ADVERTISEMENT

ಸಾವಿರಾರು ಕಿಟ್ ವಿತರಣೆ, 76 ದಿನಗಳಿಂದ ದಾಸೋಹ

ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಿದ ನೇಕಾರ ಮಾರುತಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಜೂನ್ 2021, 4:58 IST
Last Updated 18 ಜೂನ್ 2021, 4:58 IST
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬುಧವಾರ ನೇಕಾರ ಮಂಚಿ ಮಾರುತಿ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬುಧವಾರ ನೇಕಾರ ಮಂಚಿ ಮಾರುತಿ ಆಹಾರದ ಕಿಟ್‌ಗಳನ್ನು ವಿತರಿಸಿದರು.   

ಮೊಳಕಾಲ್ಮುರು: ಪಟ್ಟಣದ ಕೈಮಗ್ಗ ನೇಕಾರರೊಬ್ಬರು ಕೋವಿಡ್ ಸಂಕಷ್ಟಕ್ಕೆ ನಿರಂತರವಾಗಿ ಸ್ಪಂದಿಸುವ ಮೂಲಕ ತಾಲ್ಲೂಕಿನ ಗಮನ
ಸೆಳೆದಿದ್ದಾರೆ.

ಮಂಚಿ ಮಾರುತಿ ಎಂಬ ನೇಕಾರ ಕಮ್ ಮಾಸ್ಟರ್ ವೀವರ್ ಈ ಕಾರ್ಯ ಕೈಹಾಕಿರುವ ಯುವಕ. ದಿನಗೂಲಿ ಆಧಾರದಲ್ಲಿ ಕೈಮಗ್ಗ ನೇಯ್ಗೆ ಮಾಡುತ್ತ ಕಡುಬಡತನದ ಜೀವನ ನಡೆಸಿರುವ ಇವರು ನೇಕಾರಿಕೆಯಲ್ಲಿ ಯಾವುದಾದರೂ ಸಾಧನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಅವನತಿಯತ್ತ ಸಾಗುತ್ತಿರುವ ಕೈಮಗ್ಗಗಳನ್ನು ಉಳಿಸುವ ಕಾರ್ಯಕ್ಕೆ ಕೈ ಹಾಕಿದರು. ಇದರಲ್ಲಿ ಯಶಸ್ವಿಯಾಗಿ ಹತ್ತಾರು ಮಗ್ಗಗಳನ್ನು ಹಾಕಿ 50ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ್ದಾರೆ. ಮಾದರಿ ನೇಯ್ಗೆಗೆ ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೋವಿಡ್ ಪರಿಸ್ಥಿತಿ ಎದುರಾಗಿ ನೇಕಾರರು ಸಂಕಷ್ಟಕ್ಕೀಡಾದಾಗ ಆಹಾರ ಕಿಟ್‌ಗಳನ್ನು ನೀಡುವುದನ್ನು ಆರಂಭಿಸಿದ ಮಾರುತಿ ನಂತರ ಎಲ್ಲ ಜನಾಂಗದವರಿಗೂ ಕಿಟ್‌ಗಳನ್ನು ನೀಡಿದರು. ಎರಡನೇ ಅಲೆಯಲ್ಲಿ ಪಟ್ಟಣ, ರಾಂಪುರ, ಕೊಂಡ್ಲಹಳ್ಳಿ, ಹಾನಗಲ್, ಕೋನಸಾಗರ ಗ್ರಾಮಗಳಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ. ಪ್ರಥಮ ಅಲೆ ಮತ್ತು ಎರಡನೇ ಅಲೆಯಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಎದುರು ಹೊರರೋಗಿಗಳಿಗೆ, ಸಂಬಂಧಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಹೊಸದುರ್ಗ ತಾಲ್ಲೂಕಿನ ಅಲೆಮಾರಿ ಜನರಿಗೆ ಸಹ ಕಿಟ್ ಕಳುಹಿಸಿಕೊಟ್ಟಿದ್ದಾರೆ ಎಂದು ಅವರ ಸ್ನೇಹಿತ ಬಿ.ವಿಜಯ್ ಮಾಹಿತಿ ನೀಡಿದರು.

ADVERTISEMENT

ಮಂಚಿ ಮಾರುತಿ ಮಾತನಾಡಿ, ‘ಕೋವಿಡ್‌ನ ಎರಡೂ ಅಲೆ ಸೇರಿ 1000ಕ್ಕೂ ಹೆಚ್ಚು ಕಿಟ್ ನೀಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಎದುರು ದಾಸೋಹ ಬುಧವಾರ 76ನೇ ದಿನಕ್ಕೆ ಕಾಲಿಟ್ಟಿದೆ. ಊಟದ ಜೊತೆ ಬೇಯಿಸಿದ ಮೊಟ್ಟೆ ಸಹ ನೀಡಲಾಗುತ್ತಿದೆ. ನನ್ನ ಕೆಲಸ ನೋಡಿ ಹಲವರು ಬೆಂಬಲಕ್ಕೆ ನಿಂತು ಕೈಜೋಡಿಸಲು ಮುಂದಾಗಿರುವುದು ಖುಷಿ ತಂದಿದೆ’ ಎಂದು ಅವರು ಹೇಳಿದರು.

‘ಇದು ಎಲ್ಲರೂ ಕಷ್ಟದಲ್ಲಿರುವ ಸಮಯ. ಬಡವ, ಶ್ರೀಮಂತ ಎಂಬ ಭೇದವಿಲ್ಲದೇ ತೊಂದರೆಯಲ್ಲಿದ್ದಾರೆ. ಮೊಳಕಾಲ್ಮುರಿನಂತಹ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಾನು ಮಾಡುತ್ತಿರುವ ಕಾರ್ಯ ನನಗೆ ಬಹಳಷ್ಟು ತೃಪ್ತಿ ನೀಡಿದೆ. ಇದು ತನ್ನ ಜೀವನದ ಅವಿಸ್ಮರಣೀಯ ಸಮಯ’ ಎಂದು
ಹೇಳಿದರು.

......

ಮುಂದಿನ ದಿನಗಳಲ್ಲಿ ಕೋವಿಡ್ ಸೇರಿದಂತೆ ಸಾಮಾಜಿಕ ಸೇವೆಯನ್ನು ಮುಂದುವರಿಸಲಾಗುವುದು. ನೇಕಾರಿಕೆಯಿಂದ ವಿಮುಖರಾದವರನ್ನು ಮತ್ತೆ ಕ್ಷೇತ್ರಕ್ಕೆ ತರವುದು ನನ್ನ ಧ್ಯೇಯ.

- ಮಂಚಿ ಮಾರುತಿ, ನೇಕಾರ

.........

ರೋಗಿ ಸಂಬಂಧಿಕರಿಗೆ ಮತ್ತು ಹೊರರೋಗಿಗಳಿಗೆ ಮಾರುತಿ ಅವರ ದಾಸೋಹದಿಂದ ನೆರವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

-ಡಾ. ಅಭಿನವ್, ಆಡಳಿತ ವೈದ್ಯಾಧಿಕಾರಿ, ತಾಲ್ಲೂಕು ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.