ADVERTISEMENT

ಸಿರಿಗೆರೆ | ಬರದ ನಾಡಿನ ಹಣೆಪಟ್ಟಿ ಅಳಿಸಲು ನಮ್ಮ ಪಯಣ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 6:16 IST
Last Updated 3 ಮಾರ್ಚ್ 2026, 6:16 IST
ಸಿರಿಗೆರೆ ಸಮೀಪದ ವಿಜಾಪುರ ಮತ್ತು ಬಳ್ಳೆಕಟ್ಟೆ ಗ್ರಾಮಗಳಲ್ಲಿ ಸಂಸದ ಗೋವಿಂದ ಕಾರಜೋಳ ಜಲ ಅರ್ಪಣ ದಿನದ ಅಂಗವಾಗಿ ಪ್ರತಿ ಮನೆಗೆ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಿದರು
ಸಿರಿಗೆರೆ ಸಮೀಪದ ವಿಜಾಪುರ ಮತ್ತು ಬಳ್ಳೆಕಟ್ಟೆ ಗ್ರಾಮಗಳಲ್ಲಿ ಸಂಸದ ಗೋವಿಂದ ಕಾರಜೋಳ ಜಲ ಅರ್ಪಣ ದಿನದ ಅಂಗವಾಗಿ ಪ್ರತಿ ಮನೆಗೆ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಿದರು   

ಸಿರಿಗೆರೆ: ‘ತಲೆ ತಲಾಂತರದಿಂದ ಬರದ ನಾಡಿನ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯನ್ನು ಸಮೃದ್ಧಗೊಳಿಸುವ ಕಡೆಗೆ ನಮ್ಮ ಪಯಣ ಆರಂಭವಾಗಿದೆ. ಇದರಲ್ಲಿ ಜನಪ್ರತಿನಿಧಿಗಳಿಗಿರುವ ಹೊಣೆಗಾರಿಯಂತೆ ಸಾರ್ವಜನಿಕರ ಜವಾಬ್ದಾರಿಯೂ ಇದೆ’ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಸಮೀಪದ ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಾಪುರ ಹಾಗೂ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಬಳ್ಳೆಕಟ್ಟೆ ಗ್ರಾಮಗಳಲ್ಲಿ ಸೋಮವಾರ ನಡೆದ ‘ಜಲ ಅರ್ಪಣ’ ದಿನಾಚರಣೆಯಲ್ಲಿ ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ತಾಯಂದಿರು ಮತ್ತು ಸೋದರಿಯರು ಮೈಲಿಗಟ್ಟಲೆ ಹೋಗಿ ದೂರದ ಬಾವಿಗಳಿಂದ, ಹಳ್ಳಗಳಿಂದ, ನದಿಗಳಿಂದ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಇತ್ತು. ಆ ಕಷ್ಟ ನೀಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜಲಜೀವನ್ ಮಿಷನ್‌ ಯೋಜನೆ ಜಾರಿಗೆ ತಂದರು. ದಿನದ 24 ಗಂಟೆಯೂ ಮನೆಗಳಿಗೆ ನೀರು ಕೊಡುವ ವ್ಯವಸ್ಥಿತ ಯೋಜನೆ ಇದಾಗಿದೆ’ ಎಂದರು.

ADVERTISEMENT

‘ಜನರು ನೀರಿನ ಬಗ್ಗೆ ಅತ್ಯಂತ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ನೀರು ಅಮೂಲ್ಯವಾದದು. ಅದನ್ನು ಹೊಣೆಗಾರಿಕೆಯಿಂದ ಬಳಸಿ, ಮುಂದಿನ ಪೀಳಿಗೆಗೆ ಉಳಿಸಬೇಕು. ರೈತ ಸಮುದಾಯ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಶಕಗಳ ಸವಾಲಾಗಿತ್ತು. ಇಂದು ಚಿತ್ರದುರ್ಗ ಜಿಲ್ಲೆಯ ಸಾವಿರಾರು ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಲ್ಲಿ ಮೂಲಕ ಕುಡಿಯುವ ನೀರು ಸಂಪರ್ಕ ಒದಗಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಅಂದಾಜು ₹ 940 ಕೋಟಿ ಅನುದಾನದಲ್ಲಿ 1,559 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಈಗಾಗಲೇ ₹ 504 ಕೋಟಿಯಷ್ಟು ಅನುದಾನವನ್ನು ಖರ್ಚು ಮಾಡಿ 1,083 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಹೇಳದರು.

ಚಿತ್ರದುರ್ಗ ತಾಲ್ಲೂಕಿನ ಗ್ರಾಮಾಂತರ ಭಾಗಕ್ಕೆ 271 ಕಾಮಗಾರಿಗಳಿಗೆ ₹ 189.00 ಕೋಟಿ ಅನುದಾನ ಬಳಸಲಾಗಿದೆ. ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದನ್ನು ಉಳಿಸುವ ಹೊಣೆಗಾರಿಕೆ ಗ್ರಾಮಸ್ಥರಾದ ನಿಮ್ಮ ಕೈಯ್ಯಲಿದೆ, ನೀರನ್ನು ಅಮೂಲ್ಯವಾಗಿ ಮತ್ತು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ, ಗ್ರಾಮ ಪಂಚಾಯತಿಗಳು ಮತ್ತು ಸ್ವ-ಸಹಾಯ ಸಂಘಗಳು ಈ ಯೋಜನೆಗಳ ಸುಸ್ಥಿರತೆಯನ್ನು ನೋಡಿಕೊಳ್ಳಬೇಕು, ಅಂತರ್ಜಲ ಹೆಚ್ಚಿಸಲು ಮಳೆ ನೀರು ಕೊಯ್ದು ಮತ್ತು ಕೆರೆಗಳ ಪುನ ತನಕ್ಕೂ ನಾವು ಒತ್ತು ನೀಡಬೇಕಿದೆ ಎಂದರು.

ಕಾರ್ಯಕ್ರಮಕ್ಕೂ ಮುಂಚೆ ಸಂಸದರನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು, ಸಾಂಕೇತಿಕವಾಗಿ ನಲ್ಲಿ ತಿರುಗಿಸುವ ಮೂಲಕ ಜಲ ಅರ್ಪಣಾ ದಿವಸ್ ಕಾರ್ಯಕ್ರಮಕ್ಕೆ ಸಂಸದರು ಚಾಲನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅಮರನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಮುಖಂಡ ಹನುಮಂತೇಗೌಡ್ರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.