ADVERTISEMENT

ಚಿಕ್ಕಜಾಜೂರು | ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ

ಕಣ್ಮರೆಯ ಅಂಚಿನಲ್ಲಿ ನೀರಿನ ಸೆಲೆ

ಜೆ.ತಿಮ್ಮಪ್ಪ
Published 19 ಫೆಬ್ರುವರಿ 2024, 6:38 IST
Last Updated 19 ಫೆಬ್ರುವರಿ 2024, 6:38 IST
ಚಿಕ್ಕಜಾಜೂರಿನ ಕೆರೆಯಲ್ಲಿ ತ್ಯಾಜ್ಯದ ರಾಶಿ
ಚಿಕ್ಕಜಾಜೂರಿನ ಕೆರೆಯಲ್ಲಿ ತ್ಯಾಜ್ಯದ ರಾಶಿ   

ಚಿಕ್ಕಜಾಜೂರು: ಗ್ರಾಮದ ಕೆರೆಗೆ ತ್ಯಾಜ್ಯ ಸೇರುತ್ತಿದ್ದು, ಜಲಮೂಲ ಕಣ್ಮರೆಯಾಗುವ ಆತಂಕ ಎದುರಾಗಿದೆ. ಹಳೆ ಮನೆಗಳನ್ನು ಕೆಡವಿದ ತ್ಯಾಜ್ಯ, ಕೋಳಿ ಅಂಗಡಿ, ಕ್ಷೌರಿಕ ಅಂಗಡಿಗಳ ತ್ಯಾಜ್ಯ ಕೆರೆಯ ಒಡಲು ಸೇರುತ್ತಿದೆ. ಇದರಿಂದಾಗಿ ಕೆರೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ.

ಈ ಕೆರೆ ಸುಮಾರು 98 ಎಕರೆ ವಿಸ್ತೀರ್ಣ ಹೊಂದಿದೆ. ಬಳ್ಳಾರಿ ಜಾಲಿ ಸೇರಿದಂತೆ ಮುಳ್ಳು ಗಿಡಗಳು ಬೆಳೆದಿವೆ. ಈ ವರ್ಷ ಸರಿಯಾಗಿ ಮಳೆ ಬಾರದ ಕಾರಣ ಕೆರೆ ಒಣಗುತ್ತಿದೆ.

ಕೆರೆಯ ಪಕ್ಕದಲ್ಲಿಯೇ ಸಂತೆ ಮೈದಾನವಿದೆ. ಸೋಮವಾರ ನಡೆಯುವ ವಾರದ ಸಂತೆಯ ಮಾರನೇ ದಿನ ಸಂತೆ ಮೈದಾನದಲ್ಲಿ ಬಿದ್ದಿರುವ ಕಸ, ಸೊಪ್ಪು, ಕೊಳೆತ ತರಕಾರಿ ಮತ್ತಿತರ ತ್ಯಾಜ್ಯವನ್ನು ಕೆರೆಗೆ ಹಾಕಲಾಗುತ್ತಿದೆ.

ADVERTISEMENT

ಗ್ರಾಮದ ಬಹುತೇಕರು ತಮ್ಮ ಹಳೆಯ ಮನೆಗಳನ್ನು ಕೆಡವಿದಾಗ ಸಿಗುವ ಕಲ್ಲು, ಮಣ್ಣು, ಕರಿಹೆಂಚು, ಅಡಿಕೆ ಸಿಪ್ಪೆ ಮೊದಲಾದವುಗಳನ್ನು ಕೆರೆಗೆ ಹಾಕುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಪೌರಕಾರ್ಮಿಕರೂಗ್ರಾಮದಲ್ಲಿ ಸಂಗ್ರಹಿಸಿದ ಕಸವನ್ನು ಗ್ರಾಮದ ಹೊರವಲಯಕ್ಕೆ ಸಾಗಿಸದೆ ಕೆರೆಗೆ ತಂದು ಸುರಿಯುತ್ತಿದ್ದಾರೆ. ಇದರಿಂದಾ ಕೆರೆಯ ಪರಿಸರವೇ ಹಾಳಾಗಿದೆ ಎಂಬುದು ಗ್ರಾಮಸ್ಥರಾದ ಜಿ. ನಟರಾಜ್‌, ಗೋಪಾಲ್‌, ಧನಂಜಯ ಮೂರ್ತಿ ಅವರ ಆರೋಪ.

‘ಇದೇ ರೀತಿ ತ್ಯಾಜ್ಯವನ್ನು ಕೆರೆಗೆ ಹಾಕುತ್ತಿದ್ದರೆ ಕೆಲವೇ ವರ್ಷಗಳಲ್ಲಿ ಕೆರೆ ಮುಚ್ಚಿ ಕಣ್ಮರೆಯಾದರೂ ಆಶ್ಚರ್ಯವಿಲ್ಲ. ತ್ಯಾಜ್ಯದಿಂದ ಕೆರೆ ಹಾಳಾಗುತ್ತಿದ್ದರೂ ಗ್ರಾಮ ಪಂಚಾಯಿತಿಯವರಾಗಲಿ, ಗ್ರಾಮದ ಮುಖಂಡರಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆರೆಯ ಉಳಿವಿನ ಬಗ್ಗೆ ಕೆಲವರಿಗೆ ಆಸಕ್ತಿ ಇದೆಯಾದರೂ, ಅವರಿಗೆ ಕೈಜೋಡಿಸುವವರು ಇಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸೌಂದರ್ಯ ಹಾಳು ಮಾಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆಯ ಸುತ್ತಲಿನ ತ್ಯಾಜ್ಯ, ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು’ ಎಂದು ಸುನೀಲ್‌, ಈಶ್ವರಪ್ಪ, ಪ್ರಕಾಶ್‌, ರಾಜಪ್ಪ, ಸಿದ್ಧಣ್ಣ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.