ADVERTISEMENT

‘ಕೈ’ ಹಿಡಿಯಲು ಪೂರ್ಣಿಮಾ ಸಜ್ಜು, ಚುನಾವಣೆ ಹೊಸ್ತಿಲಲ್ಲಿ BJPಗೆ ಆಘಾತ

ಜಿ.ಬಿ.ನಾಗರಾಜ್
Published 10 ಅಕ್ಟೋಬರ್ 2023, 7:44 IST
Last Updated 10 ಅಕ್ಟೋಬರ್ 2023, 7:44 IST
ಕೆ.ಪೂರ್ಣಿಮಾ
ಕೆ.ಪೂರ್ಣಿಮಾ   

ಚಿತ್ರದುರ್ಗ: ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ‘ಆಪರೇಷನ್‌ ಹಸ್ತ’ದ ಮೂಲಕ ಕಾಂಗ್ರೆಸ್‌ ಆಘಾತ ನೀಡಿದೆ. ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಅವರನ್ನು ಪಕ್ಷಕ್ಕೆ ಸೆಳೆದ ‘ಕೈ’ ಪಾಳೆಯ ರಾಜಕೀಯ ದಾಳ ಉರುಳಿಸಿದೆ.

‘ಪೂರ್ಣಿಮಾ ಬಿಜೆಪಿ ತೊರೆಯಲಿದ್ದಾರೆ’ ಎಂಬ ಬಹುದಿನಗಳ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿ ತೊರೆದು ಅ. 20ರಂದು ಅವರು ಕಾಂಗ್ರೆಸ್ ಸೇರ್ಪಡೆ ಆಗುವುದು ಅಧಿಕೃತವಾಗಿ ಘೋಷಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಸಕ್ತಿ ವಹಿಸಿ ಪೂರ್ಣಿಮಾ ಅವರನ್ನು ಸ್ವಾಗತಿಸುತ್ತಿರುವುದು ಹೊಸ ಸಂದೇಶ ರವಾನಿಸಿದೆ.

ಗೊಲ್ಲ ಸಮುದಾಯದ ಪ್ರಭಾವಿ ನಾಯಕಿಯ ಪಕ್ಷಾಂತರವು ಹಿರಿಯೂರು ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಕುಗ್ಗಿಸಿದೆ. ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿ ರಾಜ್ಯದ ಹಲವೆಡೆ ನಿರ್ಣಾಯಕ ಮತದಾರರನ್ನು ಹೊಂದಿರುವ ಗೊಲ್ಲ ಸಮುದಾಯದ ಮುಖಂಡರು ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ತಳೆದ ರಾಜಕೀಯ ನಿಲುವು ಫಲಿತಾಂಶವನ್ನು ಪ್ರಭಾವಿಸುವ ಸಾಧ್ಯತೆ ಇದೆ.

ADVERTISEMENT

ಪೂರ್ಣಿಮಾ ಅವರ ತಂದೆ ಮಾಜಿ ಸಚಿವ ಎ.ಕೃಷ್ಣಪ್ಪ ಮೂಲತಃ ಕಾಂಗ್ರೆಸ್ಸಿಗರು. ಜೆಡಿಎಸ್‌ನಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಕಾಂಗ್ರೆಸ್‌ ಸದಸ್ಯೆಯಾಗಿದ್ದ ಪೂರ್ಣಿಮಾ, ತಂದೆಯ ನಿಧನದ ಬಳಿಕ ಬಿಜೆಪಿ ಸೇರಿದ್ದರು. ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ 2018ರಲ್ಲಿ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಅರಳಿದ್ದ ಕಮಲ: ಕಾಂಗ್ರೆಸ್‌ ಮತ್ತು ಜನತಾ ಪರಿವಾರದ ಭದ್ರ ನೆಲೆಯಾಗಿದ್ದ ಹಿರಿಯೂರಿನಲ್ಲಿ ಬಿಜೆಪಿ ರಾಜಕೀಯ ನೆಲೆ ಕಂಡುಕೊಳ್ಳಲು ಎರಡು ದಶಕಗಳ ಹೋರಾಟ ನಡೆಸಿದೆ. 1989ರಿಂದ 2004ರವರೆಗೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕೆ.ಪೂರ್ಣಿಮಾ ಅವರು ಬಿಜೆಪಿ ಶಾಸಕಿಯಾದ ಬಳಿಕ ಪಕ್ಷದ ಶಕ್ತಿ ವೃದ್ಧಿಸಿತ್ತು.

ಗೊಲ್ಲ (ಯಾದವ), ಕುಂಚಿಟಿಗ, ಪರಿಶಿಷ್ಟ ಜಾತಿ ಸಮುದಾಯದವರು ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು. ಪೂರ್ಣಿಮಾ ಅವರಿಗೆ ಹಿರಿಯೂರು ಕಾರ್ಯ ಕ್ಷೇತ್ರವಾದ ನಂತರ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದವು. ಗೊಲ್ಲ ಸಮುದಾಯದ ರಾಜಕೀಯ ಪ್ರತಿನಿಧಿಯಾಗಿ ಅವರು ಮುನ್ನೆಲೆಗೆ ಬಂದಿದ್ದರು.

ಪತಿ ಅಮಾನತು ಮಾಡಿದ್ದ ಬಿಜೆಪಿ: ಕೆ.ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್‌ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷರು. ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಶ್ರೀನಿವಾಸ್‌, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಚುನಾವಣಾ ತಂತ್ರಗಾರಿಕೆ ಬದಲಿಸಿದ್ದ ಬಿಜೆಪಿ ನಾಯಕರು ಶ್ರೀನಿವಾಸ್‌ ಬದಲು ಪೂರ್ಣಿಮಾ ಅವರಿಗೆ ಟಿಕೆಟ್‌ ನೀಡಿದ್ದರು. ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ರೀನಿವಾಸ್‌ ಬಿಜೆಪಿ ಟಿಕೆಟ್‌ ನಿರೀಕ್ಷಿಸಿದ್ದರು. ಪಕ್ಷ ಅವಕಾಶ ನೀಡದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಶ್ರೀನಿವಾಸ್‌ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು.

ಕೈತಪ್ಪಿದ್ದ ಸಚಿವೆ ಸ್ಥಾನ: ಬಿಜೆಪಿ ಸರ್ಕಾರದಲ್ಲಿ ಪೂರ್ಣಿಮಾ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಸಚಿವ ಸಂಪುಟ ಪುನರ್‌ ರಚನೆಯಲ್ಲಿ ಪೂರ್ಣಿಮಾ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದರು. ಕೊನೆಯ ಕ್ಷಣದಲ್ಲಿ ಸಚಿವೆ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದರು.

ಈ ಕಾರಣಕ್ಕೆ ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ತೊರೆಯುತ್ತಾರೆ ಎಂಬ ವದಂತಿ ಬಲವಾಗಿ ಹಬ್ಬಿತ್ತು. ಬಿ.ಎಸ್‌. ಯಡಿಯೂರಪ್ಪ ಅವರು ಹಿರಿಯೂರಿಗೆ ಧಾವಿಸಿ ಮನವೊಲಿಸಿದ ಬಳಿಕ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಪೂರ್ಣಿಮಾ ಘೋಷಣೆ ಮಾಡಿದ್ದರು. ಇತ್ತೀಚೆಗೆ ನಡೆದ ಕೃಷ್ಣ ಜನ್ಮಾಷ್ಟಮಿಯ ದಿನದಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪೂರ್ಣಿಮಾ ಅವರು ತಮ್ಮ ಬೆಂಗಳೂರು ನಿವಾಸಕ್ಕೆ ಆಹ್ವಾನಿಸಿ ಚರ್ಚೆ ನಡೆಸಿದ್ದರಿಂದ ಪಕ್ಷಾಂತರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿತ್ತು.

ಬೆಂಬಲಿಗರಲ್ಲಿ ಗೊಂದಲ ಆತಂಕ

ಲೋಕಸಭೆ ಚುನಾವಣೆ ಸಮೀಪಿಸಿದ ಸಂದರ್ಭದಲ್ಲಿ ನಡೆಯುತ್ತಿರುವ ಪಕ್ಷಾಂತರವು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ರಾಜಕೀಯ ಜಿದ್ದಾಜಿದ್ದಿ ಹೊಂದಿದ್ದ ಕೆ.ಪೂರ್ಣಿಮಾ ಹಾಗೂ ಡಿ.ಸುಧಾಕರ್‌ ಒಂದೇ ಪಕ್ಷದ ವೇದಿಕೆಗೆ ಬರುತ್ತಿರುವುದು ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸಿದೆ. 2013ರಿಂದ 2023ರವರೆಗೆ ನಡೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಪೂರ್ಣಿಮಾ ಕುಟುಂಬ ಹಾಗೂ ಡಿ.ಸುಧಾಕರ್‌ ಪರಸ್ಪರ ಪ್ರತಿಸ್ಪರ್ಧಿಗಳು. 2013ರಲ್ಲಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದ ಸುಧಾಕರ್‌ ಅವರನ್ನು 2018ರ ಚುನಾವಣೆಯಲ್ಲಿ ಪೂರ್ಣಿಮಾ ಪರಾಭವಗೊಳಿಸಿದ್ದರು. 2023ರ ಚುನಾವಣೆಯಲ್ಲಿ ಪೂರ್ಣಿಮಾ ಅವರನ್ನು ಸೋಲಿಸಿ ಸುಧಾಕರ್‌ ವಿಜೇತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.