ADVERTISEMENT

ಸರ್ಕಾರದ ಹಸ್ತಕ್ಷೇಪ ಕಡಿಮೆ ಆಗಬೇಕು

ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 13:07 IST
Last Updated 30 ಜೂನ್ 2018, 13:07 IST
ಚಿತ್ರದುರ್ಗದ ಪ್ರಾದೇಶಿಕ ಎಣ್ಣೆಬೀಜ ಒಕ್ಕೂಟದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರನ್ನು ಸನ್ಮಾನಿಸಲಾಯಿತು
ಚಿತ್ರದುರ್ಗದ ಪ್ರಾದೇಶಿಕ ಎಣ್ಣೆಬೀಜ ಒಕ್ಕೂಟದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರನ್ನು ಸನ್ಮಾನಿಸಲಾಯಿತು   

ಚಿತ್ರದುರ್ಗ: ಸಹಕಾರಿ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆ ಆಗಬೇಕು ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಮನವಿ ಮಾಡಿದರು.

ಇಲ್ಲಿನ ಪ್ರಾದೇಶಿಕ ಎಣ್ಣೆಬೀಜ ಒಕ್ಕೂಟದ ಆವರಣದಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.‘ಶೇ 10ರಷ್ಟು ಸೊಸೈಟಿಗಳ ಕೆಲಸದಿಂದ ಎಲ್ಲ ಸಹಕಾರಿ ಸಂಸ್ಥೆಗಳನ್ನು ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿದೆ. ಸಹಕಾರಿ ಸಂಸ್ಥೆಗಳು ಸೇವೆಗೆ ಸೀಮಿತವಾದರೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಲಾಭವೂ ಮುಖ್ಯವಾಗಿದ್ದು, ವೃತ್ತಿಪರರು ಸಂಸ್ಥೆಯಲ್ಲಿ ಕೆಲಸ ಮಾಡಬೇಕು' ಎಂದರು.

‘ಜಾಗತೀಕರಣದ ಪರಿಣಾಮ ಎಲ್ಲ ಕ್ಷೇತ್ರದಲ್ಲಿ ಸ್ಫರ್ಧೆ ಇದೆ. ಸಹಕಾರಿ ಸಂಸ್ಥೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಒಡ್ಡಿಕೊಳ್ಳಬೇಕು. ಸ್ವಾವಲಂಬಿಯಾಗಿ ಬೆಳೆದಾಗ ಮಾತ್ರ ಸಹಕಾರಿ ಸಂಸ್ಥೆಗಳ ಉದ್ದೇಶವೂ ಈಡೇರುತ್ತದೆ. ರೈತರಿಗೂ ಉಪಕಾರ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪ್ರಾದೇಶಿಕ ಎಣ್ಣೆಬೀಜ ಒಕ್ಕೂಟವನ್ನು ಕಷ್ಟಪಟ್ಟು ಕಟ್ಟಲಾಗಿದೆ. ನಿರ್ದೇಶಕರು, ರೈತರು, ಅಧಿಕಾರಿಗಳ ಶ್ರಮದ ಫಲವಾಗಿ ಸ್ವಾವಲಂಬಿಯಾಗಿದೆ. ಕೇಂದ್ರ ಸರ್ಕಾರ ನೀಡಿದ ಸಾಲ ಮಾತ್ರ ಬಾಕಿ ಇದೆ. ಸಾಲಕ್ಕಿಂತ ಬಡ್ಡಿ ಹೆಚ್ಚಾಗಿದ್ದು, ಈ ಹೊರೆ ತಗ್ಗಿಸುವಂತೆ ಸರ್ಕಾರವನ್ನು ಕೋರಿಕೊಂಡಿದ್ದೇವೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ’ ಎಂದು ಹೇಳಿದರು.

‘ಹೊಸಪೇಟೆಯಲ್ಲಿದ್ದ ಒಕ್ಕೂಟ ಚಿತ್ರದುರ್ಗದಲ್ಲಿ ಬೆಳೆಯಿತು. ಕ್ಷೀರ ಕ್ರಾಂತಿಯ ಹರಿಕಾರ ಡಾ. ವರ್ಗೀಸ್‌ ಕುರಿಯನ್‌ ಅವರು ‘ಸಫಲ್‌’ ಬ್ರಾಂಡ್‌ ನೀಡುವಂತೆ ಕೋರಿದ್ದರು. ಬ್ರಾಂಡ್‌ ನೀಡಿದರೆ ಒಕ್ಕೂಟದ ಸಾಲ ತೀರಿಸುವ ಭರವಸೆ ಕೊಟ್ಟಿದ್ದರು. ಹಣ್ಣು ಮತ್ತು ತರಕಾರಿಗೆ ಮಾತ್ರ ಬ್ರಾಂಡ್‌ ಬಳಸಿಕೊಳ್ಳಲು ಅವಕಾಶ ನೀಡಿದೆವು. ಆದರೆ, ಅಡುಗೆ ಎಣ್ಣೆಗೆ ಈ ಬ್ರಾಂಡ್‌ ಬಿಟ್ಟುಕೊಡಲಿಲ್ಲ. ‘ಸಫಲ್’ ಅಡುಗೆ ಎಣ್ಣೆಗೆ ಈಗ ಅಂತರರಾ‌ಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ’ ಎಂದರು.

‘ಎಣ್ಣೆಬೀಜ ಒಕ್ಕೂಟವು ರೈತರಿಗೆ ಡಿವಿಡೆಂಟ್‌ ನೀಡುವ ಮಟ್ಟಕ್ಕೆ ಬೆಳೆಯಬೇಕು. ಶ್ರಮವಹಿಸಿ ಕಟ್ಟಿದ ಸಂಸ್ಥೆಯ ಜೊತೆಗೆ ಇರುತ್ತೇನೆ’ ಎಂದು ಆಶ್ವಾಸನೆ ನೀಡಿದರು.

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ‘ಮೀನುಗಾರಿಕೆ ಖಾತೆ ಕರಾವಳಿ ಭಾಗದವರ ಪಾಲಾಗುತ್ತಿತ್ತು. ಈ ಬಾರಿ ಹೈದರಾಬಾದ್‌ ಕರ್ನಾಟಕದ ನಾಡಗೌಡ ಅವರಿಗೆ ಸಿಕ್ಕಿದೆ. ಮೀನುಗಾರಿಕೆಯನ್ನು ಉಪಕಸುಬಾಗಿಸಿಕೊಂಡವರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಬಿ.ಹನುಮಂತರಾಯಪ್ಪ, ಉಪಾಧ್ಯಕ್ಷ ಎಂ.ಸಿ.ಚಂದ್ರಯ್ಯ, ವ್ಯವಸ್ಥಾಪಕ ನಿರ್ದೇಶಕ ಜೆ.ರಮಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.