ADVERTISEMENT

ಮಹಾಗಣತಿ ಶೋಭಾಯಾತ್ರೆಗೆ ನಗರ ಸಜ್ಜು

ಕೇಸರಿಯಿಂದ ಕಂಗೊಳಿಸುತ್ತಿದೆ ನಗರ l ಶಾಲಾ ಕಾಲೇಜಿಗೆ ರಜೆ ಘೋಷಣೆ l ಬೆಳಿಗ್ಗೆ 10 ಗಂಟೆಗೆ ವಿದ್ಯುಕ್ತ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 4:39 IST
Last Updated 17 ಸೆಪ್ಟೆಂಬರ್ 2022, 4:39 IST
ವಿಶೇಷ ಅಲಂಕಾರದಲ್ಲಿ ಆಕರ್ಷಿಸುತ್ತಿರುವ ಮದಕರಿ ನಾಯಕನ ವೃತ್ತ.
ವಿಶೇಷ ಅಲಂಕಾರದಲ್ಲಿ ಆಕರ್ಷಿಸುತ್ತಿರುವ ಮದಕರಿ ನಾಯಕನ ವೃತ್ತ.   

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಅಂಗವಾಗಿ ನಗರದಲ್ಲಿ ಶನಿವಾರ ನಡೆಯುವ ಬೃಹತ್‌ ಶೋಭಾಯಾತ್ರೆಗೆ ಕೋಟೆನಾಡು ಸಂಪೂರ್ಣ ಸಿದ್ಧವಾಗಿದೆ.

ಶನಿವಾರ ಬೆಳಿಗ್ಗೆ 10 ಗಂಟೆಗೆ ಜೈನ್‌ಧಾಮದ ಆವರಣದಲ್ಲಿ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷತ್‌ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಂಬರೀಶ್‌ ಸಿಂಗ್‌ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುವ ನಿರೀಕ್ಷೆ ಇದೆ.

ಕೋವಿಡ್‌ ಕಾರಣಕ್ಕೆ ಕಳೆದ ಎರಡು ವರ್ಷ ಶೋಭಾಯಾತ್ರೆ ಸರಳವಾಗಿ ಸಾಗಿತ್ತು, ಎಲ್ಲ ಆತಂಕಗಳು ದೂರವಾದ ಕಾರಣ ಈ ಬಾರಿ ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ವ್ಯಕ್ತವಾಗುತ್ತಿದೆ. ಮೆರವಣಿಗೆ ಸಾಗುವ ನಾಲ್ಕೂವರೆ ಕಿ.ಮೀ ಮಾರ್ಗ ಸಂಪೂರ್ಣ ಕೇಸರಿಮಯವಾಗಿದೆ.

ADVERTISEMENT

ಶೋಭಾಯಾತ್ರೆ ಸಾಗುವ ಮಾರ್ಗವನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ. ಗಾಂಧಿ ವೃತ್ತ, ಮದಕರಿ ವೃತ್ತ, ಕನಕ ವೃತ್ತ, ಒನಕೆ ಓಬವ್ವ ವೃತ್ತ, ವಾಸವಿ ವೃತ್ತ, ಸಂಗೋಳ್ಳಿ ರಾಯಣ್ಣ ಪ್ರತಿಮೆಗಳು ವಿಶೇಷ ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿವೆ. ಶುಕ್ರವಾರ ಸಂಜೆಯಿಂದಲೇ ನಗರದಲ್ಲಿ ಜನದಟ್ಟಣೆ ಪ್ರಾರಂಭವಾಗಿದ್ದು, ಯುವಕರು ಭಗವಾಧ್ವಜ ಹಿಡಿದು ದ್ವಿಚಕ್ರ ವಾಹನಗಳಲ್ಲಿ ಸಾಗುವುದು ಸಾಮಾನ್ಯವಾಗಿದೆ. ಆಟೊ, ಕಾರುಗಳ ಮೇಲೆ ಸಹ ಕೇಸರಿ ಬಾವುಟ ರಾರಾಜಿಸುತ್ತಿವೆ.

ಶೋಭಾಯಾತ್ರೆಯಲ್ಲಿ ಹತ್ತಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜತೆಗೆ ರಸ್ತೆ ಸಂಪರ್ಕವನ್ನು ಬಂದ್‌ ಮಾಡಲಾಗಿದೆ. ಮಹಿಳೆಯರಿಗೆ ವಿಶೇಷ ಭದ್ರತೆ ಕಲ್ಪಿಸಲು ಆದ್ಯತೆ ನೀಡಲಾಗಿದೆ.

ಎರಡು ವರ್ಷದ ಬಳಿಕ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯುತ್ತಿರುವ ಕಾರಣ ಪೊಲೀಸ್‌ ಇಲಾಖೆ ಹೆಚ್ಚಿನ ಬಿಗಿ ಭದ್ರತೆ ಕಲ್ಪಿಸಿದೆ. ಮಾರ್ಗದುದ್ದಕ್ಕೂ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ನಗರ ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲ ವಾಹನ, ವ್ಯಕ್ತಿಗಳ ಮೇಲೆ ನಿಗಾವಹಿಸಲಾಗುತ್ತಿದೆ.

ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವ ಶೋಭಾಯಾತ್ರೆ ರಾತ್ರಿ 11 ರವರೆಗೆ ನಡೆಯುವ ಸಾಧ್ಯತೆಗಳಿವೆ. ಪ್ರತಿ ವರ್ಷದಂತೆ ಈ ವರ್ಷವೂ ನಗರ ವ್ಯಾಪ್ತಿಯ ಶಾಲಾ –ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ವಾಹನಗಳ ಮಾರ್ಗ ಬದಲಾವಣೆ

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಸೆ.17 ರಂದು ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮೆರವಣಿಗೆ ನಗರದ ಬಿ.ಡಿ.ರಸ್ತೆಯಿಂದ ಹೊಳಲ್ಕೆರೆ ರಸ್ತೆ ಮೂಲಕ ಚಂದ್ರವಳ್ಳಿ ಬಳಿಯ ವಿಸರ್ಜನಾ ಸ್ಥಳ ತಲುಪುತ್ತದೆ.

ಬೆಂಗಳೂರು ಹಾಗೂ ಚಳ್ಳಕೆರೆ ಮತ್ತು ಹೊಸಪೇಟೆ ಮಾರ್ಗದಿಂದ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್ ರಸ್ತೆಯಿಂದ ಬಂದು ಮೆದೇಹಳ್ಳಿ ರಸ್ತೆ ಮತ್ತು ಎಪಿಎಂಸಿ ಮಾರುಕಟ್ಟೆ ಮೂಲಕ ಬಸ್ ನಿಲ್ದಾಣಗಳಿಗೆ ಬಂದು ಅದೇ ಮಾರ್ಗದಲ್ಲಿ ಹೊರಹೋಗಬೇಕು.

ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಜೆಎಂಐಟಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪುನಃ ವಾಪಸ್‌ ಅದೇ ಮಾರ್ಗದಲ್ಲಿ ಸಂಚರಿಸಬೇಕು.

ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 13ರ ಬೈಪಾಸ್‍ನಲ್ಲಿ ಮುರುಘಾ ಮಠದವರೆಗೆ ಸಾಗಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ವಾಪಸ್‌ ಅದೇ ಮಾರ್ಗದಲ್ಲಿ ತೆರಳಬೇಕು.

ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಮುರುಘಾರಾಜೇಂದ್ರ ಕ್ರೀಡಾಂಗಣ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.