
ಹೊಸದುರ್ಗ: ವಿ.ವಿ. ಸಾಗರದ ಹಿನ್ನೀರಿನ ಪ್ರದೇಶದ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ನೀರು ಹೆಚ್ಚಾಗುತ್ತಿದ್ದು, ಖಾತೆ ಜಮೀನುಗಳಿಗೆ ನೀರು ನುಗ್ಗಿದೆ. ಹೂ ಬೆಳೆದು, ಉತ್ತಮ ಆದಾಯ ಗಳಿಸಬಹುದೆಂದು ಕನಸು ಕಂಡಿದ್ದ ಹೂ ಬೆಳೆಗಾರರು ಕಂಗಾಲಾಗಿದ್ದಾರೆ.
ಜೂನ್ ಆರಂಭದಲ್ಲಿ ಮುಂಗಾರು ಹಂಗಾಮು ಮಿಶ್ರ ಬೆಳೆಯಾಗಿ ಬಿತ್ತನೆಯಾಗುವ ಹೂವಿನ ಬೆಳೆಯು ದೀಪಾವಳಿ ಹಬ್ಬ ಮುಗಿಯುವವರೆಗೂ ಏರಿಳಿತದೊಂದಿಗೆ ರೈತನ ಕುಟುಂಬಕ್ಕೆ ಆಸರೆಯಾಗಿರುತ್ತದೆ. ಆದರೆ, ಈ ಬಾರಿ ಗಣೇಶ ಚತುರ್ಥಿ ವೇಳೆಗಿದ್ದ ಹೂವುಗಳ ಬೆಲೆ ದಸರಾ, ದೀಪಾವಳಿ ಹಬ್ಬಕ್ಕಿಲ್ಲ. ಈ ಬಾರಿಯ ಮಳೆಯಿಂದಾಗಿ ಹೂವಿನ ಬೆಳೆ ಹೆಚ್ಚು ತೇವಾಂಶದಿಂದ ಕೂಡಿದ್ದು, ಹೂವುಗಳು ಸ್ವಲ್ಪ ಮಟ್ಟಿಗೆ ಕಪ್ಪಾಗಿವೆ.
ಶ್ರಾವಣ ಮಾಸದಿಂದ ಸಾಲುಸಾಲು ಹಬ್ಬಗಳಿಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಉತ್ತಮ ಆದಾಯ ಗಳಿಸಬಹುದೆಂಬ ನಿರೀಕ್ಷೆಯಿಂದ ತಾಲ್ಲೂಕಿನ ರೈತರು ಚಂಡು ಹೂ, ಸೇವಂತಿಗೆ, ಸುಗಂಧರಾಜ ಸೇರಿ ಹಲವು ಹೂಗಳನ್ನು ಬೆಳೆದಿದ್ದರು. ಹಬ್ಬದ ದಿನ ಹೊರತು ಪಡಿಸಿದರೆ ಉಳಿದಂತೆ ಬೇರೆ ದಿನಗಳಲ್ಲಿ ನಿರೀಕ್ಷಿತ ಮಟ್ಟದ ಆದಾಯ ದೊರೆತಿಲ್ಲ. ಇನ್ನು ದೀಪಾವಳಿ ಹಬ್ಬಕ್ಕೆ ಉತ್ತಮ ಆದಾಯ ಪಡೆಯಲು ಸಜ್ಜಾಗಿದ್ದ ತಾಲ್ಲೂಕಿನ ರೈತರಿಗೆ ಹಿನ್ನೀರು ಆವರಿಸಿ ಬರಸಿಡಿಲು ಬಡಿದಂತಾಗಿದೆ.
‘ಹೂ ಬೆಳೆಯಲು ಆರಂಭವಾದಾಗಿನಿಂದಲೂ ಸಮಸ್ಯೆಗಳ ಸರಮಾಲೆಯಿದೆ. ಈ ಬಾರಿ ನವರಾತ್ರಿ ಹಬ್ಬಕ್ಕೂ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ದೊರೆಯಲಿಲ್ಲ. ₹ 100ಕ್ಕೆ 3ರಿಂದ 4 ಮಾರು ಹೂ ಮಾರುವಂತಾಯಿತು. ಚಂಡು ಹೂ, ಸೇವಂತಿಗೆ ₹ 10ಕ್ಕೆ ಒಂದು ಮಾರು, ದೀಪಾವಳಿಯಲ್ಲೂ ಇದೇ ಬೆಲೆ. ಹೇಗೋ ಖರ್ಚಾದರೂ ವಾಪಸ್ ಬಂದರೆ ಸಾಕು ಅಂದುಕೊಂಡರೆ, ಹಬ್ಬದ ದಿನದಂದೇ ಜೋರು ಮಳೆ. ಸತತ 15 ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಹೂ ಕೊಯ್ಲು ಕಷ್ಟವಾಯಿತು. ಹಬ್ಬದ ಸಮಯದಲ್ಲೂ ಹೂ ಮಾರಾಟ ಮಾಡಲು ಆಗಲಿಲ್ಲ. ಈಗ ಮಳೆ ಬಿಡುವು ನೀಡಿದೆ. ಆದರೆ ಹಿನ್ನೀರು ಆವರಿಸಿಬಿಟ್ಟಿದೆ. ಹೀಗಾದರೆ ರೈತರ ಸ್ಥಿತಿ ಹೇಗೆ?’ ಎಂದು ಅಜ್ಜಿಕಂಸಾಗರದ ರೈತ ಮಹಿಳೆ ಸುಜಾತಾ ಬೇಸರ ವ್ಯಕ್ತಪಡಿಸಿದರು.
ಗಣೇಶ ಚತುರ್ಥಿ ದಿನದಿಂದು ₹ 1000ಕ್ಕೆ 10 ಮಾರು ಹೂ ಮಾರಾಟ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ₹ 100ಕ್ಕೆ 10 ಮಾರು ಬೆಲೆಯಿದೆ. ಮಳೆ ಬಂದು ಹೂ ಹಾಗೂ ಗಿಡಗಳು ನೆಲಕಚ್ಚಿವೆ. ಒಂದು ಎಕರೆಯಲ್ಲಿ ಹೊಸ ಬೆಳೆ ಬೆಳೆಯಲು ₹ 1 ಲಕ್ಷದಿಂದ ₹ 2 ಲಕ್ಷ ವ್ಯಯಿಸಲಾಗಿದೆ. ಆದಾಯ ಬರುವುದಿರಲಿ ಹಾಕಿದ ಖರ್ಚು ಕೂಡ ಬಂದಿಲ್ಲ. ಬರೀ ಸಸಿ ತರಲು ವ್ಯಯಿಸಿದ ಹಣ ಕೂಡ ಕೈಸೇರಿಲ್ಲ– ಆರ್.ಶ್ರೀನಿವಾಸ್ ರೈತ ಅತ್ತಿಘಟ್ಟ
ಒಂದು ಎಕರೆಯಲ್ಲಿ ಸುಗಂಧರಾಜ ಹೂ ಬೆಳೆಯಲಾಗಿದೆ. ಹಿನ್ನೀರು ಆವರಿಸಿ ಹೂವು ಹಾಗೂ ಗಿಡಗಳು ನೀರಿನಿಂದ ಕೊಳೆಯುತ್ತಿವೆ. ರೋಗ ಬಂದಂತಾಗಿದೆ. ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ ದಾಳಿಂಬೆ ಹೂ ಬೆಳೆಗಳೆಲ್ಲಾ ಜಲಾವೃತಗೊಂಡಿವೆ. ಇದುವರೆಗೂ ತೋಟಗಾರಿಕೆ ಇಲಾಖೆಯವರು ಭೇಟಿ ನೀಡಿಲ್ಲ ಪರಿಶೀಲಿಸಿಲ್ಲ–ಜಿ. ರಂಗನಾಥ ಅಂಚಿಬಾರಿಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.