿನ ಪ್ರದೇಶದಲ್ಲಿ ರಸ್ತೆ, ಜಮೀನು, ಮನೆ ಮುಳುಗಡೆಯಾಗಿರುವ ಬಗ್ಗೆ ವರದಿ ಮಾಡಲು ಜಿಲ್ಲಾಧಿಕಾರಿ ಆದೇಶದಂತೆ ಒಂದು ಸಮಿತಿ ರಚಿಸಲಾಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುತ್ತದೆ. ಮತ್ತೋಡು, ಮಾಡದಕೆರೆ ಹೋಬಳಿಯ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಎಕರೆ ಖಾತೆ ಜಮೀನು ಮುಳುಗಡೆಯಾಗಿದೆ.
– ತಿರುಪತಿ ಪಾಟೀಲ್, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.