ADVERTISEMENT

ಮೊಳಕಾಲ್ಮುರು | ಹಳ್ಳಿ ಜಾತ್ರೆಗಳಲ್ಲಿ ಜೂಜಾಟ!

ವಯಸ್ಸಿನ ಬೇಧವಿಲ್ಲದೇ ಹಣ ಕಟ್ಟುವ ಜನ; ಲಕ್ಷಾಂತರ ರೂಪಾಯಿ ವಹಿವಾಟು

ಕೊಂಡ್ಲಹಳ್ಳಿ ಜಯಪ್ರಕಾಶ
Published 31 ಡಿಸೆಂಬರ್ 2025, 8:42 IST
Last Updated 31 ಡಿಸೆಂಬರ್ 2025, 8:42 IST
ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದರಲ್ಲಿ ಈಚೆಗೆ ನಡೆದ ಜಾತ್ರೆಯುಲ್ಲಿ ಹಾಕಿದ್ದ ಜೂಜು ಮಾದರಿ ಆಟದ ಕೇಂದ್ರಗಳು
ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದರಲ್ಲಿ ಈಚೆಗೆ ನಡೆದ ಜಾತ್ರೆಯುಲ್ಲಿ ಹಾಕಿದ್ದ ಜೂಜು ಮಾದರಿ ಆಟದ ಕೇಂದ್ರಗಳು   

ಮೊಳಕಾಲ್ಮುರು: ಜೂಜಾಟ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಹಳ್ಳಿಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಜೂಜಾಟದ ಮಾದರಿಯ ಆಟ ಅಥವಾ ಜೂಜಾಟ ಹೆಚ್ಚು ಮುನ್ನೆಲೆಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಅನೇಕ ಜಾತ್ರೆಗಳಲ್ಲಿ ಇಂತಹ ಜೂಜಾಟ ಮಾದರಿಯ ಆಟದ ಕೇಂದ್ರಗಳು ಹೆಚ್ಚು ಕಂಡುಬಂದಿದ್ದು, ಪ್ರತಿ ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿದೆ ಎನ್ನಲಾಗಿದೆ.

ಒಂದು ಡಬ್ಬಿ ಮಾದರಿಯಲ್ಲಿ ನೆಚ್ಚಿನ ಚಿತ್ರನಟರ, ಐಪಿಎಲ್‌ ತಂಡಗಳ ಹೆಸರಿನ ಅಥವಾ ಕ್ರಿಕೆಟ್‌ ಆಟಗಾರರ ಭಾವಚಿತ್ರದ ಮೇಲೆ ಹಣ ಕಟ್ಟಬೇಕು. ಕಟ್ಟಿದ ಮೊತ್ತಕ್ಕೆ ತಕ್ಕನಾಗಿ ಬಣ್ಣದ ಚೆಂಡು ನೀಡಲಾಗುತ್ತದೆ. ಚೆಂಡನ್ನು ನಿಗದಿಪಡಿಸಿದ ಡಬ್ಬಿಯ ಒಳಗಡೆ ಎಸೆಯಬೇಕು. ಎಲ್ಲಿಗೆ ಚೆಂಡು ಬಂದು ನಿಲ್ಲುತ್ತದೆಯೋ ಅದಕ್ಕೆ ಹಣ ಕಟ್ಟಿದ್ದಲ್ಲಿ ಇಂತಿಷ್ಟು ಪಟ್ಟು ಮೊತ್ತ ನೀಡಲಾಗುತ್ತದೆ. ಇದು ಆಟದ ನಿಯಮವಾಗಿದೆ. ತಕ್ಷಣವೇ ಹಣ ನೀಡುವ ಕಾರಣ ಇಂತಹ ಆಟಗಳು ಜನರನ್ನು ಆಕರ್ಷಿಸುತ್ತಿದ್ದು, ಗುಂಪಾಗಿ ನಿಂತು ಹಣ ಕಟ್ಟುವವರು ಕಾಣಸಿಗುತ್ತಿತ್ತು.

ADVERTISEMENT

‘ಹೊಚ‌ಚಹೊಸ ರಥೋತ್ಸವ ಇದ್ದ ಗ್ರಾಮವೊಂದರ ಜಾತ್ರೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಇಂತಹ 10ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆಯಲಾಗಿತ್ತು. 5 ದಿನ ಸತತವಾಗಿ ಇವು ಸಕ್ರಿಯವಾಗಿದ್ದವು. ₹ 4 ಲಕ್ಷದಿಂದ ₹ 5 ಲಕ್ಷ ವಹಿವಾಟು ನಡೆದಿರಬಹುದು. ಚಿಕ್ಕ ಮಕ್ಕಳು ಇದರ ಮೋಹಕ್ಕೆ ಬಲಿಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಮಕ್ಕಳನ್ನು ಜೂಜಾಟಕ್ಕೆ ಒಳಪಡಿಸುವುದರಲ್ಲಿ ಸಂಶಯವಿಲ್ಲ’ ಎಂದು ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಜಾತ್ರೆ ಎಂದಾಕ್ಷಣ ಕಣ್ಮುಂದೆ ಬರುತ್ತಿದ್ದ ಚಿತ್ರಣವೇ ಈಗ ಬದಲಾಗಿದೆ. ಕರ್ಕಶ ಶಬ್ದ ಮಾಡುವ ಆಟಿಕೆಗಳ ಮಾರಾಟ, ಜೂಜಾಟ ಮಾದರಿಯ ಆಟಗಳು, ಜಂಕ್‌ಫುಡ್‌ಗಳ ಮಾರಾಟ ಸ್ಥಳವಾಗಿದೆ. ಕರ್ಶಕ ಶಬ್ದದ ಆಟಿಕೆಗಳ ಮಾರಾಟ ನಿಷೇಧಿಸಲಾಗಿದೆ ಎಂದು ಪೊಲೀಸರು ಹೇಳಿದರೂ ಹಾವಳಿ ಮಾತ್ರ ತಪ್ಪಿಲ್ಲ. ಪೋಲಿ ಹುಡುಗರು ಕರ್ಕಶ ಸದ್ದು ಹೊರಹೊಮ್ಮಿಸುವ ಪೀಪಿಯಂತಹ ಈ ಆಟಿಕೆಗಳನ್ನು ಬಳಸಿ ನೀಡುವ ತೊಂದರೆ ಹಾಗೂ ಈ ಶಬ್ದದ ಸಹವಾಸ ಸಾಕು ಎಂದು ಅನೇಕರು ಜಾತ್ರೆಗಳಿಂದ ವಿಮುಖವಾಗುತ್ತಿದ್ದಾರೆಲ’ ಎಂದು ಅವರು ಹೇಳಿದರು.

ಕ್ರಮ: ಪೊಲೀಸರ ಭರವಸೆ ಜೂಜಾಟ ಮಾದರಿಯ ಕೇಂದ್ರಗಳನ್ನು ತೆರೆಯುವ ಮಾಹಿತಿ ಸಿಕ್ಕಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಮಹೇಶ್‌ ಹೊಸಪೇಟೆ ಹೇಳಿದರು. ‘ತುಮಕೂರ್ಲಹಳ್ಳಿ ಬಿ.ಜಿ.ಕೆರೆಯಲ್ಲಿ ಇಂತಹ ಮಾದರಿಯ ಕೇಂದ್ರಗಳನ್ನು ಆರಂಭಿಸಲು ಅವಕಾಶ ನೀಡಿಲ್ಲ. ಮುಂದಿನ ದಿನಗಳಲ್ಲಿ ಜಾತ್ರೆ ಆಯೋಜನೆಗೂ ಮುನ್ನ ಸಂಬಂಧಪಟ್ಟ ಗ್ರಾಮದ ಮುಖಂಡರ ಗಮನಕ್ಕೆ ಇದನ್ನು ತರುವ ಮೂಲಕ ಜೂಜು ಮಾದರಿಯ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಗಳಲ್ಲಿ ಇಂತಹ ಚಟುವಟಿಕೆ ಕಂಡುಬಂದಲ್ಲಿ ಗ್ರಾಮಸ್ಥರು ಪೊಲೀಸರ ಗಮನಕ್ಕೆ ತರಬೇಕು’ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.