ಹಿರಿಯೂರು: ತಾಲ್ಲೂಕಿನ ಪಿಲ್ಲಾಜನಹಳ್ಳಿಯ ತೋಟವೊಂದರ ಹಾಳು ಬಾವಿಗೆ ಬಿದ್ದ ನರಿಯನ್ನು ಎರಡು ದಿನಗಳ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮೇಲಕ್ಕೆ ಎತ್ತಿದರು.
ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿ ರಾಜಶೇಖರ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಸುಬಾನ್ ಸಾಬ್ ಅವರ ಶೂಗಳಿಗೆ ನರಿ ಜೋರಾಗಿ ಕಚ್ಚಿದೆ. ಸಿಟ್ಟಿನಲ್ಲಿದ್ದ ನರಿ ಕಚ್ಚಬಹುದು ಎಂದು ಕೋಲುಗಳಿಗೆ ಹಗ್ಗವನ್ನು ಕಟ್ಟಿ ನರಿ ಜಾರಿ ಬೀಳದಂತೆ ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ನರಿಯನ್ನು ಮೇಲೆತ್ತಿ ಬುಧವಾರ ಯಲ್ಲದಕೆರೆ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಪಿಲ್ಲಾಜನಹಳ್ಳಿಯ ನಿಂಗಣ್ಣ ಅವರ ತೋಟದ 25 ಅಡಿ ಆಳದ, ಐದು ಅಡಿ ಅಗಲದ ಹಾಳು ಬಾವಿಗೆ ಸೋಮವಾರ ನರಿ ಬಿದ್ದಿತ್ತು. ಸೋಮವಾರ ಹಾಗೂ ಮಂಗಳವಾರ ನರಿಯನ್ನು ಮೇಲೆತ್ತಲು ಗ್ರಾಮಸ್ಥರು ಪ್ರಯತ್ನಪಟ್ಟರೂ ಆಗಿರಲಿಲ್ಲ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಯಶಸ್ವಿ ಕಾರ್ಯಾಚರಣೆ ನಡೆಸಿದರು.
ವಿಶೇಷವೆಂದರೆ ನರಿಗೆ ಊರಿನ ಮಾರಮ್ಮನ ಹಬ್ಬದ ಊಟ ಸಿಕ್ಕಿದ ಕಾರಣ ಬಚಾವಾಗಿತ್ತು.
‘ಬಾವಿಯ ದಂಡೆಗೆ ಕಲ್ಲಿನ ಚಪ್ಪಡಿ ಹಾಕಲಾಗಿತ್ತು. ಒಂದು ಕಡೆ ಚಪ್ಪಡಿ ಕೆಳಗೆ ದೊಡ್ಡ ಬಿಲ ಉಂಟಾಗಿತ್ತು. ಬಿಲದ ಮೂಲಕ ತೂರಿದ ನರಿ ಆಯತಪ್ಪಿ ಬಾವಿಗೆ ಬಿದ್ದಿದೆ. ನರಿ ಅರಚಿಕೊಳ್ಳುವುದನ್ನು ನೋಡಿ ಬಾವಿಗೆ ಏಣಿ ಇಳಿಬಿಟ್ಟು ಮೇಲಕ್ಕೆ ಎತ್ತಲು ಹೋದರೆ ಕಚ್ಚಲು ಬಂದಿತು. ಹಗ್ಗ ಹಾಕಿ ಹಿಡಿಯುವ ಪ್ರಯತ್ನ ಸಫಲವಾಗಲಿಲ್ಲ. ಊರಿನಲ್ಲಿ ಮಾರಮ್ಮನ ಹಬ್ಬ ಇದ್ದ ಕಾರಣ ಹಬ್ಬಕ್ಕೆ ಮಾಡಿದ ಕರಿಗಡುಬನ್ನು ಬಾವಿಯ ಒಳಗೆ ಹಾಕಿ ಬಕೆಟ್ ಒಂದರಲ್ಲಿ ನೀರನ್ನು ಇಳಿಬಿಟ್ಟಿದ್ದೆವು. ಎಲ್ಲವನ್ನೂ ನರಿ ತಿಂದಿತ್ತು. ಇದರಿಂದ ಅದು ನಿತ್ರಾಣಗೊಂಡಿರಲಿಲ್ಲ’ ಎಂದು ತೋಟದ ಮಾಲೀಕ ನಿಂಗಣ್ಣ ಸುದ್ದಿಗಾರರಿಗೆ ತಿಳಿಸಿದರು.
ಅಗ್ನಿ ಶಾಮಕ ದಳದ ಸಿಬ್ಬಂದಿ ಕೆ.ಸಿ. ತಿಪ್ಪೇಸ್ವಾಮಿ, ವಿನೋದ ಅಂಜುಟಗಿ, ವಿಟ್ಟಪ್ಪ ಬ ಬನಾಜಿ, ಶ್ರೀಕಾಂತ ನಿಡೋಣಿ, ಯಲಗೂರದಪ್ಪ, ಸುನಿಲ ರಾಠೋಡ್ ಹಾಗೂ ಉಪವಲಯ ಅರಣ್ಯಾಧಿಕಾರಿ ಕಾಂತರಾಜು, ಸಿಬ್ಬಂದಿ ದರ್ಶನ್ ದಡೂತಿ, ರಾಜಶೇಖರ್, ಹಂಪಣ್ಣ, ಕಣುಮಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.