ADVERTISEMENT

ಚಿತ್ರದುರ್ಗ: ಸಾಮೂಹಿಕ ಗಣೇಶಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 16:52 IST
Last Updated 12 ಸೆಪ್ಟೆಂಬರ್ 2021, 16:52 IST
ಚಿತ್ರದುರ್ಗದ ಆನೆಬಾಗಿಲು ಸಮೀಪ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯನ್ನು ಚಂದ್ರವಳ್ಳಿ ಕೆರೆ ಸಮೀಪದ ಬಾವಿಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು.
ಚಿತ್ರದುರ್ಗದ ಆನೆಬಾಗಿಲು ಸಮೀಪ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯನ್ನು ಚಂದ್ರವಳ್ಳಿ ಕೆರೆ ಸಮೀಪದ ಬಾವಿಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು.   

ಚಿತ್ರದುರ್ಗ: ಗಣೇಶಮೂರ್ತಿಗಳ ಸಾಮೂಹಿಕ ವಿಸರ್ಜನೆ ಜಿಲ್ಲೆಯ ಹಲವೆಡೆ ಭಾನುವಾರ ನಡೆಯಿತು. ಮೂರನೇ ದಿನಕ್ಕೆ ಗಣೇಶಮೂರ್ತಿ ವಿಸರ್ಜಿಸಿ ಭಕ್ತರು ಪಾವನರಾದರು.

ಹಬ್ಬದ ದಿನವೇ ಕೆಲವರು ಗಣೇಶಮೂರ್ತಿ ವಿಸರ್ಜನೆ ಮಾಡಿದ್ದರು. ಮೂರನೇ, ಐದನೇ, 11ನೇ ಹಾಗೂ 21ನೇ ದಿನಕ್ಕೆ ಗಣೇಶಮೂರ್ತಿ ವಿಸರ್ಜನೆ ಮಾಡುವುದು ವಾಡಿಕೆ. ಬಹುತೇಕರು ಮೂರನೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದು ಕಂಡುಬಂದಿತು.

ಕೋವಿಡ್‌ ಕಾರಣಕ್ಕೆ ಹಬ್ಬದ ಬಗ್ಗೆ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಐದು ದಿನಗಳವರೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಭಾನುವಾರ ಇರುವ ಕಾರಣಕ್ಕೆ ಬಹುತೇಕರು ಮೂರನೇ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದು ಕಂಡುಬಂದಿತು.

ADVERTISEMENT

ಕೆರೆ, ಬಾವಿ, ಕಲ್ಯಾಣಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಕೃತಕ ಕೊಳ ಸೇರಿದಂತೆ ಜಲಮೂಲಗಳಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾಡಲಾಯಿತು. ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಗಣೇಶಮೂರ್ತಿ ವಿಸರ್ಜನೆಗೆ ಜಿಲ್ಲೆಯ 31 ಸ್ಥಳ ಗುರುತಿಸಲಾಗಿದೆ.

ನಗರದ ಆನೆಬಾಗಿಲು ಸಮೀಪದ ಪ್ರಸನ್ನ ಗಣಪತಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ 64ನೇ ವರ್ಷದ ಗಣೇಶಮೂರ್ತಿ ವಿಸರ್ಜನೆ ಚಂದ್ರವಳ್ಳಿ ಕೆರೆಯ ಬಾವಿಯಲ್ಲಿ ಭಾನುವಾರ ನಡೆಯಿತು. ಮೆರವಣಿಗೆಗೆ ಅವಕಾಶ ಇಲ್ಲದಿರುವುದರಿಂದ ಕೆಲವೇ ಭಕ್ತರು ತೆರಳಿ ಪೂಜಾ ವಿಧಿ–ವಿಧಾನ ಪೂರೈಸಿದರು. ಸಾರ್ವಜನಿಕ ಗಣೇಶಮೂರ್ತಿಗೆ ಸರ್ಕಾರ ಎತ್ತರ ನಿಗದಿಪಡಿಸಿದ್ದರಿಂದ ಚಿಕ್ಕ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ಸಮಿತಿ ಅಧ್ಯಕ್ಷ ಗೋಪಾಲರಾವ್ ಜಾದವ್, ಉಪಾಧ್ಯಕ್ಷರಾದ ನಾಗರಾಜ ಬೇದ್ರೆ, ಐ.ಓ. ರಾಜಕುಮಾರ್, ಕಾರ್ಯದರ್ಶಿ ಪಿ.ಎಲ್.ಶಿವಕುಮಾರ್, ಶಾಮ್ ಪ್ರಸಾದ್, ನಾರಾಯಣರಾವ್, ಜೆ.ಎಸ್. ಶಂಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.