ADVERTISEMENT

ನುಂಕಿಮಲೆಯಲ್ಲಿ ವೈಭವದ ನುಂಕಪ್ಪಸ್ವಾಮಿ ಸಿಡಿ ಮಹೋತ್ಸವ

ಹರಿದುಬಂದ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:48 IST
Last Updated 14 ಮೇ 2022, 2:48 IST
ನುಂಕಿಮಲೆ ಬೆಟ್ಟದಲ್ಲಿ ನುಂಕಪ್ಪಸ್ವಾಮಿ ಸಿಡಿ ಉತ್ಸವ ವೈಭವದಿಂದ ನಡೆಯಿತು ಚಿತ್ರ: ಕೊಂಡ್ಲಹಳ್ಳಿ ಜಯಪ್ರಕಾಶ
ನುಂಕಿಮಲೆ ಬೆಟ್ಟದಲ್ಲಿ ನುಂಕಪ್ಪಸ್ವಾಮಿ ಸಿಡಿ ಉತ್ಸವ ವೈಭವದಿಂದ ನಡೆಯಿತು ಚಿತ್ರ: ಕೊಂಡ್ಲಹಳ್ಳಿ ಜಯಪ್ರಕಾಶ   

ಮೊಳಕಾಲ್ಮುರು:ದಕ್ಷಿಣ ಕಾಶಿ ಎಂಬ ಖ್ಯಾತಿಯನ್ನು ಪಡೆದಿರುವ ಜತೆಗೆ ಜಿಲ್ಲೆಯ ಪ್ರಮುಖ ಸಿಡಿ ಮಹೋತ್ಸವವಾದ ತಾಲ್ಲೂಕಿನ ನುಂಕಿಮಲೆ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರಸಂಜೆ ನುಂಕಪ್ಪಸ್ವಾಮಿ ಸಿಡಿ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಿತು.

ಬುಡಕಟ್ಟು ಸಂಸ್ಕೃತಿಗಳ ಅನಾವರಣ ಜಾತ್ರೆ ಎಂಬ ಖ್ಯಾತಿಯನ್ನು ಪಡೆದಿರುವ ಈ ಜಾತ್ರೆಯು ಗಡಿಯಲ್ಲಿ ಕನ್ನಡಿಗರನ್ನು ಮತ್ತು ಆಂಧ್ರದ ಜನರನ್ನುಬೆಸೆಯುವ ಜಾತ್ರೆಯಾಗಿಯೂ ಗುರುತಿಸಿಕೊಂಡಿದೆ. ಸೀಮಾಂಧ್ರದಲ್ಲಿ ಸಹಸ್ರಾರು ಜನರು ನುಂಕಪ್ಪ ಸ್ವಾಮಿಯನ್ನು ಮನೆ ದೇವರಾಗಿ ನಡೆದುಕೊಳ್ಳುತ್ತಾರೆ.

ವಾಡಿಕೆಯಂತೆ ಪ್ರತಿವರ್ಷ ರಥೋತ್ಸವ, ಸಿಡಿಗೆ ಬಂದು ಹರಕೆ ಒಪ್ಪಿಸುವುದು ಪದ್ಧತಿಯಾಗಿದೆ.

ADVERTISEMENT

ಸಿಡಿ ಅಂಗವಾಗಿ ಮಧ್ಯಾಹ್ನದಿಂದ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನುಂಕಿಮಲೆ ಪೀಠಾಧಿಪತಿ ಮಂಗಲ್ ನಾಥ್ ಸ್ವಾಮೀಜಿನೇತೃತ್ವದಲ್ಲಿ ನಡೆಸಲಾಯಿತು.

ನಂತರ ಸಿಡಿ ಕಂಬಕ್ಕೆ ಪೂಜೆ, ಅಲಂಕಾರ ಮಾಡಲಾಯಿತು. ಸಿಡಿಗೂ ಮುನ್ನ ನುಂಕಪ್ಪಸ್ವಾಮಿ ಉತ್ಸವ ಮೂರ್ತಿಯನ್ನುತಮಟೆ ವಾದ್ಯ, ಚಾಮರದೊಂದಿಗೆ ಮೆರವಣಿಗೆಯಲ್ಲಿ ತಂದು ಪೂಜೆ ಸಲ್ಲಿಸಿ ಸಿಡಿ ಕಂಬದ ಮುಂದೆ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಸಿಡಿ ಆಡುವವ್ಯಕ್ತಿಯನ್ನು ಮೆರವಣಿಗೆಯಲ್ಲಿ ಬುಡಕಟ್ಟು ಸಂಪ್ರದಾಯಗಳೊಂದಿಗೆ ಕರೆತಂದು ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.

ಸಮೀಪದ ಕೊಮ್ಮನಪಟ್ಟಿ ಗ್ರಾಮದ ನಾಯಕ ಜನಾಂಗದ ಮಾರಣ್ಣ ಎಂಬುವವರು ಸಿಡಿ ಆಡಿದರು. ಪ್ರತಿ ಬಾರಿ ಮೂರು ಸುತ್ತಿನಂತೆ ಒಟ್ಟು ಮೂರು ಬಾರಿಸಿಡಿ ಆಡಿಸಲಾಯಿತು. ಬಳಿಕ ಖಾಲಿ ಕಂಬವನ್ನು ಮೂರು ಬಾರಿ ಸುತ್ತಿಸುವ ಮೂಲಕಉತ್ಸವವಕ್ಕೆ ತೆರೆ ಎಳೆಯಲಾಯಿತು.

ಸಿಡಿಗೂ ಮುನ್ನ ದೇವಸ್ಥಾನ ಎದುರು ಇರುವ ಬೆಟ್ಟದ ತುತ್ತ ತುದಿಯಲ್ಲಿನ ದೀಪಸ್ಥಂಬದ ದೀಪ ಹಚ್ಚಲಾಯಿತು. ನಂತರ ಬಾವುಟ ತೋರಿಸಿ ನಿಶಾನೆ ನೀಡಿದ ನಂತರ ಸಿಡಿ ಆಡಲಾಯಿತು. ಹಿಂದೆ ಅರಸರ ಆಳ್ವಿಕೆಯಲ್ಲಿ ಚಿತ್ರದುರ್ಗದಲ್ಲಿ ರಾಜರು ಈ ದೀಪವನ್ನು ನೋಡಿ ಸಿಡಿ ದಿನದ ಉಪವಾಸ ಮುಕ್ತಾಯಮಾಡುತ್ತಿದ್ದರು ಎಂಬ ಐತಿಹ್ಯವಿದೆ.

ಎರಡು ವರ್ಷ ಕೋವಿಡ್ ಕಾರಣ ಜಾತ್ರೆ ನಡೆದಿರಲಿಲ್ಲ.ಜತೆಗೆ ಈ ಸಾರಿ ನೂತನ ರಥ ಮಾಡಿಸಿರುವ ಕಾರಣ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಬೆಟ್ಟಕ್ಕೆ ಬಂದ ವಾಹನಗಳನ್ನು ಕಳಿಸಲು ಪೊಲೀಸರು ಹರಸಾಹರ ಪಟ್ಟರು.ಶನಿವಾರ ಸಿದ್ಧಬುಕ್ತಿ ಮೂಲಕ ಜಾತ್ರೆಗೆ ತೆರೆಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.