ADVERTISEMENT

ರಾಜಕೀಯ, ಧಾರ್ಮಿಕ ಕ್ಷೇತ್ರ ಕಲುಷಿತ

ಸಾಹಿತಿ ಗೊ.ರು.ಚನ್ನಬಸಪ್ಪ ಬೇಸರ – ‘ಗೊರುಚ ದತ್ತಿ ನಿಧಿ’ 2021 ರ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಮೇ 2022, 12:28 IST
Last Updated 18 ಮೇ 2022, 12:28 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಬುಧವಾರ ಆಯೋಜಿಸಿದ್ದ ‘ಗೊರುಚ ದತ್ತಿ ನಿಧಿ’ 2021 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. ಸಾಹಿತಿ ಡಾ.ಗೊ.ರು.ಚನ್ನಬಸಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಇತರರಿದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಬುಧವಾರ ಆಯೋಜಿಸಿದ್ದ ‘ಗೊರುಚ ದತ್ತಿ ನಿಧಿ’ 2021 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. ಸಾಹಿತಿ ಡಾ.ಗೊ.ರು.ಚನ್ನಬಸಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಇತರರಿದ್ದಾರೆ.   

ಚಿತ್ರದುರ್ಗ: ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ಥೆಯಿಂದ ಪುರೋಹಿತಶಾಯಿತ್ವದ ಯುಗ ಸೃಷ್ಟಿಯಾಗಿ ಅನಿಷ್ಟ ಪದ್ಧತಿಗಳು ವಿರಾಟ್‌ ಸ್ವರೂಪ ಪಡೆದಿವೆ. ಇವುಗಳಿಂದ ದೇಶ ಉದ್ಧಾರ ಸಾಧ್ಯವಿಲ್ಲ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರ ಡಾ.ಗೊ.ರು.ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಬುಧವಾರ ಆಯೋಜಿಸಿದ್ದ ‘ಗೊರುಚ ದತ್ತಿ ನಿಧಿ’ 2021 ರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಕಲುಷಿತಗೊಂಡಿವೆ. ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಸರ್ವರು ಕೆಲಸ ಮಾಡುವ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದರು.

ADVERTISEMENT

‘ವಚನ ಮತ್ತು ಜನಪದ ಸಾಹಿತ್ಯ ಮನಸ್ಸಿನಿಂದ ಸೃಷ್ಟಿಯಾಗಿವೆಯೇ ಹೊರತು ಜನಮನ್ನಣೆಗೆ ಅಲ್ಲ. ಇವುಗಳಿಂದ ಜನಪರಿವರ್ತನೆಯನ್ನು ಕಾಣಬಹುದಾಗಿದೆ’ ಎಂದು ಹೇಳಿದರು.

‘ಗ್ರಾಮೀಣರ ಶ್ರಮದಿಂದಾಗಿ ಸ್ವಾತಂತ್ರ್ಯ ನಂತರ ದೇಶದ ಬೆಳವಣಿಗೆ ಆಗಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯ ಹಿಂದೆ ಹಳ್ಳಿಗಳ ನೆರಳಿದೆ. ಆದರೆ, ಪ್ರಸಕ್ತ ದಿನಮಾನದಲ್ಲಿ ಈ ನೆಲವನ್ನು ಮರೆಯುತ್ತಿದ್ದಾರೆ. ಆ ಕಾರಣಕ್ಕೆ ಸಮಾನಮನಸ್ಕರು ಸೇರಿ ‘ಗ್ರಾಮ ಭಾರತ ಪ್ರತಿಷ್ಠಾನ’ ಸ್ಥಾಪಿಸಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ’ ಎಂದರು.

‘ಪ್ರತಿ ಕ್ಷೇತ್ರದ ಸಾಧಕರು ಗ್ರಾಮೀಣ ನೆಲದವರಾಗಿದ್ದಾರೆ. ಆದರೆ ಅಲ್ಲಿನ ಜನರು ಮಾತ್ರ ಅವಕಾಶಗಳಿಂದ ವಂಚಿತರಾಗಿದ್ದಾರೆ. ತಾವು ಹುಟ್ಟಿದ ಹಳ್ಳಿಗೆ ಕೈಲಾದ ಸೇವೆಯನ್ನು ಮಾಡಿದರೆ ಸಾಕು, ಇವರುಗಳ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಪ್ರತಿಷ್ಠಾನದಿಂದ ಸಭೆ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಸಂವೇದನೆಯ ಸ್ಪರ್ಶ ಸಾಹಿತ್ಯದ ಮೂಲ ದ್ರವ್ಯವಾಗಬೇಕು. ಆಗ ಮಾತ್ರ ಓದುಗರು, ಜನಸಾಮಾನ್ಯರಿಗೆ ಪ್ರೇರಣೆಯಾಗಿ, ಸ್ಫೂರ್ತಿ ತುಂಬುತ್ತವೆ. ಇಲ್ಲವಾದರೆ ಆರೋಗ್ಯ ಪೂರ್ಣ ಬದುಕು ಕಟ್ಟಿಕೊಡಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

‘ವಚನ ಮತ್ತು ಶರಣ ಸಾಹಿತ್ಯಗಳು ಸಾಹಿತ್ಯಕ್ಕಾಗಿ ಸಾಹಿತ್ಯ ಅಲ್ಲ. ಸಂವೇದನೆಯ ಬುನಾದಿ ಮೇಲೆ ರಚಿತವಾಗಿರುವ ಶರಣರ ವಚನಗಳಿಗೆ ಎಂದಿಗೂ ಸಾವಿಲ್ಲ. ಇವುಗಳ ಅಧ್ಯಯನದ ಜತೆ ಅನುಷ್ಠಾನವು ಆಗಬೇಕು. ಆಗ ಮಾತ್ರ ವಿಶಾಲವಾದ ಸ್ಪಷ್ಟತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಜಿ.ಎ.ಶಿವಲಿಂಗಯ್ಯ ಅವರಿಗೆ ಶರಣ ಪ್ರಶಸ್ತಿ, ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಜೀನಹಳ್ಳಿ ಸಿದ್ದಲಿಂಗಪ್ಪ ಅವರಿಗೆ ಜಾನಪದ ಪ್ರಶಸ್ತಿ, ಉಪನ್ಯಾಸಕ ಡಾ.ಎನ್‌.ಎನ್‌.ಚಿಕ್ಕಮಾದು ಅವರಿಗೆ ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ ಹಾಗೂ ಭದ್ರಾವತಿಯ ನಿವೃತ್ತ ಪ್ರಾಧ್ಯಾಪಕಿ ಡಾ.ವಿಜಯದೇವಿ ಅವರಿಗೆ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಡಾ.ಲೋಕೇಶ್‌ ಅಗಸನಕಟ್ಟೆ ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನ ನುಡಿಗಳನ್ನಾಡಿದರು. ಅಖಲಿ ಭಾರತ ಶರಣ ಸಾಹಿತ್ಯ ಪರಿಷತ್‌ ಹಿರಿಯ ಉಪಾಧ್ಯಕ್ಷ ಅಪ್ಪಾರವಾ ಅಕ್ಕೋಣೆ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್‌, ಪ್ರಧಾನ ಕಾರ್ಯದರ್ಶಿ ಎಸ್‌.ಬಿ.ಅಂಗಡಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಇದ್ದರು.

***

ಸಾಹಿತ್ಯ ಬದುಕಿನ ಒಂದು ಭಾಗ ಎಂದು ತಿಳಿದಿರುವ ಗೊರುಚ ಅವರಿಗೆ ಶರಣ ಸಾಹಿತ್ಯ, ಜಾನಪದ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಇಂತಹ ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ಪಡೆದವರು ಸೌಭಾಗ್ಯವಂತರು.

ಡಾ.ಲೋಕೇಶ್‌ ಅಗಸನಕಟ್ಟೆ, ಸಾಹಿತಿ

***

ಶರಣ ಸಾಹಿತ್ಯವನ್ನು ಪ್ರತಿಯೊಬ್ಬರು ಅಧ್ಯಯನ ನಡೆಸಿ ಅದರಂತೆ ಸಾಗಿದರೆ ಆದರ್ಶ ಜೀವನ ನಡೆಸಬಹುದು. ಗೊರುಚ ಅವರ ದತ್ತಿ ನಿಧಿ ಸ್ಥಾಪನೆ ನಿಜಕ್ಕೂ ಉತ್ತಮ ಕಾರ್ಯ.

ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.