ADVERTISEMENT

ಚಿತ್ರದುರ್ಗ: ಸಹಕಾರದಿಂದ ಉತ್ತಮ ರಾಷ್ಟ್ರ ನಿರ್ಮಾಣ: ಶಿವಮೂರ್ತಿ ಶರಣರು

ಶ್ರಾವಣ ದರ್ಶನ ಫೇಸ್‌ಬುಕ್‌ ಲೈವ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 15:01 IST
Last Updated 29 ಜುಲೈ 2020, 15:01 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಅಸಮಾನತೆ ಇಲ್ಲದೆಯೇ ಸಾಮರಸ್ಯದೊಂದಿಗೆ ಉತ್ತಮ ರಾಷ್ಟ್ರ ನಿರ್ಮಿಸಲು ಪ್ರತಿಯೊಬ್ಬರ ಸಹಕಾರ ತುಂಬಾ ಅಗತ್ಯ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಮುರುಘಾಮಠದಿಂದ ನಡೆಯುತ್ತಿರುವ ‘ಶ್ರಾವಣ ದರ್ಶನ’ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದಾರ ಮನೋಭಾವ ಇರುವಲ್ಲಿ ಉದ್ಧಾರ ಸಾಧ್ಯ. ಇದು ದೇಶದ ಪ್ರಗತಿಗೂ ನಾಂದಿ. ಅದಕ್ಕಾಗಿ ಇಂತಹ ಉತ್ತಮ ಗುಣ ಅಳವಡಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ಅನರ್ಥ ಮತ್ತು ಅಪಾರ್ಥ ಇರುವಲ್ಲಿ ಅಪಹಾಸ್ಯ ಇರುತ್ತದೆ. ನಾವು ಅಪಹಾಸ್ಯದ ವಸ್ತುವಾಗಬಾರದು. ಹಾಸ್ಯವನ್ನು ಅನುಭವಿಸುತ್ತ ಬದುಕನ್ನು ಸಾಗಿಸಬೇಕು. ಸಮಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು. ಇದರಿಂದ ಸಮೃದ್ಧ ದೇಶ ನಿರ್ಮಾಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಅರಳುವಿಕೆ ಇರುವಲ್ಲಿ ಅಂತಃಕರಣ ಇರುತ್ತದೆ. ಇವೆರಡರ ನಡುವೆ ಅವಿನಾಭಾವ ಸಂಬಂಧ ಇದೆ. ಕೆಲವರು ಅರ್ಥಕ್ಕಿಂತಲೂ ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಇದರಿಂದ ಅನರ್ಥವಾಗುತ್ತದೆ. ಆದ್ದರಿಂದ ಸರಿಯಾಗಿ ಅರ್ಥೈಸಿಕೊಂಡಾಗ ಬದುಕು ಸರಿ ಮಾರ್ಗದಲ್ಲಿ ಮುನ್ನಡೆಯುತ್ತದೆ’ ಎಂದರು.

‘ಯಾರು ಸದಾ ಕ್ರಿಯಾಶೀಲರಾಗಿ ಇರುತ್ತಾರೋ ಅವರು ಆಶಾವಾದಿಯಾಗಿ ಇರುತ್ತಾರೆ. ಇದರಿಂದ ಶಕ್ತಿಶಾಲಿಯಾಗಿ ಬೆಳೆಯಲು, ಗುರಿ ತಲುಪಲು ಸಹಕಾರಿ. ನಿರಂತರ ಉತ್ಸಾಹ ಇದ್ದಲ್ಲಿ ಜೀವನವೆಲ್ಲ ನವೋಲ್ಲಾಸದಿಂದ ಕೂಡಿರುತ್ತದೆ. ದರಿದ್ರತನ, ಜಡತ್ವದಿಂದ ಎದ್ದು ಬಂದಾಗ ಸಾಧನೆಯತ್ತ ದಾಪುಗಾಲಿಡಬಹುದು. ಜತೆಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ’ ಎಂದು ಹೇಳಿದರು.

‘ಸಂಸಾರದ ಸಾಮರಸ್ಯವೇ ಸ್ವಾರಸ್ಯ. ಹೊಂದಾಣಿಕೆ ಬದುಕಿಗೆ ಅತ್ಯಗತ್ಯವಾಗಿದ್ದು, ಇದು ಬಾಂಧವ್ಯದ ಬೆಸುಗೆ ಆಗಲಿದೆ. ಕ್ಷುಲ್ಲಕ ಕಾರಣಕ್ಕೆ ಬಾಂಧವ್ಯ ಹಾಳು ಮಾಡಿಕೊಳ್ಳಬೇಡಿ. ಸೇತುವೆ, ಅಣೆಕಟ್ಟು ಮಾತ್ರ ಬಿರುಕು ಬಿಡುವುದಿಲ್ಲ. ಮಾನವನ ಬದುಕಿನಲ್ಲೂ ಬಾಂಧವ್ಯದ ಬಿಕ್ಕಟ್ಟು ಉಂಟಾಗುತ್ತದೆ. ಅದು ಬಿಟ್ಟುಹೋಗದಂತೆ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.